ಕುಷ್ಟಗಿ : ಪಟ್ಟಣದ ಪರಿಶಿಷ್ಟ ವರ್ಗದ ವಿದ್ಯಾರ್ಥಿ ವಸತಿ ನಿಲಯದಲ್ಲಿ ಅಡುಗೆ ತಯಾರಿಸುವ ವೇಳೆ ಕುದಿಯುವ ಬಿಸಿ ನೀರು ಮೈಮೇಲೆ ಬಿದ್ದು ಅಡುಗೆ ಸಹಾಯಕ ಶಿವು ಹಳ್ಳಪ್ಪ ಕೊಂಬಿನ್ ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಕಳೆದ ಸೆ. 22 ರಂದು ಒಲೆಯ ಮೇಲಿದ್ದ ಸಾಂಬಾರಿನ ಪಾತ್ರೆಯನ್ನು ಇಳಿಸಲು ಹೋದಾಗ ಕಾಲು ಜಾರಿ ಸುಡುತ್ತಿರುವ ಪಾತ್ರೆಯಲ್ಲಿರುವ ಸಾಂಬಾರ ಪದಾರ್ಥ ಎಲ್ಲಾ ಮೈ ಮೇಲೆ ಸುರಿದಿದೆ.
ಈ ವೇಳೆ ದೇಹದ ಅರ್ಧ ಭಾಗವೆಲ್ಲ ಸುಟ್ಟು ಹೋಗಿದ್ದು ಕೂಡಲೇ ಅವರನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಅಲ್ಲಿ ವಿಷಮ ಸ್ಥಿತಿ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡ ಎಸ್ ಡಿ ಎಂ ದಾಖಲಿಸಲಾಯಿತು. ಆದರೆ ಶೇ.50 ರಷ್ಟು ದೇಹದ ಭಾಗ ಸುಟ್ಟಿದ್ದರಿಂದ ಸದರಿ ಆಸ್ಪತ್ರೆಯವರು ದಾಖಲಿಸಕೊಳ್ಳಲಿಲ್ಲ. ನಂತರ ಹುಬ್ಬಳ್ಳಿ ಕಿಮ್ಸ್ ಸೇರಿದಂತೆ ಇನ್ನೆರಡು ಖಾಸಗಿ ಅಸ್ಪತ್ರೆಗಾಗಿ ಆ್ಯಂಬ್ಯಲೆನ್ಸ್ ನಲ್ಲಿ ಸುತ್ತಾಡಿದ್ದು ಕೊನೆಯದಾಗಿ ಸೆಕ್ಯೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಜೀವನ್ಮರಣದ ಹೋರಾಟದಲ್ಲಿ ಅತಂತ್ರ ಸ್ಥಿತಿ ಎದುರಿಸಿದ ಡಿ ದರ್ಜೆ ನೌಕರ ತಾಲೂಕಿನ ತಾವರಗೇರಾ ಗ್ರಾಮದವ. ತಂದೆ ಮತ್ತು ತಾಯಿ ಇಲ್ಲದ ಅನಾಥ.
ನಮ್ಮ ನೌಕರ ಹುಬ್ಬಳ್ಳಿ ಸೆಕ್ಯೂರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಪರಿಶಿಷ್ಟ ವರ್ಗ ಕಲ್ಯಾಣ ಅಧಿಕಾರಿ ಈರಪ್ಪ ಅವರು ಹೇಳಿದ್ದಾರೆ.
ಇದನ್ನೂ ಓದಿ : ವ್ಯಕ್ತಿ ಕೋಮಾದಲ್ಲಿ ಇದ್ದಾನೆ ಎಂದು 18 ತಿಂಗಳು ಮೃತದೇಹವನ್ನು ಮನೆಯಲ್ಲಿರಿಸಿದ್ದ ಕುಟುಂಬ