Advertisement

Kushtagi; ಶಿಕ್ಷಕರ ಶ್ರಮ-ಹಳ್ಳಿಯ ಸರ್ಕಾರಿ ಶಾಲೆಗೆ ʼಹೈಟೆಕ್‌ʼ ಸ್ಪರ್ಶ

03:33 PM Sep 05, 2024 | Team Udayavani |

ಕುಷ್ಟಗಿ: ಶಿಕ್ಷಕರ ಇಚ್ಛಾಶಕ್ತಿ, ಸಮುದಾಯದ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಯನ್ನು ಹೇಗೆ ಅಭಿವೃದ್ಧಿ ಸಾಧ್ಯ ಎಂಬುದಕ್ಕೆ ತಾಲೂಕಿನ ಎಂ.ರಾಂಪೂರ ಸರ್ಕಾರಿ ಶಾಲೆ ನಿದರ್ಶನವಾಗಿದೆ.

Advertisement

ಗ್ರಾಮ್ಯ ಶಾಲೆಯಾಗಿದ್ದರೂ, ಮೂಲ ಸೌಕರ್ಯಗಳು ನಗರದ ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ. ಗಮನಾರ್ಹವಾದ ಈ ಬದಲಾವಣೆಗೆ ಶಿಕ್ಷಕ ರಾಜು ಭೀಮಪ್ಪ ರಾಠೊಡ್‌ ಅವರ ಇಚ್ಛಾಶಕ್ತಿಗೆ ಸಮುದಾಯ ಬೆನ್ನೆಲೆಬಾಗಿ ನಿಂತಿದೆ. ಎಕೋಪಾಧ್ಯಯ ಈ ಶಾಲಾ ಶಿಕ್ಷಕನಿಗೆ ಗೋಪಮ್ಮ ಹರಿಜನ ಹಾಗೂ ಮಲ್ಲಪ್ಪ ತಿಮ್ಮಾಪುರ ಅತಿಥಿ ಶಿಕ್ಷಕರು ಸಾಥ್‌ ನೀಡಿದ್ದಾರೆ.

ರಾಜು ರಾಠೊಡ್‌ ಅವರು, 2010ರಲ್ಲಿ ಶಿಕ್ಷಕರಾಗಿ ಮೊದಲ ವೃತ್ತಿಸೇವೆ ಆರಂಭಿಸಿದರು. ಇದೇ ಶಾಲೆಯಲ್ಲಿ. ಆದರೆ ಇಲಾಖೆಯ ಆದೇಶದ ಮೇರೆಗೆ ಹೊನಗಡ್ಡಿ, ಹೊಮ್ಮಿನಾಳ ಶಾಲೆಯಲ್ಲಿ ತಲಾ 1 ವರ್ಷ ಹಾಗೂ ಹಿರೇಮುಕರ್ತಿನಾಳ ಶಾಲೆಯಲ್ಲಿ 4 ವರ್ಷ ನಿಯೋಜನೆ ಮೇರೆಗೆ ಸೇವೆ ಸಲ್ಲಿಸಬೇಕಾಯಿತು. ನಂತರ 2016-2017ರಿಂದ ಇದೇ ಶಾಲೆಯಲ್ಲಿ ಸೇವೆ ಮುಂದುವರಿಸಿದ ಶಿಕ್ಷಕ ರಾಜು ರಾಠೊಡ್‌ ಅವರು ಸಮುದಾಯದ ವಿಶ್ವಾಸದ ಮೇರೆಗೆ ಹಳ್ಳಿ ಶಾಲೆಯನ್ನು ಹೈಟೆಕ್‌ ಶಾಲೆಯಾಗಿ ಬದಲಾಯಿಸಿದ್ದಾರೆ.

ಸಹಭಾಗಿತ್ವದ ಮಂತ್ರ: ಸಮುದಾಯದ ವಂತಿಗೆಯ ಆರ್ಥಿಕ ಮೂಲದಿಂದ 4 ಮತ್ತು 5ನೇ ತರಗತಿ ಸ್ಮಾರ್ಟ್‌ಕ್ಲಾಸ್‌ ವ್ಯವಸ್ಥೆಯಲ್ಲಿ ಮಕ್ಕಳು 1.30 ಲಕ್ಷ ರೂ. ವೆಚ್ಚದ ಸ್ಮಾರ್ಟ್‌ ಟಿವಿಯ ಮೂಲಕ ಕಲಿಕಾ ನಿರತರಾಗಿದ್ದಾರೆ. ಕೆಕೆಆರ್‌ಡಿಬಿ ಯೋಜನೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯದಲ್ಲಿ 1ರಿಂದ 3ನೇ ತರಗತಿಗಳು ನಲಿ-ಕಲಿ ತರಗತಿ ನಡೆಯುತ್ತಿವೆ. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಖಾಸಗಿ ಶಾಲೆಯತ್ತ ಮುಖ ಮಾಡಿದ್ದ ಮಕ್ಕಳು ಈ ಬದಲಾವಣೆಯಿಂದ ಈ ಶಾಲೆಯತ್ತ ಮುಖ ಮಾಡಿದ್ದಾರೆ. ಇದರಿಂದ ಶಾಲೆಯ ಹಾಜರಾತಿ ಶೇ.90ರಿಂದ ಶೇ95 ರಷ್ಟಾಗಿದೆ.

ಸ್ಪರ್ಧಾತ್ಮಕ ಪರೀಕ್ಷೆಗೂ ಸೈ: ಇದಕ್ಕೆ ಪೂರಕವಾಗಿ ಪ್ರತಿ ವರ್ಷ ಈ ಶಾಲೆಯಿಂದ ವಸತಿ ಶಾಲೆಗೆ 4 ರಿಂದ 5 ಮಕ್ಕಳು ಆಯ್ಕೆಯಾಗುತ್ತಿದ್ದಾರೆ. 2022 ರಲ್ಲಿ 7 ವಿದ್ಯಾರ್ಥಿಗಳು ಮುರಾರ್ಜಿ ದೇಸಾಯಿ ಆಯ್ಕೆಯಾಗಿದ್ದು, ಕಳೆದ ಸಾಲಿನಲ್ಲಿ ಇಬ್ಬರು ವಿದ್ಯಾರ್ಥಿಗಳು ಸೈನಿಕ ಶಾಲೆ, ನಾಲ್ವರು ಮುರಾರ್ಜಿ ದೇಸಾಯಿ ಶಾಲೆಗೆ ಆಯ್ಕೆಯಾಗಿರುವುದು ಗುಣಮಟ್ಟದ ಶಿಕ್ಷಣದಿಂದ ಗುರುತಿಸಿಕೊಂಡಿದೆ.

Advertisement

ಸಮುದಾಯದ ಸಹಕಾರ: ಶಾಲೆಗೆ ಸಮುದಾಯದ ಸಹಕಾರ ಸಿಗುತ್ತಿದೆ. ಈಗಾಗಲೇ 3.50 ಲಕ್ಷ ರೂ. ಸಮುದಾಯ ದಿಂದಲೇ ಬಂದಿರುವುದು ವಿಶೇಷ ಅನಿಸಿದೆ. ಈ ಹಣದಿಂದ ಶಾಲೆಗೆ ಆಕರ್ಷಕ ಬಣ್ಣ, ಆಯಾ ವರ್ಗಕ್ಕೆ ಸಂಬಂಧಿಸಿದ ಮಾದರಿ ಚಿತ್ರಗಳನ್ನು ವರ್ಗದ ಕೊಠಡಿಯಲ್ಲಿ ಚಿತ್ರಿಸಲಾಗಿದೆ. ನಲಿ-ಕಲಿ ಮಕ್ಕಳಿಗೆ ಕಲಿಕೆಗೆ ಪೂರಕವಾಗಿ ಕುರ್ಚಿಗಳ ಆಸನದ ವ್ಯವಸ್ಥೆ ಇದೆ. ಇದರ ಜೊತೆಗೆ ಶಾಲೆಯಲ್ಲಿ ಸುಸಜ್ಜಿತ ಕೊಠಡಿ, ಬಿಸಿಯೂಟ, ಶೌಚಾಲಯ ಗ್ರಾ.ಪಂ.ಯಿಂದ ಕುಡಿಯುವ ನೀರು ಎಲ್ಲವೂ ಅಚ್ಚುಕಟ್ಟಾಗಿ ನಿರ್ವಹಣೆಯಲ್ಲಿದೆ.

ಶಾಲೆಯ ಮಕ್ಕಳಿಗೆ ಮೈದಾನ ಸಮಸ್ಯೆ ಎದುರಾದಾಗ ಗ್ರಾಮದವರ ಮುಂದಾಳತ್ವದಿಂದ ಗ್ರಾಮದ ಅಜ್ಜಿ ಅಂಬ್ರಮ್ಮ ಹೂಜಿ ಅವರು ಮಕ್ಕಳ ಅನುಕೂಲಕ್ಕಾಗಿ ಹಳೆ ಮನೆ ತೆರವುಗೊಳಿಸಿ ಮೈದಾನಕ್ಕೆ ಜಾಗ ನೀಡಿದರು. ಆಟದ ಮೈದಾನ ವಿಸ್ತರಣೆ ಹಾಗೂ ಶಾಲೆಯ ಕೈತೋಟಕ್ಕೆ ಇನ್ನಷ್ಟು ಜಾಗೆ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶಾಲೆಗೆ ಅಗತ್ಯ ಇರುವ ಜಾಗದ ಖರೀದಿಗೂ ಮುಂದಾಗಿದ್ದಾರೆ. ಇನ್ನೂ ಶಾಲೆಗೆ ಕಾಂಪೌಂಡ್‌ ಹಾಗೂ ಶುದ್ಧ ನೀರಿನ ಘಟಕ ಅಗತ್ಯವಾಗಿದೆ. ಇಷ್ಟೆಲ್ಲಾ ಬೇಡಿಕೆ ಈಡೇರಿರುವಾಗ ಈ ಬೇಡಿಕೆಗಳು ಸಮುದಾಯದಿಂದ ಇಲ್ಲವೇ ಜನಪ್ರತಿನಿ ಧಿಗಳಿಂದ ಈಡೇರುವ ವಿಶ್ವಾಸ ವ್ಯಕ್ತವಾಗಿದೆ.

ಮಕ್ಕಳಿಗೆ ಶಾಲೆ ಎಂದರೆ ಅಚ್ಚುಮೆಚ್ಚು ಆಗಿದ್ದು, ಸ್ಮಾರ್ಟ್‌ ಟಿವಿ ಮೂಲಕ ಶಿಕ್ಷಣದಿಂದ ಮಕ್ಕಳು ಏಕಾಗ್ರತೆಯಿಂದ ಕಲಿಕೆಯಲ್ಲಿ ನಿರತರಾಗಿದ್ದಾರೆ.
ರಾಜು ರಾಠೊಡ್‌, ಶಿಕ್ಷಕ

ಶಿಕ್ಷಕ ರಾಜು ರಾಠೊಡ್‌ ಅವರು ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಶಾಲೆ ಕಾರ್ಯ ಚಟುವಟಿಕೆ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಗ್ರಾಮೀಣ ಶಾಲೆ ಆಧುನಿಕ ಶಿಕ್ಷಣ ವ್ಯವಸ್ಥೆ ಮಕ್ಕಳ ಕಲಿಕೆಗೆ ಪ್ರೇರಣಾತ್ಮಕ ಹಾಗೂ ಪರಿಮಾಣಾತ್ಮಕವಾಗಿದೆ. ಸುರೇಂದ್ರ ಕಾಂಬ್ಳೆ, ಕ್ಷೇತ್ರ ಶಿಕ್ಷಣಾಧಿಕಾರಿ ಕುಷ್ಟಗಿ

-ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next