ಕುಷ್ಟಗಿ: ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಸ್ಥಳೀಯ ಪುರಸಭೆಯ ಗಮನಕ್ಕಿಲ್ಲದೇ 2 ಕಿ.ಮೀ. ಪರ್ಯಾಯವಾಗಿ ಪವನ ವಿದ್ಯುತ್ ಉತ್ಪದನಾ ಖಾಸಗಿ ಕಂಪನಿಯ ತಾತ್ಕಾಲಿಕ ರಸ್ತೆ ನಿರ್ಮಿಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಹೊಸ ರಸ್ತೆಯು ಕುಷ್ಟಗಿ – ಹೊಸಪೇಟೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಿಂದ (ಕಾರ್ಗಿಲ್ ಪೆಟ್ರೋಲ್ ಬಂಕ್ ಹತ್ತಿರ) 1ನೇ ವಾರ್ಡ್ ವ್ಯಾಪ್ತಿಯ ಸಂತ ಶಿಶುನಾಳ ಷರೀಪ್ ಕಾಲೋನಿ, ಕಂದಕೂರು ರಸ್ತೆ ಕ್ರಾಸ್ ಆಗಿ, ಸಿಂಧನೂರು ರಸ್ತೆಗೆ ಸಂಪರ್ಕ ರಸ್ತೆ ಇದಾಗಿದೆ. 40 ಅಡಿ ಅಗಲೀಕರಿಸಿದ ಈ ರಸ್ತೆಯಲ್ಲಿ ಮರಮ್ ಮಣ್ಣಿನ ರಸ್ತೆ ನಿರ್ಮಿಸುವ ಕಾರ್ಯದಲ್ಲಿ ಜೆಸಿಬಿ, ಹಿಟಾಚಿ, ಟಿಪ್ಪರ್ ಟ್ರಾಕ್ಟರ್ ಗಳು ನಿರತವಾಗಿರುವುದು ಕಂಡು ಬಂದಿದೆ. ಸಂತ ಶಿಶುನಾಳ ಷರೀಫ್ ಕಾಲೋನಿಯ ಹಿಂಭಾಗದಲ್ಲಿ ರೈತರ ಕಡಲೆ, ಜೋಳದ ಬೆಳೆಯ ಮಧ್ಯೆ ಈ ರಸ್ತೆಯನ್ನು ರೈತರಿಗೆ ಬೆಳೆ ಪರಿಹಾರ ನೀಡಿ, 1 ವರ್ಷದ ಒಪ್ಪಂದದ ಆಧಾರದಲ್ಲಿ ನಿರ್ಮಿಸುತ್ತಿದ್ದಾರೆ. ಈ ತಾತ್ಕಾಲಿಕ ರಸ್ತೆಯಲ್ಲಿ ರೈತರ ಜಮೀನು, ಖಾಲಿ ಜಮೀನು, . ನಿವೇಶನಗಳಿದ್ದರೂ, ಪುರಸಭೆ ಗಮನಕ್ಕೆ ತರದೇ ಈ ರಸ್ತೆ ನಿರ್ಮಿಸಿದೆ.
ಪರ್ಯಾಯ ರಸ್ತೆ: ಪವನ ವಿದ್ಯುತ್ ಉತ್ಪಾದನಾ ಖಾಸಗಿ ಕಂಪನಿ, ಗಾಳಿಯಂತ್ರದ ಬ್ಲೇಡ್ (ರೆಕ್ಕೆ), ಟರ್ಬನ್ ಗಳನ್ನು ಒಂದೆಡೆ ಸಂಗ್ರಹಿಸಲು ಗುಮಗೇರಾ ಬಳಿ 10 ಎಕರೆ ಪ್ರದೇಶ ಸ್ಟಾಕ್ ಯಾರ್ಡ್ ನಿಗದಿಗೊಳಿಸಿದೆ. ಬೃಹತ್ ಗಾಳಿ ಯಂತ್ರಗಳ ರೆಕ್ಕೆಗಳನ್ನು ಹೊತ್ತು ತರುವ ವಾಹನಗಳು ಹೊಸಪೇಟೆ ಕಡೆಯಿಂದ, ಹೆದ್ದಾರಿ ಮೂಲಕ ಪಟ್ಟಣಕ್ಕೆ ಆಗಮಿಸಿ. ಪಟ್ಟಣದ ಸರ್ವಿಸ್ ರಸ್ತೆಯ ಮೂಲಕ ಹೆದ್ದಾರಿ ಮೇಲ್ಸೇತುವೆ ಕೆಳಗೆ ತಿರುವು ಮಾಡಿಕೊಂಡು ಸಿಂಧನೂರು ರಸ್ತೆಯ ಮೂಲಕ ಗುಮಗೇರಿಗೆ ಹೋಗುವುದು ಅಸಾಧ್ಯವಾಗಿದೆ. ಯಾಕೆಂದರೆ ಗಾಳಿಯಂತ್ರದ ರೆಕ್ಕೆಗಳು ಮೇಲ್ಸೇತುವೆಗೆ ತಾಕುವ ಹಿನ್ನೆಲೆಯಲ್ಲಿ ಬದಲಾದ ಈ ವ್ಯವಸ್ಥೆಯಾಗಿದೆ. ಹೀಗಾಗಿ ಪಟ್ಟಣದ ಹೊರವಲಯದಲ್ಲಿ ಸದ್ದಿಲ್ಲದೇ ಈ ಖಾಸಗಿ ರಸ್ತೆ 1 ವರ್ಷದ ಕಾಲಾವಧಿಗೆ ಮಾತ್ರ ಒಪ್ಪಂದವಾಗಿದೆ.
ಪುರಸಭೆ ವ್ಯಾಪ್ತಿಯಲ್ಲಿ ಪವನ ವಿದ್ಯುತ್ ಉತ್ಪಾದನಾ ಖಾಸಗಿ ರಸ್ತೆ ನಿರ್ಮಿಸುತ್ತಿರುವುದು ಸರಿ. ಇದು ಖಾಸಗಿ ಕಂಪನಿಯಾಗಿದ್ದು, ಆದರೆ ಕಡೇ ಪಕ್ಷ ಪುರಸಭೆ ಅನುಮತಿ ಪಡೆಯದೇ ತಾತ್ಕಾಲಿಕ ನಿರ್ಮಿಸಿದೆ. ಇದರಿಂದ ಕೆಲವರ ನಿವೇಶನ, ರೈತರ ಜಮೀನು ಹಾಳಾಗಿವೆ. ಸದ್ಯ ತಾತ್ಕಾಲಿಕ ರಸ್ತೆ ಇದು ಮುಂದೆ ಖಾಯಂ ರಸ್ತೆಯಾಗುವ ಸಂಭವವಿದೆ. ಸಂಬಂಧಿಸಿದ ಕಂಪನಿಯನ್ನು ವಿಚಾರಿಸಿದರೂ ಕ್ಯಾರೇ ಎನ್ನದೇ ನಿರ್ಮಿಸಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರಗೆ ದೂರು ನೀಡಿದ್ದೇವೆ.
– ಗಂಗಾಧರಸ್ವಾಮಿ ಹಿರೇಮಠ ಅಧ್ಯಕ್ಷ ಪುರಸಭೆ ಕುಷ್ಟಗಿ
ಇದನ್ನೂ ಓದಿ: ಕ್ರಿಸ್‍ಮಸ್, ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆ: ಗೋವಾದಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ