ಕುಷ್ಟಗಿ : 75 ನೇ ವರ್ಷದ ಆಗಸ್ಟ್ 15 ಸ್ವಾತಂತ್ರ್ಯ ಮಹೋತ್ಸವದ ಹಿನ್ನೆಲೆಯಲ್ಲಿ ಅಮೃತ ಸರೋವರ ಯೋಜನೆಯ ವ್ಯಾಪ್ತಿಯಲ್ಲಿ ಕುಷ್ಟಗಿ ತಾಲೂಕಿನ 23 ಕೆರೆಗಳನ್ನು ಆಯ್ಕೆ ಮಾಡಲಾಗಿದೆ.
ಆಗಸ್ಟ್ -15 ಸ್ವಾತಂತ್ರ್ಯ ದಿನೋತ್ಸವದ ವೇಳೆಗೆ ನಾಲ್ಕು ಸಣ್ಣ ಕೆರೆಗಳನ್ನು ಸದರಿ ಯೋಜನೆ ಅಡಿಯಲ್ಲಿ ಮಾದರಿಯಾಗಿ ಅಭಿವೃದ್ಧಿ ಪಡಿಸಲು ನಿಗದಿತ ಗುರಿ ಹೊಂದಲಾಗಿದ್ದು ಕಾಮಗಾರಿ ತ್ವರಿತಗತಿಯಲ್ಲಿ ಸಾಗಿದೆ.
ತಾಲೂಕಿನ ಕಾಟಾಪೂರ ಕೆರೆ, ಮುದೇನೂರು ಗ್ರಾಮ ಪಂಚಾಯತಿಯ ಮಾದಾಪೂರ ಕೆರೆ, ಮೆಣೆದಾಳ ಗ್ರಾಮ ಪಂಚಾಯತಿಯ ಹುಲಿಕೆರೆ ಹಾಗೂ ಗುಮಗೇರಾ ಕೆರೆ ಅಮೃತ ಸರೋವರ ಕೆರೆಗಳಾಗಿ ಅಭಿವೃದ್ಧಿಗೆ ಕೈಗೆತ್ತಿಕೊಳ್ಳಲಾಗಿದೆ.
ಈ ಹಿನ್ನೆಲೆಯಲ್ಲಿ ಮಂಗಳವಾರ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಪೌಜಿಯಾ ತರನ್ನುಮ್ ಅವರು, ಗುಮಗೇರಾ ಗ್ರಾಮದ ಕೆರೆಯನ್ನು ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಅಮೃತ ಸರೋವರ ಕೆರೆಯನ್ನಾಗಿ ನಿರ್ಮಿಸಲು ಕ್ರಮ ಕೈಗೊಂಡಿದೆ. ಈಗಾಗಲೇ ಹೂಳೆತ್ತಲಾಗಿರುವ ಕೆರೆಯಲ್ಲಿ ಬಂಡಿಂಗ್, ಪಿಶ್ಚಿಂಗ್, ಅರಣ್ಯೀಕರಣ ಸಸಿ ನೆಡುವಿಕೆ, ಪಾದಚಾರಿ ರಸ್ತೆ ಇತ್ಯಾದಿಗಳನ್ನು ನಿಯಮಾನುಸಾರವಾಗಿ ಅನುಷ್ಠಾನಿಸುವಂತೆ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಿವಪ್ಪ ಸುಭೇಧಾರ ಹಾಗು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ಇದೇ ವೇಳೆ ಮೆಣೆಧಾಳ ಗ್ರಾಮದ ಜಿನುಗು ಕೆರೆ, ಹುಲಿಕೆರೆಗಳನ್ನು ಅಮೃತ ಸರೋವರ ಕೆರೆಗಳನ್ನಾಗಿ ನಿರ್ಮಿಸಲು ಉದ್ದೇಶದ ಹಿನ್ನೆಲೆಯಲ್ಲಿ ಸದರಿ ಕೆರೆಗಳ ಪ್ರಗತಿಯನ್ನು ಸ್ಥಳಕ್ಕೆ ಖುದ್ದು ಭೇಟಿ ಪರಿಶೀಲಿಸಿ ಅನಗತ್ಯ ಕಾಮಗಾರಿಗಳನ್ನು ನಿರ್ವಹಿಸದಂತೆ ಎಚ್ಚರಿಸಿದರು.
ಇದನ್ನೂ ಓದಿ : ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ನಿರ್ಧಾರ; ಮೈಸೂರು ದಸರಾ ಬ್ರ್ಯಾಂಡ್ ಸೃಜನೆ; ಸಿಎಂ ಬೊಮ್ಮಾಯಿ