ಕಾರ್ಕಳ: ಒಂದು ಕಡೆ ಕೀ ಬೋರ್ಡ್ ನುಡಿಸುತ್ತಾ, ಇನ್ನೊಂದು ಕಡೆ ಟ್ರ್ಯಾಕ್ ಸೆಟ್ ಮಾಡುತ್ತಾ, ಸುಶ್ರಾವ್ಯವಾಗಿ ಹಾಡುತ್ತಾ ಗಮನ ಸೆಳೆವವರು ಕಾರ್ಕಳದ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆಯ ಸಂಗೀತ ಶಿಕ್ಷಕರಾದ ಕೃಷ್ಣಪ್ಪ (ಕೃಷ್ಣೋಜಿ ರಾವ್ ಶಿಂಧೆ). ಇವರಿಗೆ ಎರಡೂ ಕಣ್ಣು ಕಾಣಿಸುವುದಿಲ್ಲ. ಆದರೆ, ಸಾವಿರಾರು ವಿದ್ಯಾರ್ಥಿಗಳನ್ನು ಸಂಗೀತದಲ್ಲಿ ಪಳಗಿಸಿದ್ದಾರೆ. ಅಂಧರಿಗೆ, ದಿವ್ಯಾಂಗರಿಗೆ ಅನುಕಂಪ ಬೇಕಿಲ್ಲ, ಅವಕಾಶಗಳನ್ನು ನೀಡಿದರೆ ಅದ್ಭುತಗಳನ್ನು ಸೃಷ್ಟಿ ಮಾಡಬಲ್ಲರು ಎಂಬ ಮಾತಿಗೆ ಇವರು ಸಾಕ್ಷಿ.
ಮೂಲತಃ ಕೊಪ್ಪಳ ಜಿಲ್ಲೆಯ ಶಂಕರಪ್ಪ -ಲಕ್ಷ್ಮೀಬಾಯಿ ದಂಪತಿಯ ಪುತ್ರ. ಬಾಲ್ಯದಲ್ಲೇ ಎರಡೂ ಕಣ್ಣುಗಳ ದೃಷ್ಟಿ ಕಳೆದುಕೊಂಡ ಇವರ ಕೈಹಿಡಿದದ್ದು
ಸಂಗೀತ. ಕೊಪ್ಪಳದ ಗವಿಸಿದ್ದೇಶ್ವರ ಮಠದಲ್ಲಿ ಪ್ರಾಥಮಿಕ ಸಂಗೀತ ಶಿಕ್ಷಣ ಪಡೆದ ಇವರು ಮುಂದೆ ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆಯಲ್ಲಿ ವಿದ್ವತ್ ಹಂತವನ್ನು ಉನ್ನತ ಶ್ರೇಣಿಯಲ್ಲಿ ಪೂರ್ಣಗೊಳಿಸಿ
ದ್ದಾರೆ. ಹಾಡುಗಾರಿಕೆ ಮಾತ್ರವಲ್ಲ ಕೊಳಲು ನುಡಿಸುವುದರಲ್ಲೂ ಪ್ರವೀಣರು. ಸೀನಿಯರ್ ಪರೀಕ್ಷೆಯಲ್ಲಿ ರಾಜ್ಯಕ್ಕೇ ಪ್ರಥಮ ಸ್ಥಾನ ಪಡೆದವರು. ಎಸ್ಸೆಸ್ಸೆಲ್ಸಿವರೆಗೆ ಕಲಿತಿರುವ ಇವರು 1994ರಲ್ಲಿ ಸಂಗೀತ ಶಿಕ್ಷಕರಾಗಿ ಚಿಕ್ಕಮಗಳೂರಿನಲ್ಲಿ ಸೇವೆ ಆರಂಭಿಸಿದರು. ಬಳಿಕ ಕಳಸ ಸೇರಿ ಹಲವೆಡೆ ಸೇವೆ ಸಲ್ಲಿಸಿದರು. ಈಗ ಕಾರ್ಕಳ ಸರಕಾರಿ ಸುಂದರ ಪುರಾಣಿಕ ಪ್ರೌಢಶಾಲೆಯಲ್ಲಿ ಶಿಕ್ಷಕರು. ಸುಮಾರು 380 ಮಕ್ಕಳಿಗೆ ಸಂಗೀತ ಪಾಠ ಹೇಳಿಕೊಡುತ್ತಿದ್ದಾರೆ. ಹಲವಾರು ಸಂಗೀತ ಕಾರ್ಯಕ್ರಮಗಳಲ್ಲಿ ಹಾರ್ಮೋನಿಯಂ ಸಾಥ್ ನೀಡುತ್ತಾರೆ.
ಮಕ್ಕಳೊಂದಿಗೆ ಹಾಜರ್
ಕಾರ್ಕಳದಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ, ನಾಡಹಬ್ಬ ಏನೇ ಇರಲಿ ಕೃಷ್ಣಪ್ಪರವರು ಮಕ್ಕಳ ತೆ ಸಂಗೀತ ಪರಿಕರಗಳೊಂದಿಗೆ ಹಾರಿರುತ್ತಾರೆ. ಅಲ್ಲಿ ಇಂಪಾದ ಸಂಗೀತ, ಧ್ವನಿ ಮೊಳಗುತ್ತಿದ್ದರೆ ಕೇಳಿದಷ್ಟು ಕೇಳ್ಳೋಣ ಎನ್ನುವ ಭಾವ ಪ್ರತಿಯೊಬ್ಬರಲ್ಲಿ ಮೂಡುತ್ತದೆ.
ದೇವರ ಸೇವೆ
ನನಗೆ ಚಿಕ್ಕಂದಿನಿಂದಲೂ ಸಂಗೀತ ಅಂದರೆ ಅದೇನೋ ಸೆಳೆತ. ಕಣ್ಣಿಲ್ಲದಿದ್ದರೂ ಸಾಧಿಸಬಹುದು ಅನ್ನಿಸಿತು. ಅಂದಿನಿಂದ ಕಷ್ಟಪಟ್ಟು ಸಂಗೀತಾಭ್ಯಾಸ ನಡೆಸಿದೆ. ಮನೆಯವರು, ಶಿಕ್ಷಕರು, ಮಕ್ಕಳು ಎಲ್ಲರಿಂದ ಉತ್ತಮ ಸಹಕಾರ ಸಿಕ್ಕಿದ್ದರಿಂದ ನಾನು ಸಂತೃಪ್ತಿಯಿಂದ ದೇವರ ಸೇವೆ ಎಂಬಂತೆ ಮುನ್ನಡೆಯುತ್ತಿದ್ದೇನೆ.
-ಕೃಷ್ಣಪ್ಪ ಸಂಗೀತ ಶಿಕ್ಷಕರು
ಸಾಧನೆಗೆ ಸಂದ ಗೌರವ
2006ರಲ್ಲಿ ಕಳಸದಲ್ಲಿ 61ನೇ ಸ್ವಾತಂತ್ರ್ಯೋತ್ಸವ ಸಂದರ್ಭ ಸಮ್ಮಾನ
2007ರಲ್ಲಿ ಸುವರ್ಣ ಕರ್ನಾಟಕ ಪತಂಲಿ ರಾಜ್ಯಮಟ್ಟದ ಪ್ರಶಸ್ತಿ
ಧಾರವಾಡದಲ್ಲಿ 68ನೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
ಕರ್ನಾಟಕ ಸಂಗೀತ ರತ್ನ ರಾಜ್ಯೋತ್ಸವ ಪ್ರಶಸ್ತಿ, ಆಟೋ ಚಾಲಕರ ಸಂಘದಿಂದ ಪುರಸ್ಕಾರ
-ಬಾಲಕೃಷ್ಣ ಭೀಮಗುಳಿ