ಕುಷ್ಟಗಿ : ಬೇಸಿಗೆಯ ರಣ ಬಿಸಿಲಿನ ತಾಪಮಾನದಲ್ಲೂ ಕುಷ್ಟಗಿಯ ಗ್ರಂಥಾಲಯ ಶಾಖೆ ಹಸಿರಿನಿಂದ ಕಂಗೋಳಿಸುತ್ತಿದ್ದು, ವೈವಿದ್ಯಮಯ ಸಸ್ಯಗಳಿಂದ ಗ್ರಂಥಾಲಯ ಹಸಿರಿನಿಂದಲೇ ಹೆಸರಾಗುತ್ತಿದೆ.
ಕೆಲ ವರ್ಷಗಳ ಹಿಂದೆ ಕುಷ್ಟಗಿ ಗ್ರಂಥಾಲಯ ಎಂದರೆ ಗ್ರಂಥಾಲಯದ ಕಟ್ಟಡದ ಸುತ್ತಲೂ ಬಯಲು ಬಹಿರ್ದೆಸೆ, ಶೌಚ ಮಾಡುತ್ತಿದ್ದರಿಂದ ಓದುಗರು ಮೂಗು ಮುಚ್ಚಿಕೊಳ್ಳುವ ಪರಿಸ್ಥಿತಿ ಇತ್ತು. ಕಳೆದ ಎರಡೂವರೆ ವರ್ಷಗಳ ಹಿಂದೆ ಮಹಾಮಾರಿ ಕೊರೊನಾ ಲಾಕಡೌನ್ ಹಿನ್ನೆಲೆಯಲ್ಲಿ ಗ್ರಂಥ ಪಾಲಕ ಶರಣಪ್ಪ ವಡಿಗೇರಿ ಅವರ ಆಸಕ್ತಿಯಿಂದ ಲಾಕಡೌನ್ ನಲ್ಲಿ ಕಾಲಹರಣ ಮಾಡದೇ ವಿವಿಧ ಬಗೆಯ ಸಸಿಗಳನ್ನು ನಾಟಿ ಮಾಡಿದ್ದು ಅಲ್ಲದೇ ಅಲ್ಲದೇ ಪ್ರತಿ ದಿನ ಅವುಗಳಿಗೆ ನೀರುಣಿಸಿ ಸಂರಕ್ಷಣೆ ಹೊಣೆ ಹೊತ್ತಿದ್ದರಿಂದ ಮೊದಲಿದ್ದ ಗ್ರಂಥಾಲಯ ಈಗಿಲ್ಲ.
ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದೆ. ಇದ್ದ ಸ್ವಲ್ಪ ಜಾಗೆಯಲ್ಲಿ ಬೇವು, ಬದಾಮಿ, ಅಡಿಕೆ, ಯಾಲಕ್ಕಿ, ತೆಂಗು, ಹೊಂಗೆ,ಮಾವು ಹೀಗೆ ಒಂದೇ ಎರಡೇ ಸಸಿಗಳು, ಬಳ್ಳಿಗಳು, ಹೂಗಿಡಗಳು ಅಲ್ಲದೇ ಅಲಂಕಾರಿಕ, ಔಷಧಿ ಸಸ್ಯಗಳನ್ನು ಹಚ್ಚಿದ್ದಾರೆ. ಪ್ರತಿ ದಿನ ಅವುಗಳಿಗೆ ನೀರುಣಿಸುವ ಕೆಲಸ ಅವರದೇ ಆಗಿರುತ್ತದೆ.
ಈ ರೀತಿಯ ಸೇವೆಗೆ ಕುಷ್ಟಗಿ ಶಾಖಾ ಗ್ರಂಥಾಲಯ ಹಸಿರಿನಿಂದ ಮುಚ್ಚಿ ಹೋಗಿದೆ. ಬಟಾ ಬಯಲಾಗಿದ್ದ ಗ್ರಂಥಾಲಯವೀಗ ಎಲ್ಲಿ ನೋಡಲ್ಲಿ ಹಸಿರಾಗಿರುವುದು ಗಮನಾರ್ಹ ಎನಿಸಿದೆ. ಈ ಕುರಿತು ಗ್ರಂಥ ಪಾಲಕ ಶರಣಪ್ಪ ವಡಿಗೇರಿ, ಲಾಕಡೌನ್ ನಲ್ಲಿ ಕೆಲಸ ಇರಲಿಲ್ಲ ಬಿಡುವಿನ ಸಮಯದಲ್ಲಿ ಗಿಡಬಳ್ಳಿಗಳನ್ನು ನಾಟಿ ಮಾಡಿದ್ದೇನೆ. ಇದೀಗ ಎರಡೂವರೆ ವರ್ಷದಲ್ಲಿ ಬೆಳೆದು ನಿಂತಿರುವುದು ನೋಡುವುದೇ ಸಾರ್ಥಕದ ಸಂಗತಿಯಾಗಿದ್ದು, ಓದುಗರ ಬಂದು ಗಿಡದ ನೆರಳಿನಲ್ಲಿ ಓದುವುದು ಖುಷಿ ಎನಿಸುತ್ತಿದೆ. ಈ ಗಿಡಗಳಿಂದಲೇ ಗ್ರಂಥಾಲಯ ಧೂಳು ಮುಕ್ತವಾಗಿದೆ ಎನುತ್ತಾರೆ ಶರಣಪ್ಪ ವಡಿಗೇರಿ.
– ಮಂಜುನಾಥ ಮಹಾಲಿಂಗಪುರ ಕುಷ್ಟಗಿ