Advertisement

ಪಳ್ಳಿಕ್ಕರೆ ಕುಟುಂಬಶ್ರೀ ಘಟಕಗಳ ಯಶೋಗಾಥೆ

10:13 AM Mar 21, 2020 | sudhir |

ಕಾಸರಗೋಡು: ವಿವಿಧ ವಲಯಗಳಲ್ಲಿ ವೈವಿಧ್ಯಮಯ ಸಾಧನೆ ನಡೆಸುತ್ತಿರುವ ಜಿಲ್ಲೆಯ ಪಳ್ಳಿಕ್ಕರೆಯ ಕುಟುಂಬಶ್ರೀಯ ಹೆಣ್ಣುಮಕ್ಕಳು ಗಮನ ಸೆಳೆಯುತ್ತಿದ್ದಾರೆ.

Advertisement

ಅಮೃತಂ ಪುಡಿ-ರಾಗಿ ಬಿಸ್ಕತ್ತು, ನ್ಯಾಪಿRನ್‌, ಜರ್ಸಿ, ಗೇರುಬೀಜ ಮಿಠಾಯಿ, ಬಟ್ಟೆ ಚೀಲ, ತರಕಾರಿ ಕೃಷಿ, ಭತ್ತದ ಕೃಷಿ, ಬೇಕರಿ ಉತ್ಪನ್ನಗಳು ಇತ್ಯಾದಿಗಳ ಮೂಲಕ ವಿಭಿನ್ನ ಸಾಧನೆ ನಡೆಸುವ ಸ್ವಾವಲಂಬಿ ಬದುಕಿನ ಮೂಲಕ ನಾಡಿನ ಗಮನ ಸೆಳೆಯುತ್ತಿದ್ದಾರೆ.

2005ರ ಎ.12ರಂದು 6 ಮಂದಿ ಸದಸ್ಯೆಯರಿದ್ದ ಅಕ್ಷಯ ಘಟಕ ಪಳ್ಳಿಕ್ಕರೆ ಪರಂಬದಲ್ಲಿ ಆರಂಭಗೊಂಡಿತ್ತು. ಕೂಲಿ ಕಾರ್ಮಿಕರಾಗಿ, ಕೃಷಿ ಕಾರ್ಮಿಕರಾಗಿ ಮನೆಗೆ ಆಸರೆಯಾಗಿದ್ದ ಪತಿಯ ಆದಾಯವನ್ನೇ ನಂಬಿ ಇವರು ಬದುಕುತ್ತಿದ್ದರು. ಮೊದಲ ವರ್ಷದಲ್ಲಿ ಅಮೃತಂ ಪುಡಿ ನಿರ್ಮಿಸಿ, ಮಾರಾಟ ನಡೆಸಿದ ಲಾಭದಲ್ಲಿ 30 ರೂ. ಪ್ರತಿಫಲವಾಗಿ ಪಡೆಯುತ್ತಾ, ಉಳಿದ ಮೊಬಲಗನ್ನು ಘಟಕದ ಚಟುವಟಿಕೆಗಳಿಗಾಗಿ ಮೀಸಲಿಡುತ್ತಿದ್ದರು. ಇಂದು ಸ್ವಂತವಾಗಿ ಹೊಂದಿರುವ 6 ಸೆಂಟ್ಸ್‌ ಜಾಗದಲ್ಲಿ ಸ್ವಂತ ಕಟ್ಟಡವಿದೆ.

ಸ್ವಂತ ಮನೆ, ಮಕ್ಕಳ ಕಲಿಕೆ, ಅವರ ಉದ್ಯೋಗ, ವಿವಾಹ ಹೀಗೆ ಎಲ್ಲದಕ್ಕೂ ಈ ಘಟಕದಿಂದ ಲಭಿಸುವ ಆದಾಯ ಪೂರಕವಾಗಿದೆ ಎನ್ನುತ್ತಾರೆ ಇಲ್ಲಿನ ಸದಸ್ಯೆಯಾಗಿರುವ ಶ್ಯಾಮಲಾ.

ಎಂಜಿನಿಯರಿಂಗ್‌, ಸಿವಿಲ್‌ ಸರ್ವಿಸ್‌ ಪರೀಕ್ಷೆಗೆ ಸಿದ್ಧತೆ ನಡೆಸುವ ಮಕ್ಕಳೂ ಈ ಘಟಕದ ಸದಸ್ಯರಾಗಿದ್ದಾರೆ. ಘಟಕದ ಉತ್ಪನ್ನಗಳಾದ ಅಮೃತಂ ಪುಡಿ, ಅಮೃತಂ ಬಿಸ್ಕತ್‌, ರಾಗಿ ಬಿಸ್ಕತ್‌ ಸಹಿತ ಮಾರುಕಟ್ಟೆಯಲ್ಲಿ ಬೇಡಿಕೆಗಳಿವೆ. ಉದುಮ, ಪಳ್ಳಿಕ್ಕರೆ, ಕುಂಬಳೆ, ಬದಿಯಡ್ಕ ಪ್ರದೇಶಗಳಲ್ಲಿ ಈ ಉತ್ಪನ್ನಗಳು ಧಾರಾಳ ಮಾರಾಟವಾಗುತ್ತಿವೆ.

Advertisement

ಬ್ಲಾಸಂ ಜರ್ಸಿ ಘಟಕ
ಬೇಕಲದಲ್ಲಿ 2012 ಎ. 12ರಂದು 6 ಮಂದಿ ಸದಸ್ಯೆಯರು ಆರಂಭಿಸಿದ್ದ ಬ್ಲಾಸಂ ಜರ್ಸಿ ಘಟಕ ಇಂದು ಜಿಲ್ಲೆಯ ಅತ್ಯುತ್ತಮ ಚಟುವಟಿಕೆಗಳ ಕುಟುಂಬಶ್ರೀ ಘಟಕಗಳಲ್ಲಿ ಒಂದು ಎನಿಸಿದೆ. ಏರೋಲ್ಪಾಲಂ ಎಂಬಲ್ಲಿಂದ ಪರಿಣತ ತರಬೇತಿ ಪಡೆದು ಇವರು ಒಬ್ಬ ತರಬೇತಿದಾರನ ಸಹಾಯದೊಂದಿಗೆ ಈ ಘಟಕ ಆರಂಭಿಸಿದ್ದರು. ಮೊದಲಿಗೆ ಕೊಡೆ ನಿರ್ಮಾಣ ನಡೆಸಿ, ಅನಂತರ ಟೀ ಶರ್ಟ್‌, ಟ್ರಾಕ್‌ ಸ್ಯೂಟ್‌, ಜರ್ಸಿ ಸಹಿತ ಉತ್ಪನ್ನಗಳನ್ನು ತಯಾರಿಸಿ ಪ್ರಸಿದ್ಧರಾಗಿದ್ದಾರೆ.

ಕೋವಿಡ್‌-19 ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಕಳೆದ 3 ದಿನಗಳಿಂದ ರಾಜ್ಯ ಕುಟುಂಬಶ್ರೀಯ ಆದೇಶ ಪ್ರಕಾರ ಮಾಸ್ಕ್ ನಿರ್ಮಾಣದಲ್ಲಿ ಇವರೀಗ ತೊಡಗಿಕೊಂಡಿದ್ದಾರೆ.

ರಾಜ್ಯ ಸರಕಾರದ ಆರ್ಡರ್‌ ಪ್ರಕಾರ ಉತ್ಪನ್ನಗಳನ್ನು ಸಿದ್ಧಪಡಿಸಿ ಕೊಡುವುದರ ಜತೆಗೆ, ಕೇಂದ್ರ ಸರಕಾರದ ದೀನ್‌ ದಯಾಳ್‌ ಉಪಾಧ್ಯಾಯ ಗ್ರಾಮೀಣ ಕೌಶಲ ಯೋಜನೆ ಅಂಗವಾಗಿ ಜರ್ಸಿ ತಯಾರಿ ನಡೆಸುತ್ತಿದ್ದಾರೆ.
ಸಂಘ-ಸಂಸ್ಥೆಗಳು ಆರ್ಡರ್‌ ನೀಡಿದಂತೆ ಅವರಿಗೂ ಉತ್ಪನ್ನಗಳನ್ನು ಸಿದ್ಧಪಡಿಸಿ ಕೊಡುತ್ತಿದ್ದಾರೆ. ದಿನವೊಂದಕ್ಕೆ 50 ಟೀಶರ್ಟ್‌ ನಿರ್ಮಿಸಿ ಕೊಡುವಷ್ಟು ವ್ಯವಸ್ಥೆ ಈಗ ಘಟಕದ ಬಳಿಯಿದೆ. ಸಾಲ ಮೂಲಕ ಯಂತ್ರೋಪಕರಣಗಳನ್ನು ಇವರು ಖರೀದಿಸಿದ್ದು, ಈಗ ಎಲ್ಲ ಸಾಲಗಳನ್ನೂ ಮರುಪಾವತಿಸಿ, ಸ್ವತಂತ್ರವಾಗಿ ಉದ್ದಿಮೆ ಮುನ್ನಡೆ ಸಾಧಿಸುತ್ತಿದೆ.

ಲೈಫ್‌ ಕೇರ್‌ ನ್ಯಾಪ್ಕಿನ್
ಪೊಯಿನಾಚಿ ಪರಂಬದಲ್ಲಿ ಚಟುವಟಿಕೆ ನಡೆಸುತ್ತಿರುವ ಸೃಷ್ಟಿ ಕುಟುಂಬಶ್ರೀಯ ಲೈಫ್‌ ಕೇರ್‌ ನ್ಯಾಪ್ಕಿನ್ ನಿರ್ಮಾಣ ಘಟಕ ಯಶೋಗಾಥೆ ರಚಿಸಿದೆ. 2011ರಲ್ಲಿ ಪ್ರಕಟಗೊಂಡಿದ್ದ ಪತ್ರಿಕಾ ಜಾಹೀರಾತಿನ ಮೂಲಕ ಕೋಟಯಂನಲ್ಲಿ ರಾಜ್ಯ ಕುಟುಂಬಶ್ರೀ ಮಿಷನ್‌ ತರಬೇತಿ ನೀಡಲಿದೆ ಎಂಬ ವಿಚಾರ ತಿಳಿದು ಭಾಗವಹಿಸಿದ್ದ 4 ಮಂದಿ ಹೆಣ್ಣು ಮಕ್ಕಳು ಈ ಸಂಸ್ಥೆàಯ ಬೆನ್ನೆಲುಬಾಗಿದ್ದಾರೆ. ಮೆಟರ್ನಲ್‌ ನ್ಯಾಪ್ಕಿನ್ ನಿರ್ಮಾಣ ಸಂಬಂಧ ತರಬೇತಿಯನ್ನು ಇವರು ಪಡೆದಿದ್ದರು. ಕಾಸರಗೋಡು, ಕಾಂಞಂಗಾಡು, ಪಯ್ಯನ್ನೂರು, ಕಣ್ಣೂರು ಪ್ರದೇಶಗಳ ಖಾಸಗಿ ಮತ್ತು ಸಹಕಾರಿ ಆಸ್ಪತ್ರೆಗಳಲ್ಲಿ ಇವರ ಉತ್ಪನ್ನಗಳಿಗೆ ಧಾರಾಳ ಬೇಡಿಕೆಗಳಿವೆ. ಜಿಲ್ಲೆಯ ನ್ಯಾಪ್ಕಿನ್ ನಿರ್ಮಾಣ ವಲಯದಲ್ಲಿರುವ ಏಕೈಕ ಕುಟುಂಬಶ್ರೀ ಇದಾಗಿದೆ. ಹತ್ತು ನ್ಯಾಪ್ಕಿನ್ ಗಳಿರುವ 70 ಪ್ಯಾಕೆಟ್‌ಗಳನ್ನು ದಿನವೊಂದಕ್ಕೆ ಇಲ್ಲಿ ನಿರ್ಮಿಸಲಾಗುತ್ತಿದೆ.
– ಉಷಾ ರಾಜನ್‌, ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next