Advertisement

ಮಕ್ಕಳಿಗೆ ಪ್ರೇರಣೆ ನೀಡಬಲ್ಲ ಮಕ್ಕಳ ವಿಜ್ಞಾನ ಹಬ್ಬ

11:17 PM Jan 02, 2020 | Sriram |

ತೆಕ್ಕಟ್ಟೆ : ಪ್ರತಿ ಮಗುವೂ ಅನನ್ಯವಾದ ಪ್ರತಿಭೆ ಮತ್ತು ಚೈತನ್ಯವನ್ನು ಹೊಂದಿರುವುದರಿಂದ ಇಂತಹ ಕಲಿಕೆಯ ಸಂದರ್ಭವನ್ನು ನಿಭಾಯಿಸುವ ರೀತಿಗಳಲ್ಲೂ ಸಾಕಷ್ಟು ವಿಭಿನ್ನತೆಗಳನ್ನು ನಾವು ನಿರೀಕ್ಷಿಸಬೇಕಾಗುತ್ತದೆ.

Advertisement

ಪ್ರತಿ ಮಗುವೂ ತನ್ನದೇ ವಿಶಿಷ್ಟ ಜ್ಞಾನವನ್ನು ರಚಿಸಿಕೊಳ್ಳಲು ಸಾಧ್ಯವಾಗಬಹುದಾದ ಕಲಿಕೆಯ ಪರಿಸರವನ್ನು ತರಗತಿ ಕೋಣೆಯಲ್ಲಿ ತರಲು ಈಗಾಗಲೆ ಸಾಕಷ್ಟು ಕಾರ್ಯಕ್ರಮಗಳು, ಸಾಕಷ್ಟು ಕಾರ್ಯಾಗಾರಗಳನ್ನು ಇಲಾಖೆಯು ಹಮ್ಮಿಕೊಳ್ಳುತ್ತಾ ಬಂದಿದೆ. ಜ.1 ರಂದು ತೆಕ್ಕಟ್ಟೆ ಕುವೆಂಪು ಶಾಲೆಯಲ್ಲಿ ಉಪನಿರ್ದೇಶಕರ ಕಚೇರಿ ಉಡುಪಿ ಜಿ.ಪಂ. ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಕುಂದಾಪುರ ವಲಯ, ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕ ಹಾಗೂ ಕುವೆಂಪು ಶತಮಾನೋತ್ಸವ ಸ.ಹಿ.ಪ್ರಾ. ಶಾಲೆಯ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ 2019-20 ಕಾರ್ಯಕ್ರಮ ಗಮನ ಸೆಳೆಯಿತು.

ತರಗತಿ ಕೋಣೆಯ ಒಳ-ಹೊರಗನ್ನು ಬದಲಿಸಬಲ್ಲ ಕತೃìತ್ವ ಶಕ್ತಿಯನ್ನು ನಮ್ಮ ಸಾಮಾಜಿಕ ಒಡನಾಟವು ಕರುಣಿಸಬಲ್ಲದು. ಮಕ್ಕಳ ಹಬ್ಬವು ಆ ಕಾರಣಕ್ಕಾಗಿಯೇ ಊರ ಹಬ್ಬವೂ ಆಗಬೇಕು. ಸಮಾಜದ ಎಲ್ಲ ಸ್ತರಗಳನ್ನು ಒಳಗೊಳ್ಳುವ ಹಬ್ಬವೂ ಆಗಬೇಕು. ಅತಿಥಿ-ಅತಿಥೇಯ ಮಾದರಿಯಲ್ಲಿ ಸಂಘಟಿಸ ಲ್ಪಡುತ್ತಿರುವ ಈ ಜಿಲ್ಲಾ ಹಬ್ಬವೂ ಸೇರಿದಂತೆ ಈ ಕಾರ್ಯಕ್ರಮದ ಒಟ್ಟು ಆಶಯ ಮತ್ತು ಆಕೃತಿಯು ಸಮಾನತೆ ಮತ್ತು ಸಹಬಾಳ್ವೆಯ ಬೆಳಕನ್ನು ಹಂಚಬೇಕು ಎನ್ನುವುದು ಈ ಕಾರ್ಯಕ್ರಮದ ಮೂಲ ಆಶಯದಲ್ಲಿ ಒಂದು.

ಹತ್ತು ವಿಭಾಗದಲ್ಲಿ ವಿದ್ಯಾರ್ಥಿಗಳಿಂದ ವಿಭಿನ್ನ ಚಟುವಟಿಕೆ
ಮೂರು ದಿನಗಳ ಕಾಲ ನಡೆಯುವ ಈ ವಿಜ್ಞಾನ ಹಬ್ಬದಲ್ಲಿ ಸುಮಾರು 10 ಕಾರ್ನರ್‌ಗಳಲ್ಲಿ ಕಲಿಕೆಗೆ ಪೂರಕವಾದ ಕಾಗದ ಕತ್ತರಿ, ಜೀವಭಾವ ಅಸ್ಥಿಪಂಜರ, ಕ್ರಾಫ್ಟ್‌, ಚುಕ್ಕಿ ಚಂದ್ರಮ, ಪಿನ್‌ಹೋಲ್‌ ಕೆಮರಾ ರಚನೆ, ಮಾಡು ಆಡು ಏರುವ ಹಲ್ಲಿ, ಮರಕುಟ್ಟಿಗ, ದೃಷ್ಟಿಭ್ರಮೆ ಗೊಂಬೆ, ಕಾಗದಲ್ಲಿ ಕೋಳಿ, ಆನೆ, ಹುಡುಗಿ, ನವಿಲು ಸೇರಿದಂತೆ ಕಲಾತ್ಮಕ ಚಟುವಟಿಕೆಯ ಜತೆಗೆ ನಾಟಕ ಪ್ರದರ್ಶನ ಗೊಳ್ಳಲಿದೆ.

ಅನುಭವಿ ಸಂಪನ್ಮೂಲ ವ್ಯಕ್ತಿಗಳು ಮಾರ್ಗ ದರ್ಶನ ನೀಡಲಿದ್ದು, ಬೇರೆ ಬೇರೆ ಶಿಕ್ಷಣ ಸಂಸ್ಥೆಗಳಿಂದ ಆಗಮಿಸಿದ ವಿದ್ಯಾರ್ಥಿಗಳಿಗೆ ಸ್ಥಳೀಯ ಶಾಲಾ ವಿದ್ಯಾರ್ಥಿಗಳು ಮನೆಯಲ್ಲಿ ಅತಿಥಿ ಸಂತ್ಕಾರವನ್ನು ಮಾಡುತ್ತಿರುವುದು ವಿಶೇಷವಾಗಿದೆ.

Advertisement

ಜ.7: ರಾಜ್ಯಮಟ್ಟದ ವಿಜ್ಞಾನ ಹಬ್ಬ
ರಾಜ್ಯ ಮಟ್ಟದ ವಿಜ್ಞಾನ ಹಬ್ಬ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣದಲ್ಲಿ ಜ. 7ರಿಂದ ಆರಂಭವಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಒಟ್ಟು 150ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು 5 ವಿಭಾಗ ಗಳಲ್ಲಿ ಬೇರೆ ಬೇರೆ ವೈಜ್ಞಾನಿಕ ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಖಾಸಗಿ ವಿದ್ಯಾ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೂ ಕೂಡ ಈ ಮಕ್ಕಳ ವಿಜ್ಞಾನ ಹಬ್ಬದ ವೀಕ್ಷಣೆಗೆ ಮುಕ್ತ ಅವಕಾಶ ನೀಡಲಾಗಿದೆ.

ಚಟುವಟಿಕಾ ಆಧಾರಿತ ಕಲಿಕೆಗೆ ಪ್ರೋತ್ಸಾಹ
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಜತೆಗೆ ಮೂಡ ನಂಬಿಕೆಯನ್ನು ಹೋಗಲಾಡಿಸುವುದೇ ಮಕ್ಕಳ ವಿಜ್ಞಾನ ಹಬ್ಬದ ಮೂಲ ಉದ್ದೇಶ. ಚಟುವಟಿಕಾ ಆಧಾರಿತ ಕಲಿಕೆ ಪ್ರೋತ್ಸಾಹ ನೀಡುವುದರಿಂದ ಮಗುವಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಮೂಲಕ ಧನಾತ್ಮಕ ಚಿಂತನೆಗಳು ಬೆಳೆಯುವುದು.
-ಪ್ರಭಾಕರ ಮಿತ್ಯಾಂತ
ಉಪಯೋಜನಾ ಸಮನ್ವಯಾಧಿಕಾರಿ,
ಸಮಗ್ರ ಶಿಕ್ಷಣ ಉಡುಪಿ ಜಿಲ್ಲೆ.

ಸ್ವಂತ ಅನುಭವ ,ಒಡನಾಟ
ಮಕ್ಕಳ ವಿಜ್ಞಾನ ಹಬ್ಬವು ಸಮಾಜಕ್ಕೂ ಸಂದೇಶವನ್ನು ನೀಡುತ್ತದೆ. ಸ್ವಂತ ಅನುಭವ ಮತ್ತು ಒಡನಾಟ ಮಾತ್ರ ಕಲಿಕೆಯನ್ನುಂಟು ಮಾಡಬಲ್ಲದು ಎಂಬುದೇ ಆ ಸಂದೇಶ.
-ಉದಯ ಗಾವಂಕಾರ
ರಾಜ್ಯ ಸಂಪನ್ಮೂಲ ವ್ಯಕ್ತಿ

Advertisement

Udayavani is now on Telegram. Click here to join our channel and stay updated with the latest news.

Next