ಕುಷ್ಟಗಿ: ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಬಿತ್ತನೆಗಾಗಿ ಡಿಎಪಿ ಗೊಬ್ಬರ ಖರೀದಿಸಲು ಗೊಬ್ಬರ ಅಂಗಡಿಗಳಿಗೆ ಮುಗಿ ಬಿದ್ದಿದ್ದಾರೆ. ಡಿಎಪಿ ಗೊಬ್ಬರದ ಜೊತೆಗೆ ಸೆಟ್ ರೈಟ್ (ಜಿಂಕ್, ಕ್ಯಾಲ್ಸಿಯಂ, ಸಲ್ಪರ್) ಲಘು ಪೋಷಕಾಂಶ ಕಡ್ಡಾಯ ಖರೀದಿ ರೈತರಿಗೆ ಹೊರೆಯಾಗಿದೆ.
ತಾಲೂಕಿನಾದ್ಯಂತ ಉತ್ತಮ ಮಳೆಯಾಗಿರುವ ಬೆನ್ನಲ್ಲೇ ರೈತರು, ಬಿತ್ತನೆ ಬೀಜದೊಂದಿಗೆ ಬಿತ್ತಲು ಡಿಎಪಿ ರಸ ಗೊಬ್ಬರ ಖರೀಧಿಗೆ ಗೊಬ್ಬರ ದಾಸ್ತಾನು ಮಳಿಗೆಯತ್ತ ಮುಖ ಮಾಡಿದ್ದಾರೆ. ರಸಗೊಬ್ಬರ ಖರೀಧಿ ಜೋರಾಗುತ್ತಿದ್ದಂತೆ ರೈತರು ಸರದಿಯಲ್ಲಿ ನಿಂತು ಖರೀಧಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಬೀಜ ಗೊಬ್ಬರ ಅಂಗಡಿಗಳ ಮುಂದೆ ರೈತರು ಮುಗಿಬಿದ್ದು ಖರೀದಿಸುವ ದೃಶ್ಯ ಕಂಡು ಬಂದಿದೆ.
ಡಿಎಪಿ ರಾಸಾಯನಿಕ ಗೊಬ್ಬರ ಪ್ರತಿ 50 ಕೆ.ಜಿ. ಚೀಲಕ್ಕೆ1350 ರೂ. ಎಂ.ಆರ್.ಪಿ ಇದ್ದು, ಅಂಗಡಿಕಾರರು 1450 ರೂ.ಗೆ ಮಾರಾಟ ಮಾಡುತ್ತಿದ್ದಾರೆ. ಅಲ್ಲದೇ ಈ ಡಿಎಪಿ ಖರೀದಿಯ ಜೊತೆಗೆ ಸೆಟ್ ರೈಟ್ ಖರೀದಿಸಬೇಕಿದ್ದು ಇದರ ಬೆಲೆ 650 ರೂ ಇದ್ದು ಡಿಎಪಿ ಮತ್ತು ಸೆಟ್ ರೈಟ್ ಸೇರಿದರೆ ಹೆಚ್ಚು ಕಡಿಮೆ 2ಸಾವಿರ ರೂ ಆಗುತ್ತಿದೆ. ಈ ಮೊತ್ತ ರೈತರಿಗೆ ಹೆಚ್ಚುವರಿ ಆಗಿದೆ. ಬಿತ್ತನೆ ಬೀಜದ ಬೆಲೆ ಹೆಚ್ಚಿದ್ದು, ರಸ ಗೊಬ್ಬರವನ್ನು ಪ್ರತಿ ಚೀಲಕ್ಕೆ 100 ರೂ. ಹೆಚ್ಚುವರಿ ಆಗಿದೆ. ಇದರ ಜೊತೆಗೆ ಸೆಟ್ ರೈಟ್ ಕಡ್ಡಾಯ ತೆಗೆದುಕೊಳ್ಳಲೇ ಬೇಕಿದೆ.
ಕೆಲವು ರೈತರು ಅನಿವಾರ್ಯವಾಗಿ ಖರೀದಿಸಿದರೆ ಕೆಲವು ರೈತರು ಗೊಬ್ಬರದ ಅಂಗಡಿಕಾರರೊಂದಿಗೆ ವಾಗ್ವಾದಕ್ಕೆ ಇಳಿಯುತ್ತಿದ್ದಾರೆ. ಸೆಟ್ ರೈಟ್ ಪೋಷಕಾಂಶ ಬಿತ್ತನೆ ಬೀಜದೊಂದಿಗೆ ಬಿತ್ತನೆ ವೇಳೆ ಕೂರಿಗೆಯಲ್ಲಿ ಇಳಿತುವುದಿಲ್ಲ ಎನ್ನಲಾಗುತ್ತಿದೆ. ಡಿಎಪಿ ಗೊಬ್ಬರದೊಂದಿಗೆ ಸೆಟ್ ರೈಟ್ ಲಿಂಕ್ ಮಾಡಿದ್ದು, ಸೆಟ್ ರೈಟ್ ಈ ಪೋಷಕಾಂಶವನ್ನು ರೈತರು ಯಾರೂ ಕೇಳುವುದಿಲ್ಲ. ಆದರೆ ಡಿಎಪಿ ಗೊಬ್ಬರದೊಂದಿಗೆ ತೆಗೆದುಕೊಳ್ಳಬೇಕೆನ್ನುವುದು ರೈತರ ವಿರೋಧಕ್ಕೆ ಕಾರಣವಾಗಿದೆ.
ರೈತರಿಗೆ ಸ್ಪಿಕ್,ಮಂಗಳ ರಸ ಗೊಬ್ಬರದ ಬೇಡಿಕೆ ಇದೆ. ಆದರೆ ಮಾರುಕಟ್ಟೆಯಲ್ಲಿ ಐಪಿಎಲ್, ಇಪ್ಕೋ ಮಾತ್ರ ಲಭ್ಯ ಇದೆ. ಮಂಗಳ, ಸ್ಪಿಕ್ ಗೊಬ್ನರ ನೋಡೇ ಇಲ್ಲ ಸದರಿ ಕಂಪನಿ ತರಿಸುವಂತೆ ಬೇಡಿಕೆ ಇದ್ದರೂ ಗೊಬ್ಬರದ ಅಂಗಡಿಯವರು ತರಿಸುತ್ತಿಲ್ಲ. ರೈತರಿಗೆ ಡಿಎಪಿ ಕರಿ ಕಾಳು ಆಗಿರಬೇಕು ಇದೀಗ ಬರುತ್ತಿರುವ ಗೊಬ್ಬರ ಬಿಳಿ ಕಾಳು ಇದೆ ಎನ್ನುತ್ತಾರೆ ರೈತ ಸುರೇಶ ಮಂಗಳೂರು.
ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು ಈ ಬಾರಿ ರೈತರು ವಾಣಿಜ್ಯ ಹತ್ತಿ, ಸೂರ್ಯಕಾಂತಿ ಬೆಳೆಯಲು ಆಸಕ್ತಿ ಹೊಂದಿದ್ದಾರೆ. ಡಿಎಪಿ ಗೊಬ್ಬರ ಪ್ರತಿ ಚೀಲಕ್ಕೆ ಎಂ.ಆರ್.ಪಿ. ಹೊರತಾಗಿ 100 ರೂ. ಸಾಗಣೆ ವೆಚ್ಚ ಎಂದು ತೆಗೆದುಕೊಳ್ಳುತ್ತಿರುವ ಬಗ್ಗೆ ರೈತರಿಂದ ದೂರು ಬಂದಿದ್ದು ಪರಿಶೀಲಿಸುವುದಾಗಿ ಕೃಷಿ ಅಧಿಕಾರಿ ರಾಘವೇಂದ್ರ ಕೊಂಡಗುರಿ ತಿಳಿಸಿದರು.