ಅಂದು ನಾನು ಮತ್ತು ನನ್ನ ಸ್ನೇಹಿತ ಮುಸ್ಸಂಜೆ ವೇಳೆಯಲ್ಲಿ ಮಾತನಾಡುತ್ತ ಮರದ ಕೆಳಗೆ ನಿಂತಿದ್ದೆವು. ಹೀಗೆ ಮಾತನಾಡುತ್ತಾ ಮಾತನಾಡುತ್ತಾ ಮಲೆನಾಡ ಕಡೆಗೆ ಪ್ರವಾಸ ಮಾಡುವ ಎಂದನು. ನಾನು ಅದಕ್ಕೆ ಮನಸ್ಸಿಗೆ ಮುದ ನೀಡುವಂತ ಶಾಂತಿಯುತ ಸ್ಥಳಗಳಿಗೆ ಭೇಟಿ ಮಾಡೋಣ ಎಂದೆನು.
ಹೀಗೆ ಯಾವ ಕಡೆ ಹೋಗುವುದು ಎಂದು ಯೋಚಿಸುತ್ತಾ ನಿಂತಾಗ, ನನ್ನ ತಲೆಯಲ್ಲಿ ಹೊಳೆದ ಸ್ಥಳ ರಾಷ್ಟ್ರಕವಿ ಕುವೆಂಪು ಜನ್ಮಸ್ಥಳ ತೀರ್ಥಳ್ಳಿ ಸಮೀಪದ ಕುಪ್ಪಳ್ಳಿ. ಎಷ್ಟೋ ದಿನಗಳಿಂದ ನನ್ನ ಮನ ಆ ಕಡೆಗೆ ಹೋಗಲು ಕಾದು ಕುಳಿತಿತ್ತು. ಪ್ರವಾಸದ ವಿಚಾರ ತಲೆಯಲ್ಲಿ ಬಂದಾಗ ಇದ್ದಕ್ಕಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ನೋಡಿರುವ ರಾಷ್ಟ್ರಕವಿ ಕುವೆಂಪು ಅವರ ಮನೆಯ ಮುಂದಿನ ಚಿತ್ರಣ ಕಣ್ಮುಂದೆ ಬಂದಿತ್ತು.
ಹರಟೆ ಮಾತುಕತೆಯಲ್ಲೇ ಪ್ರಾಮುಖ್ಯತೆ ಪಡೆದ ನಮ್ಮ ಗುಂಪು ನಗುನಗುತ್ತಾ ಕುವೆಂಪು ಅವರ ಜನ್ಮಸ್ಥಳದ ಕಡೆಗೆ ಹೊರಟಿತ್ತು. ಹೊರಡುವುದು ಸ್ವಲ್ಪ ತಡವಾದದ್ದರಿಂದ ಹೋಗಿ ಮುಟ್ಟಲು ಮಧ್ಯಾಹ್ನವಾಗಿ ಹೋಗಿತ್ತು. 20ನೇ ಶತಮಾನದ ಸಾಹಿತ್ಯ ಶಿಖರ ಕುವೆಂಪು ಅವರ ಹುಟ್ಟೂರು, ತೀರ್ಥಹಳ್ಳಿಯ ತಾಯಿ ತುಂಗೆಯನ್ನು ದಾಟಿ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಊರೆ ಕುಪ್ಪಳ್ಳಿ. ಹಚ್ಚ ಹಸಿರನ್ನು ಹೊತ್ತು ನಿಂತ ನಿತ್ಯ ಹರಿದ್ವರ್ಣ ಕಾಡಿನ ಮರಗಳ ತಂಪಾದ ಗಾಳಿ ನಮ್ಮನ್ನು ಸ್ವಾಗತಿಸುತ್ತಿತ್ತು. ಆ ಬೆಟ್ಟಗಳ ನಡುವಿನಲ್ಲಿ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕುಟುಂಬ ನೆಲೆಸಿತ್ತು.
ಮಲೆನಾಡು ಎಂದರೆ ಕೇಳುವಿರಾ ಮನೆ ಹಿಂದೆ ಕಾಡು ಪಕ್ಕದಲ್ಲಿ ಅಡಿಕೆ ತೋಟ. ಇನ್ನೊಂದು ಬದಿಯಲ್ಲಿ ದನಕರುಗಳನ್ನು ಸಾಕುವ ಕೊಟ್ಟಿಗೆ, ಎಷ್ಟು ಪ್ರಶಾಂತವಾದ ಸ್ಥಳವೆಂದರೆ ಆ ಸ್ಥಳಕ್ಕೆ ಪ್ರವೇಶಿಸಿದಾಗಲೇ ಮನ ಹಗುರವಾಗುವುದು. ಪ್ರಕೃತಿಯಿಂದ ದೊರಕುವ ಶಬ್ದವನ್ನು ಬಿಟ್ಟರೆ ಮತ್ತೆ ಯಾವುದೇ ಶಬ್ದ ನಮಗಲ್ಲಿ ಕೇಳುವುದಿಲ್ಲ ಅಷ್ಟು ಶಾಂತಿ ತುಂಬಿದೆ, ಮನೆಯ ಮುಂಭಾಗದಿಂದ ಕ್ಯಾಮೆರಾ ಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುತ್ತಾ ಹಾಗೆ ಮನೆ ಒಳಗೆ ಹೊರಡಲು ಸಿದ್ದರಾದೆವು.
ಅಲ್ಲೇ ನಿಂತಿದ್ದ ರಾಷ್ಟ್ರ ಕವಿ ಕುವೆಂಪು ಪ್ರತಿಷ್ಠಾನದ ಕಾರ್ಯಕರ್ತರೊಬ್ಬರು “ಓಯ್ ತಮ್ಮ ಮನೆ ಒಳಗೆ ಚಿತ್ರೀಕರಣ ಮಾಡುವ ಹಾಗಿಲ್ಲ, ಅಲ್ಲಿ ಟಿಕೆಟ್ ತೆಗೆದುಕೊಂಡು ಒಳಗೆ ಬನ್ನಿ” ಎಂದರು.
ನಾವು ಟಿಕೆಟ್ ಪಡೆದು ಒಳಗೆ ಹೊರಟೆವು, ಮೊದಲು ಸಿಗುವುದೇ ನಮಗೆ ಆ ದೊಡ್ಡ ಮನೆಯ ಒಳಗಡೆ ದೊಡ್ಡವಾದ ಅಂಗಳ ಮಧ್ಯದಲ್ಲಿ ತುಳಸಿ ಕಟ್ಟೆ ಅದರ ಸುತ್ತಲಿನ ಚಾವಣಿಯಲ್ಲಿ ಕುವೆಂಪು ಅವರ ಕುಟುಂಬ ತಮ್ಮ ಜೀವನೋಪಾಯಕ್ಕಾಗಿ ಉಪಯೋಗಿಸಿದ ಸಾಮಗ್ರಿಗಳು ನಮಗೆ ನೋಡಲು ದೊರೆಯುತ್ತವೆ. ಪ್ರತಿಯೊಂದು ಕೋಣೆಗಳು ತನ್ನದೇ ಆದ ವಿಶೇಷವನ್ನು ನಮಗೆ ತಿಳಿಸುತ್ತದೆ.
ಕುವೆಂಪು ಅವರ ಜೀವನದ ಪ್ರತಿಯೊಂದು ನೆನಪುಗಳನ್ನು ಪೂರ್ಣಚಂದ್ರ ತೇಜಸ್ವಿಯವರು ಚಿತ್ರೀಕರಣ ಮಾಡಿದ ಛಾಯಾಚಿತ್ರಗಳನ್ನು ಒಂದು ಕೋಣೆಯಲ್ಲಿ ಇರಿಸಲಾಗಿದೆ, ನೆಲ ಮಾಳಿಗೆಯಿಂದ ಮೊದಲನೇ ಮಹಡಿಗೆ ಪ್ರವೇಶಿಸಿದಾಗ ಅಲ್ಲಿರುವುದೇ ಕುವೆಂಪು ಅವರ ಪ್ರತಿಯೊಂದು ಪುಸ್ತಕಗಳು ಅವರ ಬರಹಗಳು ಮತ್ತು ಅವರಿಂದ ರಚಿತವಾದ ಪುಸ್ತಕಗಳು, ಅವರು ಉಪಯೋಗಿಸಿದ ವಸ್ತುಗಳು, ಅವರಿಗೆ ನೀಡಿರುವ ಪ್ರಶಸ್ತಿಗಳು, ಜ್ಞಾನಪೀಠ ಪ್ರಶಸ್ತಿಯಿಂದ ಹಿಡಿದು ಪದ್ಮಭೂಷಣ, ಕರ್ನಾಟಕ ರತ್ನ, ಅನೇಕ ವಿಶ್ವವಿದ್ಯಾನಿಲಯಗಳು ನೀಡಿರುವ ಡಾಕ್ಟರೇಟ್ ಪದವಿಗಳು, ಇನ್ನೂ ಹತ್ತಾರು ಪ್ರಶಸ್ತಿಗಳು ನಮಗಲ್ಲಿ ನೋಡಲು ಸಿಗುತ್ತವೆ. ಅವರ ಈ ಸಾಧನೆಯನ್ನು ನೋಡಿದಾಗ ಓದುಗರಿಗೆ ಹೊಸ ಚೈತನ್ಯ ತುಂಬಿದರೆ, ಮಕ್ಕಳಿಗೆ ಓದಲು ಬರೆಯಲು ಹೊಸ ಹುರುಪು ಬರುತ್ತದೆ.
ಆ ಮನೆಯ ಹಿಂದಿನ ಅಂಗಳದಲ್ಲಿ ಬಚ್ಚಲಮನೆ, ಹ ಹ.. ಅಭ್ಯಂಜನ ನಡೆಯುವ ಸ್ಥಳ ಇದೆ ನೋಡಿ, ಇದರಲ್ಲಿ ನಾನು ಕಂಡ ಆಶ್ಚರ್ಯದ ವಿಷಯವೆಂದರೆ ಆ ಸ್ಥಳದಲ್ಲಿ ಎರಡು ಗುಂಡಿಗಳನ್ನು ತೆಗೆಯಲಾಗಿತ್ತು ಆ ಗುಂಡಿಗಳಿಗೆ ಬೆಟ್ಟದ ಕಾಡಿನಿಂದ ವಷಊದ 365 ದಿನವು ನೀರು ಬಂದು ಬೀಳುತ್ತಿತ್ತಂತೆ.
ಒಂದು ಗುಂಡಿಯ ನೀರನ್ನು ಮನೆಯ ಮತ್ತು ಅಭ್ಯಂಜನದ ಕಾರ್ಯಗಳಿಗೆ ಬಳಸಿಕೊಂಡರೆ, ಇನ್ನೊಂದು ಗುಂಡಿಯ ನೀರನ್ನು ದನಕರುಗಳಿಗೆ ನೀರುಣಿಸಲು ಬಳಸುತ್ತಿದ್ದರಂತೆ. ಉಳಿದ ನೀರನ್ನು ಪಕ್ಕದಲ್ಲಿರುವ ಅಡಿಕೆ ತೋಟಕ್ಕೆ ಬಿಡುತ್ತಿದ್ದರಂತೆ. ಅಬ್ಬಬ್ಟಾ ಎಂತಾ ವಿಚಿತ್ರ ಅಲ್ಲವೇ..!
ಆ ಬಚ್ಚಲ ಮನೆಯ ನಿರ್ಮಾಣವೇ ಒಂದು ವಿಚಿತ್ರವಾಗಿದೆ. ಅಲ್ಲೂ ಕೂಡ ಒಂದು ಗುಂಡಿಯನ್ನು ತೆಗೆಯಲಾಗಿದೆ ಗುಂಡಿಯ ಮೇಲೆ ಮಣ್ಣಿನ ಒಲೆ, ಒಲೆಯ ಮೇಲೆ ಸುಮಾರು ಎಂಟತ್ತು ಕೊಡಪಾನ ನೀರು ಹಿಡಿಯುವ ಮಣ್ಣಿನ ಹಂಡೆಯನ್ನು ಇಟ್ಟಿದ್ದಾರೆ. ಅಭ್ಯಂಜನ ಸಮಯದಲ್ಲಿ ಕುವೆಂಪು ಅವರು ಮತ್ತು ಅವರ ಕುಟುಂಬದವರು ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡುವ ಚಿತ್ರಣ ಕಣ್ಮುಂದೆ ಕಾಣುವಂತಿತ್ತು.
ಇದನ್ನು ನೋಡಿದ ನಂತರ ಮನೆಯಿಂದ ಹೊರಗೆ ಬರುವ ಹಾದಿಯಲ್ಲಿ ಕುವೆಂಪು ಅವರು ಬರೆದಿರುವ ಪುಸ್ತಕವನ್ನು ಅತಿ ಕಡಿಮೆ ಬೆಲೆಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಇವರು ಮಾರಾಟ ಮಾಡುತ್ತಿದ್ದರು. ನಾನು ಅವರ ಹತ್ತಿರ ಹೋಗಿ ಮೊದಲು ಕೇಳಿದ ಪುಸ್ತಕವೇ ಅಜ್ಜಯ್ಯನ ಅಭ್ಯಂಜನ, ಅವರು ಇದನ್ನು ಕೇಳಿ ಅದು “ಮಲೆನಾಡಿನ ಚಿತ್ರಗಳು”ಎಂಬ ಪುಸ್ತಕದಲ್ಲಿ ಬರುವ ಒಂದು ಕಥೆಯಾಗಿದೆ ಎಂದರು ನಾನು ಅದನ್ನು ಖರೀದಿಸಿ ತಂದೆ.
ಕುವೆಂಪು ಅವರ ಹಿಂದಿನ ತಲೆಮಾರಿನ ಆಚರಣೆಗಳು ಅವರ ಸಾಧನೆಗಳು ಅವರ ಹಿರಿಯರ ಬದುಕುಗಳನ್ನು ಪುಸ್ತಕಗಳಲ್ಲಿ ಓದಿರುತ್ತೇವೆ, ಆದರೆ ಅಲ್ಲಿ ಹೋಗಿ ನೋಡಿ ಅದನ್ನು ಅನುಭವಿಸಿದರೆ ಆಗುವ ಆನಂದವೇ ಬೇರೆ. ನಮ್ಮನ್ನು ನಾವು ಓದಿನಲ್ಲಿ ತೊಡಗಿಸಿಕೊಳ್ಳಲು ಅಲ್ಲಿರುವ ಕೆಲವು ಸ್ಥಳಗಳನ್ನು ವೀಕ್ಷಿಸಿದಾಗ ಹೊಸ ಚೈತನ್ಯ ಚಿಗುರುತ್ತದೆ. ಪ್ರತಿಯೊಬ್ಬರು ನಮ್ಮ ರಾಷ್ಟ್ರ ಕವಿ ಕುವೆಂಪು ಅವರ ಜನನ ಸ್ಥಳಕ್ಕೆ ಭೇಟಿ ಕೊಡಿ.
ಈ ಸ್ಥಳವನ್ನು ನೋಡಲು ಅನುವು ಮಾಡಿಕೊಟ್ಟ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಇವರಿಗೆ ನಾನು ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ.
- ಭರತ್ ವಾಸು ನಾಯ್ಕ
ಮಾಳಂಜಿ, ಶಿರಸಿ