ಕುಷ್ಟಗಿ : ಇಲ್ಲಿನ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆಯ ಎಸ್.ಡಿ.ಸಿ. ನೌಕರ ಬಸವರಾಜ್ ಮುಂಡಾಸದ ಆಸ್ಪತ್ರೆಯ ಆವರಣದಲ್ಲಿ ನರಕ ಯಾತನೆಯಲ್ಲಿ ಕೊನೆಯುಸಿರೆಳೆದರು.
ಗ್ಯಾಂಗ್ರೀನ್ ಕಾಯಿಲೆಯಿಂದ ಕಾಲಿನ ಗಾಯಕ್ಕೆ ನರಕಯಾತನೆ ಅನುಭವಿಸುತ್ತಿದ್ದು, ಕಾಲಿನ ಗಾಯ ಉಲ್ಬಣಿಸಿ ಹುಳು ಬಿದ್ದು ದುರ್ನಾತದಲ್ಲಿ ನೌಕರ ಬಸವರಾಜ ಮುಂಡಾಸದ್ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಹೊರ ಆವರಣದ ಬೆಂಚ್ ಕೆಳಗೆ ನೆಲ ಹಿಡಿದಿದ್ದರು.
ಇವರ ಸ್ವಗ್ರಾಮ ಗದಗ ಜಿಲ್ಲೆಯ ಪೇಟಾಲೂರು ಗ್ರಾಮದರಾಗಿದ್ದು ಪತ್ನಿ ಅದೇ ಗ್ರಾಮದಲ್ಲಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದರೂ ನೆರವಿಗೆ ಬಂದಿರಲಿಲ್ಲ. ಮಾನವೀಯತೆ ಮರೆತಿದ್ದ ಸದರಿ ಕುಟುಂಬದವರು ಬಸವರಾಜ್ ಮುಂಡಾಸದ ಕೊನೆಯ ಸ್ಥಿತಿಯಲ್ಲಿ ಬಂದಿರಲಿಲ್ಲ. ಹಲವು ದಿನಗಳಿಂದ ನರಕಯಾತನೆ ಅನುಭವಿಸಿ ಬುಧವಾರ ಬಸವರಾಜ ಮುಂಡಾಸದ ಕೊನೆಯುಸಿರೆಳೆದಿದ್ದಾರೆ. ಸರ್ಕಾರಿ ನೌಕರನ ದುರಂತ ಅಂತ್ಯ ಕಂಡಿರುವುದು ದುರದೃಷ್ಟಕರ ಎನಿಸಿದೆ. ಬಸವರಾಜ ಮುಂಡಾಸದ್ ಶವ ಇಲ್ಲಿನ ಶವಗಾರದಲ್ಲಿದ್ದು, ಅವರ ಪತ್ನಿ ಹಾಗೂ ಮಕ್ಕಳಿಗೆ ಮಾಹಿತಿ ನೀಡಲಾಗಿದೆ. ಕುಟುಂಬದವರು ಶವ ತೆಗೆದುಕೊಂಡು ಬರುವುದಾಗಿ ತಿಳಿಸಿದ್ದು, ಬಾರದೇ ಇದ್ದರೆ ಇಲಾಖೆಯವರೇ ಅಂತಿಮ ಸಂಸ್ಕಾರ ಮಾಡುವುದಾಗಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಅಖಿಲ್ ತಿಳಿಸಿದ್ದಾರೆ.
ಇದನ್ನೂ ಓದಿ : ಎಡಗೈಯಲ್ಲಿ ಊಟ ಮಾಡಿದಳೆಂದು ಮದುಮಗಳನ್ನು ಬಿಟ್ಟು ಹೊರಟಿದ್ದ ಮದುಮಗ
ಈ ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷ ಅಬ್ದುಲ್ ನಜೀರಸಾಬ್ ಮೂಲಿಮನಿ ಅವರು, ಪಶುಪಾಲನಾ ಹಾಗೂ ಪಶು ಇಲಾಖೆಯ ಎಸ್ ಡಿಸಿ ನೌಕರ ಬಸವರಾಜ ಮುಂಡಾಸದ ಅವರ ಕರುಣಾಜನಕ ಸ್ಥಿತಿಯಿಂದ ಪಾರು ಮಾಡಲು ಯೋಜಿಸಿ ಧಾರವಾಡ ಎಸ್ಡಿಎಂ ನಲ್ಲಿ ಚಿಕಿತ್ಸೆ ವೆಚ್ಚ ಭರಿಸಿ ಜೀವ ಉಳಿಸಬೇಕೆಂದುಕೊಂಡಿದ್ದೇವು. ಆದರೆ ಬುಧವಾರ ನಿಧನರಾಗಿದ್ದಾರೆ. ಅವರ ಕಷ್ಟಕರ ಸ್ಥಿತಿಯಲ್ಲಿ ಅವರಿಗೆ ಸೇವೆ ಮಾಡಲು ಸಾಧ್ಯವಾಗಲಿಲ್ಲ ಎಂದು ವಿಷಾಧ ವ್ಯಕ್ತಪಡಿಸಿದ್ದರು.