Advertisement

ಕುವೆಂಪು ಸಂಚಾರ ಗ್ರಂಥಾಲಯಕ್ಕೆ ಉತ್ತಮ ಸ್ಪಂದನೆ

04:29 PM Aug 14, 2021 | Team Udayavani |

ಮೈಸೂರು: ಕೋವಿಡ್‌ ಎರಡನೇ ಅಲೆ ನಡುವೆಯೂ ನಗರ ಕೇಂದ್ರ ಗ್ರಂಥಾಲಯದ “ಕುವೆಂಪು ಸಂಚಾರ ಗ್ರಂಥಾಲಯ’ (ಮೊಬೈಲ್‌ ಲೈಬ್ರರಿ)ಕ್ಕೆ ಪುಸ್ತಕ ಪ್ರೇಮಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಇದರಲ್ಲಿ ಮಹಿಳೆಯರೇ ಹೆಚ್ಚು ಸದಸ್ಯತ್ವ ಹೊಂದಿರುವುದು ಗಮನಾರ್ಹ.

Advertisement

ಕೋವಿಡ್‌ ಲಾಕ್‌ಡೌನ್‌ ನಂತರ ಪುಸ್ತಕ ಪ್ರೇಮಿಗಳು ಗ್ರಂಥಾಲಯಗಳತ್ತ ಮುಖ ಮಾಡುವುದನ್ನು ಕಡಿಮೆ ಮಾಡಿ, ಬಡಾವಣೆಗಳಿಗೆ ಬರುತ್ತಿರುವ ಮೊಬೈಲ್‌ ಲೈಬ್ರರಿಯತ್ತ ವಾಲಿದ್ದಾರೆ. ಈ ಮೊಬೈಲ್‌ ಲೈಬ್ರರಿಗೆ ಗೃಹಿಣಿಯರೆ ಹೆಚ್ಚಾಗಿ ಸದಸ್ಯತ್ವ ಪಡೆದುಕೊಂಡು ಪುಸ್ತಕಗಳನ್ನುಎರವಲು ಪಡೆದುಕೊಳ್ಳುತ್ತಿದ್ದಾರೆ.

ಗ್ರಂಥಾಲಯ ಸೇವೆಯಿಂದ ವಂಚಿತರಾಗಿರುವ ಸಾಂಸ್ಕೃತಿಕ ನಗರಿಯ ಪುಸ್ತಕ ಪ್ರೇಮಿಗಳಿಗೆ ಅವರ ಮನೆ ಬಾಗಿಲಿಗೆ ಗ್ರಂಥಾಲಯ ಸೇವೆ ಒದಗಿಸುವ ಸಲುವಾಗಿ ನಗರ ಕೇಂದ್ರ ಗ್ರಂಥಾಲಯ 2015ರಲ್ಲಿ ಸಂಚಾರಿ ಗ್ರಂಥಾಲಯ ವ್ಯವಸ್ಥೆ ಜಾರಿಗೆ ತಂದಿತು. ಆರಂಭದಲ್ಲಿ 50 ರಿಂದ 60 ಜನರು ಮಾತ್ರ ಸದಸ್ಯತ್ವ ಪಡೆದಿದ್ದರು. ಈಗ ಸದಸ್ಯತ್ವ ಸಂಖ್ಯೆ 800ಕ್ಕೂ ಹೆಚ್ಚಿದೆ.

ಕೋವಿಡ್‌ ಎರಡನೇ ಅಲೆ ಲಾಕ್‌ಡೌನ್‌ ನಂತರ 100ಕ್ಕೂ ಹೆಚ್ಚು ಜನ ಸದಸ್ಯತ್ವ ಪಡೆದಿರುವುದು ವಿಶೇಷ. ಎರಡನೇ ಅಲೆಯ ಲಾಕ್‌ಡೌನ್‌ ನಿಂದಾಗಿ ಏಪ್ರಿಲ್‌ ಮೂರನೇ ವಾರದಿಂದ ತಾತ್ಕಾಲಿಕವಾಗಿ ನಗರದ ಎಲ್ಲ ಗ್ರಂಥಾಲಯಗಳು, ಮೊಬೈಲ್‌ ಲೈಬ್ರರಿ ಸೇವೆಯನ್ನು ಬಂದ್‌ ಮಾಡಲಾಗಿತ್ತು. ಮತ್ತೆ ಜುಲೈ ಮೊದಲನೇ ವಾರದಿಂದ ಸಂಚಾರಿ ಗ್ರಂಥಾಲಯ ಸೇವೆ ಪ್ರಾರಂಭಿಸಲಾಗಿದ್ದು, ಜನರೂ ಸಹ ಸದ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ.

ಇದನ್ನೂ ಓದಿ:ಎಲ್ಲಿಯವರೆಗೆ ಬಿಜೆಪಿ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ಮಹಿಳೆಯರಿಗೆ ರಕ್ಷಣೆ ಇಲ್ಲ

Advertisement

ಎರಡು ವರ್ಷದ ಹಿಂದೆ ನಿತ್ಯ 20ರಿಂದ 30 ಪುಸ್ತಕಗಳನ್ನು ಎರವಲು ಪಡೆದುಕೊಳ್ಳುತ್ತಿದ್ದರು. ಆದರೆ ಇಂದು ಎರವಲು ಪಡೆದುಕೊಳ್ಳುವವರ ಸಂಖ್ಯೆ ಹೆಚ್ಚುವುದರ ಜೊತೆಗೆ ಪುಸ್ತಕಗಳ ಸಂಖ್ಯೆ 100ರ ಗಡಿ ದಾಟಿದ್ದು, ಸದಸ್ಯತ್ವಕ್ಕಾಗಿ ಇನ್ನೂಅನೇಕರು ಅರ್ಜಿ ಸಲ್ಲಿಸಿದ್ದಾರೆ. ಗ್ರಂಥಾಲಯಗಳಿಲ್ಲದ ವಾರ್ಡ್‌ಗಳಲ್ಲಿ ಮೊಬೈಲ್‌ ಲೈಬ್ರರಿ ವಾರದಲ್ಲಿ ಒಂದು ದಿನ ಸೇವೆ ನೀಡಲಿದ್ದು, ಕಾವ್ಯ, ಕಥಾ ಸಂಕಲನ, ಇತಿಹಾಸ, ಸಾಹಿತ್ಯ, ಮಕ್ಕಳ ಸಾಹಿತ್ಯ ಸೇರಿದಂತೆ ಸುಮಾರು 10 ಸಾವಿರ ಪುಸ್ತಕಗಳನ್ನು ಒಳಗೊಂಡಿದೆ. ವಾಹನದಲ್ಲಿ ಒಬ್ಬ ಚಾಲಕ ಮತ್ತು ಗ್ರಂಥ ಸಹಾಯಕ ಕಾರ್ಯನಿರ್ವಹಿಸುತ್ತಿದ್ದು, ಪುಸ್ತಕ ಎರವಲು ನೀಡುವ ತರಬೇತಿಯನ್ನು ಚಾಲಕನಿಗೂ ನೀಡಲಾಗಿದೆ.

ತಮಗಿಷ್ಟವಾದ ಪುಸ್ತಕವನ್ನು ನೋಡಿ ಆಯ್ಕೆ ಮಾಡಿಕೊಳ್ಳುವ ವ್ಯವಸ್ಥೆಯನ್ನು ವಾಹನದಲ್ಲೇ ಮಾಡಿದ್ದು, ವಾಹನದಲ್ಲೇ ಕುಡಿಯುವ
ನೀರಿನ ವ್ಯವಸ್ಥೆ, ಕುಳಿತು ಪುಸ್ತಕ ನೋಡಲು ಆಸನ ವ್ಯವಸ್ಥೆ ಮಾಡಲಾಗಿದೆ. ಸಂಚಾರಿ ಗ್ರಂಥಾಲಯದಲ್ಲಿ ಎರವಲು ಪಡೆದ ಪುಸ್ತಕಗಳನ್ನು 15 ದಿನದೊಳಗೆ ಹಿಂದಿರುಸುವಂತೆ ನಿಬಂಧನೆ ಹಾಕಿದ್ದು, ಒಂದು ವೇಳೆ ವಿಳಂಬವಾದರೆ ದಂಡ ಪಾವತಿಸಬೇಕು. ಹಾಗೆಯೇ ಎರವಲು ಪಡೆದ ಪುಸ್ತಕ ಹರಿದರೆ, ಕಳೆದು ಹೋದರೆ ಅಥವಾ ಪುಸ್ತಕಕ್ಕೆ ಯಾವುದೇ ರೀತಿ ಹಾನಿಯಾದರೆ ಪುಸ್ತಕದ ಮುಖಬೆಲೆಯ ಹತ್ತರಷ್ಟು ಹಣವನ್ನು ಪಾವತಿಸಬೇಕು.

ಇದೇ ಮೊದಲಲ್ಲ: 1984ರಲ್ಲಿಯೇ ನಗರದಲ್ಲಿ “ಕುವೆಂಪು ಸಂಚಾರ ಗ್ರಂಥಾಲಯ’ ವ್ಯವಸ್ಥೆ ಜಾರಿಯಲ್ಲಿತ್ತು. 14 ಸಾವಿರ ಪುಸ್ತಕಗಳೊಂದಿಗೆ 27 ವರ್ಷಗಳ ಕಾಲ ಸೇವೆ ನೀಡಿತ್ತು. ಆದರೆ, ಆ ವಾಹನ ತುಂಬಾ ಹಳೆಯದಾದ ಕಾರಣ 2011ರಲ್ಲಿ ಆರ್‌ಟಿಒ ಅಧಿಕಾರಿಗಳು ವಾಹನ ಪರವಾನಗಿ ನವೀಕರಣ ಮಾಡಿಕೊಡಲಿಲ್ಲ. ಅಂದಿನಿಂದ ಸಂಚಾರಿ ಗ್ರಂಥಾಲಯ ಸೇವೆ ಇಲ್ಲವಾಗಿತ್ತು.

ಶತಮಾನೋತ್ಸವದ ಕೊಡುಗೆ: ನಗರ ಕೇಂದ್ರ ಗ್ರಂಥಾಲಯದ ಶತಮಾನೋತ್ಸವ ಆಚರಣೆ ಅಂಗವಾಗಿ ಈ “ಕುವೆಂಪು ಸಂಚಾರ ಗ್ರಂಥಾಲಯ’ವನ್ನು 25 ಲಕ್ಷ ರೂ. ವೆಚ್ಚದಲ್ಲಿ ಪ್ರಾರಂಭಿಸಲಾಗಿದೆ. ಸಾರ್ವಜನಿಕರು ದೂರದ ಗ್ರಂಥಾಲಯಗಳಿಗೆ ತೆರಳದೆ, ತಮ್ಮ ಮನೆ ಮುಂದೆಯೇ ನೆಚ್ಚಿನ ಪುಸ್ತಕಗಳನ್ನು ಪಡೆದು ಓದಲು ಸಹಕಾರಿಯಾಗಿದೆ. ಸಂಚಾರ ಗ್ರಂಥಾಲಯ ಸಂಪೂರ್ಣ ಗಣಕೀಕೃತವಾಗಿದೆ. ಬಾರ್‌ ಕೋಡೆಡ್‌ ಸದಸ್ಯತ್ವ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಪುಸ್ತಕಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರು ನಿಗದಿತ ಶುಲ್ಕ ಪಾವತಿಸಿ ಸದಸ್ಯತ್ವ ಪಡೆದುಕೊಳ್ಳಬಹುದು. ಸೋಮವಾರ ಮತ್ತು ಸರ್ಕಾರಿ ರಜೆ ದಿನಗಳಂದು ಸೇವೆ ಇರುವುದಿಲ್ಲ.

48 ವಾರ್ಡ್‌ಗಳ ಜನರಿಗೆ ಉಪಯೋಗ
ನಗರದ 65 ವಾರ್ಡ್‌ಗಳ ಪೈಕಿ 48 ವಾರ್ಡ್‌ಗಳ ಜನರಿಗೆ ಸಂಚಾರ ಗ್ರಂಥಾಲಯ ಸೇವೆ ಒದಗಿಸುತ್ತಿದೆ. ಲಾಕ್‌ಡೌನ್‌ಗೂ ಮುನ್ನಕೇವಲ
40 ವಾರ್ಡ್‌ಗಳಿಗೆ ಸೀಮಿತವಾಗಿತ್ತು. ಈಗ ಹೆಚ್ಚುವರಿಯಾಗಿ 8 ವಾರ್ಡ್‌ಗಳಲ್ಲಿ ಸಂಚರಿಸುತ್ತಿದೆ. ಪ್ರತಿ ವಾರ್ಡ್‌ಗೆ ವಾರಕ್ಕೊಮ್ಮೆ
ವಾಹನ ತೆರಳಲಿದ್ದು, ನಿಗದಿಪಡಿಸಿದ ಜಾಗದಲ್ಲಿ 40 ನಿಮಿಷ ನಿಲುಗಡೆ ಮಾಡಲಾಗುತ್ತದೆ. ಚಾಮುಂಡಿಪುರಂ, ಶಾರದಾದೇವಿನಗರ, ದಟ್ಟಗಳ್ಳಿ ಸೇರಿದಂತೆ ವಿವಿಧೆಡೆ ಹೆಚ್ಚುವರಿ ನಿಲುಗಡೆಗೆ ಸಾರ್ವಜನಿಕರಿಂದ ಒತ್ತಾಯ ಕೇಳಿಬರುತ್ತಿದೆ. ಹೀಗಾಗಿ ಬೇಡಿಕೆ ಇಲ್ಲದೆಡೆ ಸಂಚಾರಿ ಸೇವೆ ರದ್ದುಗೊಳಿಸಿ ಬೇಡಿಕೆ ಇರುವೆಡೆಗೆ ಸೇವೆ ಒದಗಿಸಲು ಚಿಂತನೆ ನಡೆಸಲಾಗಿದೆ.

ಕೋವಿಡ್‌ ಕಾಲದಲ್ಲೂ ಕುವೆಂಪು ಸಂಚಾರ ಗ್ರಂಥಾಲಯಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದೆ. 800ಕ್ಕೂ ಹೆಚ್ಚು ಮಂದಿ ಸದಸ್ಯತ್ವ ಪಡೆದಿದ್ದು, ಈ ಪೈಕಿ ಗೃಹಿಣಿಯರೇ ಹೆಚ್ಚಾಗಿದ್ದಾರೆ. ಒಂದು ದಿನಕ್ಕೆ 8 ವಾರ್ಡ್‌ಗಳಿಗೆ ತೆರಳಿ ಪುಸ್ತಕ ಎರವಲು ನೀಡುವ ಮೂಲಕ ನಮ್ಮ ಮೊಬೈಲ್‌ ಲೈಬ್ರರಿ ವಾರದಲ್ಲಿ 48 ವಾರ್ಡ್‌ ತಲುಪುತ್ತಿದ್ದು, ನಿಗದಿಪಡಿಸಿದ ಜಾಗದಲ್ಲಿ 40 ನಿಮಿಷ ನಿಲುಗಡೆ ಮಾಡಲಾಗುತ್ತಿದೆ.
-ಬಿ.ಮಂಜುನಾಥ್‌, ಉಪನಿರ್ದೇಶಕ,
ಸಾರ್ವಜನಿಕ ಗ್ರಂಥಾಲಯ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next