Advertisement

ಪ್ರಕೃತಿ ಪ್ರಭಾವದೊಳಗೆ ಅರಳಿದ ಕುವೆಂಪು

03:43 PM Dec 30, 2019 | Suhan S |

ಮಂಡ್ಯ: ಪ್ರಕೃತಿಯ ಪ್ರಭಾವದಿಂದ ಕುವೆಂಪುರವರ ಬರಹಗಳು ಮೂಡಿಬಂದವು ಎಂದು ಕಾವೇರಿ ನೀರಾವರಿ ನಿಗಮದ ಸಹಾಯಕ ಎಂಜಿನಿಯರ್‌ ಜಿ.ಎನ್‌. ಕೆಂಪರಾಜು ತಿಳಿಸಿದರು.

Advertisement

ಪರಿಸರ ರೂರಲ್‌ ಡೆವಲೆಪ್‌ಮೆಂಟ್‌ ಸೊಸೈಟಿ, ಕಿರಗಂದೂರು ನೀರು ಬಳಕೆದಾರರ ಸಹಕಾರ ಸಂಘದ ವತಿಯಿಂದ ತಾಲೂಕಿನ ಕಿರಗಂದೂರು ಗ್ರಾಮದ ನಾಡಪ್ರಭು ಕೆಂಪೇಗೌಡ ಉದ್ಯಾನದಲ್ಲಿ ನಡೆದ ಕುವೆಂಪು ಜನ್ಮ ದಿನದ ನಿಮಿತ್ತ ಸಸ್ಯ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕುವೆಂಪು ಕೊಡುಗೆ ಅನನ್ಯ: ಪ್ರಕೃತಿ ಆಸ್ವಾದಿಸಿ ಪ್ರಪಂಚಕ್ಕೆ ಶ್ರೇಷ್ಠ ಸಾಹಿತ್ಯ ನೀಡಿದ ಕುವೆಂಪುರವರ ಕೊಡುಗೆ ಅನನ್ಯ. ಗುಡಿ ಗೋಪುರ ಚರ್ಚುಗಳನ್ನು ಬಿಟ್ಟು ಹೊರಬನ್ನಿ ಎಂದು ಸಾರುತ್ತಾ, ಸಸ್ಯ ಸಂಕುಲಗಳ ಬಗ್ಗೆ ಅಪಾರ ಮಮಕಾರ ತೋರಿದ ಕುವೆಂಪುಅವರಿಗೆ ನಾಡು ನಿಜವಾದ ರೀತಿಯಲ್ಲಿ, ಸಸ್ಯ ನಮನಸಲ್ಲಿಸಬೇಕಾಗಿದೆ ಎಂದರು.

ಲಿಯೋಟಾಲ್‌ಸ್ಟಾಯ್‌, ಅರಬಿಂದು, ರವೀಂದ್ರನಾಥ್‌ ಠ್ಯಾಗೋರ್‌ರವರ ಬರಹಗಳಿಗಿನ್ನ ಕುವೆಂಪುರವರ ಬರಹಗಳು ವಿಶ್ವಪ್ರಜ್ಞೆಯನ್ನು ಉಂಟುಮಾಡುವಂತಹುಗಳಾಗಿದ್ದವು. ಮಾನವತಾವಾದಿಯಾಗಿದ್ದ ಕುವೆಂಪುರವರು ಶ್ರಮಜೀವಿಗಳ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿದ್ದರು ಎಂದರು.

ಕೃಷ್ಣರಾಜಸಾಗರ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಸಹಕಾರ ಮಹಾಮಂಡಳದ ಉಪಾಧ್ಯಕ್ಷ ಮಂಗಲ ಎಂ. ಯೋಗೀಶ್‌ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಲ-ನೆಲ ನಿರ್ವಹಣೆಗೆ ಕುವೆಂಪುರವರ ಬರಹಗಳು ಸ್ಪೂರ್ತಿದಾಯಕವಾಗಿವೆ. ಬಾಲ್ಯಾವಸ್ಥೆಯಲ್ಲೇ ಮಕ್ಕಳಿಗೆ ಜೀವ ಸಂಕುಲಗಳ ಬಗ್ಗೆ ಸ್ಪೂರ್ತಿಯನ್ನು ಒದಗಿಸುವ ಪಠ್ಯಗಳು ಹೊರಹೊಮ್ಮಲು ಕುವೆಂಪುರವರ ಸಾಹಿತ್ಯವೇ ಕಾರಣವಾಗಿದೆ. ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಇತರೆ ಕೃತಿಗಳು ಪ್ರಕೃತಿಯ ಸೊಬಗನ್ನು ಪ್ರಪಂಚಕ್ಕೆ ಸಾರಿದ್ದಾಗಿದೆ ಎಂದು ಹೇಳಿದರು.

Advertisement

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ನಿರ್ದೇಶಕ ದೊಡ್ಡಲಿಂಗೇಗೌಡ ಸಸ್ಯ ನಮನ ಕಾರ್ಯಕ್ರಮಕ್ಕೆ ಗಿಡ ನೆಡುವುದರ ಮೂಲಕ ಚಾಲನೆ ನೀಡಿದರು. ಮಂಡ್ಯ ತಾಲೂಕು ಕಾವೇರಿ ಹೌಸ್‌ಬಿಲ್ಡಿಂಗ್‌ ಕೋ ಆಪರೇಟಿವ್‌ ಸೊಸೈಟಿ ಅಧ್ಯಕ್ಷ ಸಿ.ಸಿ.ಮಹದೇವು, ಕಿರಗಂದೂರು ನೀರು ಬಳಕೆದಾರರ ಸಹಕಾರ ಸಂಘದ ಉಪಾಧ್ಯಕ್ಷ ಕೆ. ತಿಮ್ಮೇಗೌಡ, ಡಿಸಿಸಿ ಬ್ಯಾಂಕ್‌ ಗಾಂ— ಬಜಾರ್‌ ಶಾಖೆಯ ವ್ಯವಸ್ಥಾಪಕ ಆತ್ಮಾನಂದ, ಶಿವರಾಜು, ನರಸಿಂಹಮೂರ್ತಿ, ಕುಮಾರ್‌ಏ ಇತರರು ಉಪಸ್ಥಿತರಿದ್ದರು. ಕರ್ನಾಟಕ ಜಾ ನಪದ ಅಕಾಡೆಮಿ ಮಾಜಿ ಸದಸ್ಯ ಗೊರವಾಲೆ ಚಂದ್ರಶೇಖರ್‌, ಕಲಾವಿದ ಬಸವರಾಜ ಸಂತೆಕಸಲಗೆರೆ ಅವರು ಕುವೆಂಪು ಗೀತಗಾಯನ ಸಾಧರಪಡಿಸಿದರು.

ಕುವೆಂಪು ಸಸ್ಯನಮನ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಜೀವವೈವಿಧ್ಯತಾ ಗಿಡಗಳನ್ನು ನೆಡಲಾಯಿತು. ಹೊನ್ನೆ , ಜಟ್ರೋಫಾ, ಹೊಂಗೆ, ನೇರಳ ಸಹಿತ ವಿವಿಧ ಗಿಡಗಳನ್ನು ನೆಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next