ಕುಷ್ಟಗಿ: ಪಟ್ಟಣದ ಹೊರವಲಯದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕಳ್ಳರು ದೇವಿಯ ಅರ್ಧ ತೊಲೆ ತಾಳಿ ಸೇರಿದಂತೆ ಹುಂಡಿ ಕಳವು ಮಾಡಿರುವ ಘಟನೆ ಸೆ.9ರ ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಕಳೆದ ಶ್ರಾವಣ ಶುಕ್ರವಾರ, ವಿಶೇಷ ಪೂಜೆ ಹಿನ್ನೆಲೆಯಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಿಯ ಅಭರಣ ಹಾಗೆಯೇ ಬಿಡಲಾಗಿತ್ತು. ಇದನ್ನು ಗಮನಿಸಿಯೇ ಕಳ್ಳರು ಕಳವು ಮಾಡಿರುವ ಶಂಕೆ ಇದೆ.
ದೇವಿಯ ಅರ್ಧ ತೊಲ ಚಿನ್ನದ ತಾಳಿ, ಬೆಳ್ಳಿ ಕಡಗ, ಕಾಲ್ಗಜ್ಜೆ ಸೇರಿದಂತೆ ದೇವಿಯ ಬಳಿಯಿದ್ದ ವಿಘ್ನೇಶ್ವರ ಮೂರ್ತಿ, ಆರತಿ ತಟ್ಟಿ ಕಳವು ಮಾಡಿದ್ದಾರೆ. ಅದಲ್ಲದೇ ದೇವಸ್ಥಾನದ ಹುಂಡಿ ಒಡೆದು ತೋಚಿದ್ದಾರೆ. ಕೆಲ ದಿನಗಳಿಂದ ದೇವಸ್ಥಾನದ ಗಂಟೆ ಕಳವು ಆಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಕೆಲವು ದಿನಗಳಿಂದ ಪುಡಿಗಳ್ಳರು ಹೊರವಲಯದ ಅನ್ನಪೂರ್ಣೇಶ್ವರಿ ದೇವಿಯ ಹುಂಡಿ ಒಡೆದಿದ್ದರು. ಪದೇ ಪದೇ ದೇವಸ್ಥಾನಗಳಿಗೆ ಪುಡಿಗಳ್ಳರ ಹಾವಳಿ ನಿಯಂತ್ರಣಕ್ಕೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.