Advertisement

Karkala: ವ್ಯವಸ್ಥೆ ಹೇಗೇ ಇದ್ದರೂ ಅದನ್ನು ಬದಲಿಸುವ ಶಕ್ತಿ ಶಿಕ್ಷಕನಿಗೆ ಇದೆ

08:28 AM Sep 06, 2024 | Team Udayavani |

ಕಾರ್ಕಳ: ಕಾರ್ಕಳ ತಾಲೂಕಿನ ರೆಂಜಾಳದ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ವಿನಾಯಕ ನಾಯ್ಕ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. 17 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಹಲವು ಸಾಧನೆಗಳ ಮೂಲಕ ಗಮನ ಸೆಳೆದ ಇವರು, ಜಿಲ್ಲೆಯಲ್ಲಿ ಮೊತ್ತ ಮೊದಲ ಸಮಾಜ ವಿಜ್ಞಾನ ಡಿಜಿಟಲ್‌ ಲ್ಯಾಬ್‌ ಮಾಡಿದ್ದು ಬದುಕಿನ ಅವಿಸ್ಮರಣೀಯ ಕ್ಷಣ ಎನ್ನುತ್ತಾರೆ. ಅವರೊಂದಿಗೆ ಕಿರು ಸಂದರ್ಶನ ಇಲ್ಲಿದೆ.

Advertisement

ಶಿಕ್ಷಕನಾಗಬೇಕು ಎನ್ನುವ ಆಸೆ ಹುಟ್ಟಿದ್ದು ಹೇಗೆ? ಸಾಧನೆ ಸಾಧ್ಯವಾಗಿದ್ದು ಹೇಗೆ?

ಬೋಧನೆ ನನ್ನ ಇಷ್ಟದ ಕೆಲಸ, ಪ್ರೀತಿಯ ವೃತ್ತಿ. ನಾನು ಕಲಿಯುವಾಗ ಸರಕಾರಿ ಶಾಲೆಯಲ್ಲಿ ಯಾವುದೇ ಸೌಲಭ್ಯ ಇರಲಿಲ್ಲ. ನಾನು ಕಲಿಸುತ್ತಿರುವ ಮಕ್ಕಳಿಗೆ ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎನ್ನುವ ಮನೋಭಾವನೆಯಿಂದ ಹೊಸ ತಂತ್ರಗಳ ಹುಡುಕಾಟ ಸಾಧ್ಯವಾಯಿತು.

ವರ್ತಮಾನಕ್ಕೆ ಹೊಂದಿಕೊಳ್ಳುವ ಹಾಗೆ ತಂತ್ರಜ್ಞಾನಗಳನ್ನು ಬಳಸುತ್ತಾ, ವಿದ್ಯಾರ್ಥಿಗಳ ಮನೋಮಟ್ಟಕ್ಕೆ ಇಳಿದಾಗ ಮಾತ್ರ ವಿದ್ಯಾರ್ಥಿಗಳ ಪ್ರೀತಿಯ ಶಿಕ್ಷಕನಾಗಲು ಸಾಧ್ಯ ಎನ್ನುವುದು ನನ್ನ ನಂಬಿಕೆ.

ಶಿಕ್ಷಕ ವೃತ್ತಿಯಲ್ಲಿ ಮರೆಯಲಾಗದ ಅವಿಸ್ಮರಣೀಯ ಕ್ಷಣ ಯಾವುದು?

Advertisement

ಮೊದಲು ನಾನು ತರಗತಿ ಕೋಣೆಗೆ ಮಾತ್ರ ಸೀಮಿತ ಆಗಿದ್ದೆ. ಆದರೆ ನನ್ನ ಬೋಧನೆಯನ್ನು ಗಮನಿಸಿದ ಅಧಿಕಾರಿ ವರ್ಗದವರು  ನಿನಗೆ ಸಂಪನ್ಮೂಲ ವ್ಯಕ್ತಿಯಾಗುವ ಅವಕಾಶ ತುಂಬಾ ಇದೆ ಬಳಸಿಕೋ ಎಂದು ಮಾರ್ಗದರ್ಶನ ನೀಡಿದರು. 2012ರಿಂದ ನನ್ನಲ್ಲಿ ನಾನು ಬದಲಾವಣೆ ಮಾಡಿಕೊಳ್ಳುತ್ತಾ ನನ್ನ ವೃತ್ತಿ ಜೀವನದಲ್ಲಿ ಏನಾದರೂ ಹೊಸತು ಮಾಡಬೇಕು ಎಂದು ನಿರ್ಧರಿಸಿದೆ.  ಐದಾರು ವರ್ಷಗಳ ನಿರಂತರ ಪ್ರಯತ್ನದಿಂದ 2019ರಲ್ಲಿ ಉಡುಪಿ ಜಿಲ್ಲೆಯಲ್ಲಿ ಸಮಾಜ ವಿಜ್ಞಾನ ಡಿಜಿಟಲ್‌ ಲ್ಯಾಬನ್ನು ದಾನಿಗಳ ನೆರವಿನಿಂದ ಮಾಡಿದ್ದು ನನ್ನ ವೃತ್ತಿ ಜೀವನದ ಅವಿಸ್ಮರಣೀಯ ಕ್ಷಣ.

ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ನೀವು ಬಯಸುವ ಬದಲಾವಣೆ ಯಾವುದು?

ವ್ಯವಸ್ಥೆ ಹೇಗೇ ಇದ್ದರೂ ಆ ವ್ಯವಸ್ಥೆಯನ್ನು ಬದಲಾಯಿಸುವ ಶಕ್ತಿಯನ್ನು ಶಿಕ್ಷಕ ಹೊಂದಬೇಕು. ಇರುವ ವ್ಯವಸ್ಥೆಯನ್ನೇ ಅಚ್ಚುಕಟ್ಟಾಗಿ ಬಳಸಿ

ಕೊಂಡರೆ ಉತ್ತಮವಾದುದನ್ನು ಸಾಧಿಸ ಬಹುದಾಗಿದೆ. ಗ್ರಾಮೀಣ ಮಕ್ಕಳಲ್ಲಿಯೂ ಅದ್ಭುತ  ಪ್ರತಿಭೆ ಇದೆ. ಅದನ್ನು ಹೊರಗೆಳೆಯುವ ಅವಕಾಶ ಶಿಕ್ಷಕನಿಗೆ ಮಾತ್ರ ಇದೆ. ಅದನ್ನು ಬಳಸಿಕೊಳ್ಳಬೇಕು ಎನ್ನುವುದು ನನ್ನ ನಿಲುವು.

ಈಗಿನ ಮಕ್ಕಳ ಮನೋಸ್ಥಿತಿ ಬಗ್ಗೆ ಏನಂತೀರಿ? ಹೇಗಿದ್ದರೆ ಉತ್ತಮ?

ಶಿಕ್ಷಕರು ಮತ್ತು ಮಕ್ಕಳ ನಡುವೆ ಅವಿನಾಭಾವದ ಸಂಬಂಧದ ಕೊರತೆ ಈಗ ಕಾಣುತ್ತಿದೆ. ವಿದ್ಯಾರ್ಥಿಗಳಲ್ಲಿ ಮೌಲ್ಯಗಳ ಕೊರತೆ ಇದೆ. ಜತೆಗೆ ಮಕ್ಕಳನ್ನು ಸ್ಪರ್ಧಾತ್ಮಕ ಪ್ರಪಂಚಕ್ಕೆ ಸಿದ್ಧಪಡಿಸುವಲ್ಲಿಯೂ ನಾವು ಸೋಲುತ್ತಿದ್ದೇವೆ. ಪ್ರೀತಿಯಿಂದ ಕಲಿಸಿದಾಗ, ಮೌಲ್ಯಗಳನ್ನು ತುಂಬುವ ಕೆಲಸ ಮಾಡಿದಾಗ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸಮವೇಗದಲ್ಲಿ ಸಾಗಬಹುದು.

ಸರಕಾರಿ ಶಾಲೆಗಳ ಅಭಿವೃದ್ಧಿಗೆ ನೀವು ನೀಡುವ ಸಲಹೆ ಏನು?

ಸರಕಾರಿ ಶಾಲೆಗಳು ಯಾವ ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೂ ಕಡಿಮೆ ಇಲ್ಲ. ಯಾಕೆಂದರೆ, ಇಲ್ಲಿ ಶಿಕ್ಷಕರಾಗಿ ಬರುವವರು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಗೆದ್ದು ಬರುವ ಪ್ರತಿಭಾವಂತರು. ಅವರು ತಮ್ಮ ಶಕ್ತಿಯನ್ನು ಬಳಸಿಕೊಂಡರೆ ಒಬ್ಬೊಬ್ಬ ಶಿಕ್ಷಕನಿಂದಲೂ ಶ್ರೇಷ್ಠ ಬದಲಾವಣೆ ತರಲು ಸಾಧ್ಯವಿದೆ.

-ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next