ಕುಷ್ಟಗಿ: ಗೃಹ ರಕ್ಷಕರ ಸೇವೆಯನ್ನು ಸರ್ಕಾರ ಗುರುತಿಸಿ, ಕಾಲಕ್ಕೆ ಅನುಗುಣವಾಗಿ ವೇತನ, ಭತ್ತೆ ಪರಿಷ್ಕೃತಗೊಳಿಸುವುದು ಅಗತ್ಯವಾಗಿದೆ ಎಂದು ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಪಿ.ಎನ್. ರಾಜಾ ಹೇಳಿದರು.
ಅವರು ತಾಲೂಕು ಕ್ರೀಡಾಂಗಣದಲ್ಲಿ ಕುಷ್ಟಗಿ ತಾಲೂಕು ಗೃಹರಕ್ಷಕ ದಳ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 13 ಗೃಹರಕ್ಷಕರಿಗೆ ಪದೋನ್ನತಿ ಪತ್ರ ನೀಡಿ ಮಾತನಾಡಿದರು.
ಗೃಹರಕ್ಷಕರಿಗೆ ಕಾಯಂ ಕೆಲಸ ಸಿಗುವುದು ವಿರಳ. ಅಗತ್ಯ ಸಂದರ್ಭದಲ್ಲಿ ಗೃಹರಕ್ಷಕರ ಸೇವೆ ಪಡೆಯಲಾಗುತ್ತದೆ. ಇಷ್ಟಿದ್ದರೂ ಗೃಹರಕ್ಷಕರು ಕೆಲಸ ನಿರ್ವಹಿಸಿದ್ದಕ್ಕೆ ದಿನದ ಭತ್ತೆ 350 ರೂ. ಸಿಗುತ್ತಿದೆ. ಇದರಿಂದ ಅವರ ಕುಟುಂಬ ನಿರ್ವಹಣೆ ಕಷ್ಟಸಾಧ್ಯ. ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ ಮಾದರಿಯಲ್ಲಿ ವೇತನ ಕಲ್ಪಿಸುವುದು ಅಗತ್ಯವಾಗಿದೆ ಎಂದರು.
ಹಿರಿಯ ಪ್ಲಟೂನ್ ಕಮಾಡೆಂಟ್ ರವೀಂದ್ರ ಬಾಕಳೆ ಮಾತನಾಡಿ, ಗೃಹರಕ್ಷಕರನ್ನು ಉತ್ತಮ ಸೇವೆಯಿಂದಲೇ ಗುರುತಿಸಲಾಗುತ್ತಿದೆ. ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಸೇವೆಗೆ ಮನ್ನಣೆ ಸಿಗಲು ಸಾಧ್ಯವಿದೆ. ಕುಷ್ಟಗಿ ತಾಲೂಕಿನಲ್ಲಿ 28 ವರ್ಷಗಳಿಂದ ಗೃಹರಕ್ಷಕ ದಳ ಸೇವೆಯಲ್ಲಿದ್ದರೂ ಸ್ಥಳೀಯ ಪುರಸಭೆ, ಜನಪ್ರತಿನಿಧಿಗಳು ಸ್ವಂತ ಕಟ್ಟಡ ಕಲ್ಪಿಸದೇ ಇರುವುದು ಇದಕ್ಕಿಂತ ದೌರ್ಭಾಗ್ಯ ಬೇರೊಂದಿಲ್ಲ.
ಇದೇ ವೇಳೆ ಜಿಲ್ಲಾ ಶಿವಪ್ಪ ಚೂರಿ (ಸಿ.ಎಸ್.ಎಂ.), ಸಕ್ರಪ್ಪ ಕೊಂಡಗುರಿ (ಸಿ.ಕ್ಯೂ.ಎಂ.ಎಸ್)., ಮಲ್ಲಪ್ಪ ಕಂಚಿ, ಆಂಜನೇಯ ಪೂಜಾರ (ಪ್ಲಟೂನ್ ಸಾರ್ಜೆಂಟ್), ಸಂತೋಷ ಯಳಗಂಟಿ, ಲಕ್ಷ ್ಮಣ ಕಟ್ಟಿಮನಿ, ಮುಸ್ತಫಾ ಅಲಿ, ಮಹಾಂತೇಶ ಹಡಪದ (ಸೆಕ್ಷನ್ ಲೀಡರ್) ಶರಣಬಸಪ್ಪ ಜಿ., ಸೈಯ್ಯದ್ ತಾಜುದ್ದೀನ್, ಮಲ್ಲಿಕಾರ್ಜುನ ಬಳೂಟಗಿ, ಮರಿಯಪ್ಪ ತಳವಾರ, ರಾಜಾಸಾಬ್ (ಸಹಾಯಕ ಸೆಕ್ಷನ್ ಲೀಡರ್) ಅವರಿಗೆ ಪದೋನ್ನತಿ ನೀಡಲಾಯಿತು.
ಉತ್ತಮ ಸೇವೆ ಸಲ್ಲಿಸಿದ ಗೃಹರಕ್ಷಕ ವಾಹೀದ್ ಮಿಯಾ, ಗೃಹರಕ್ಷಕ ದಳದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ 100 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಹುಸೇನ್ ಅರಳಿಹಳ್ಳಿ ಅವರನ್ನು ಸನ್ಮಾನಿಸಲಾಯಿತು. ಅಗ್ನಿಶಾಮಕ ಠಾಣೆಯ ದಫೇದಾರ ರಾಮಪ್ಪ, ಘಟಕಾಧಿಕಾರಿ ನಾಗರಾಜ್ ಬಡಿಗೇರ ಸೇರಿದಂತೆ ಮತ್ತಿತರಿದ್ದರು.