ಕುಷ್ಟಗಿ: ಕುಷ್ಟಗಿ ತಹಶಿಲ್ದಾರ್ ಎಂ.ಸಿದ್ದೇಶ್ ಅವರು ಕಳೆದ ಆ.22 ರಂದು ಅಗ್ನಿಶಾಮಕ ಹಾಗೂ ಗೃಹರಕ್ಷಕ ದಳ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ವಾಗ್ದಾನ ಮಾಡಿದ್ದರು. ಅದರಂತೆಯೇ, ತಮ್ಮ ಕಾರ್ಯ ಒತ್ತಡದ ನಡುವೆಯೂ ಸೋಮವಾರ ಇಲ್ಲಿನ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿ ಮಾದರಿಯಾದರು.
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳ ಕೊನೆಯ ಸೋಮವಾರ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕೊಪ್ಪಳ ಶಾಖೆ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ತಮ್ಮ ರಕ್ತದ ಗುಂಪು ‘ಬಿ ಪಾಸಿಟಿವ್’ ರಕ್ತದಾನ ಮಾಡಿ ಮಾದರಿಯಾದರು.
ಇದೇ ವೇಳೆ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತಿದೆ ವಿನಃ ಯಾವೂದೇ ಆತಂಕವಿಲ್ಲ. ನಾನು 6 ಬಾರಿ ರಕ್ತದಾನ ಮಾಡಿದ್ದು ಯಾವೂದೇ ಆರೋಗ್ಯ ತೊಂದರೆ ಇಲ್ಲ. ಸಾರ್ವಜನಿಕರು ಇನ್ನೊಂದು ಜೀವ ಉಳಿಸಲು ರಕ್ತದಾನ ಮಾಡಿ ಜೀವ ಉಳಿಸಿ ರಕ್ತದಾನ ಮಾಡಬೇಕು. ಈ ಶಿಬಿರ ಪ್ರತಿ ತಿಂಗಳ ಕೊನೆಯ ಸೋಮವಾರ ನಡೆಯುತ್ತಿದ್ದು, ಸರ್ಕಾರಿ ನೌಕರರು, ಯುವಜರು, ಸಂಘ ಸಂಸ್ಥೆಯವರು ರಕ್ತದಾನ ಮಾಡಿ ಜಿಲ್ಲೆಯಲ್ಲಿ ರಕ್ತದ ಕೊರತೆ ನೀಗಿಸಬೇಕೆಂದು ಕರೆ ನೀಡಿದರು.
ಇದೇ ವೇಳೆ ತಾಲೂಕಾ ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕೆ.ಎಸ್.ರಡ್ಡಿ ಸಹ ರಕ್ತದಾನ ಮಾಡಿ ಮಾದರಿಯಾದರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಅದ್ಯಕ್ಷ ವಿಜಯಕುಮಾರ ಬಿರಾದಾರ, ಡಾ.ರವಿಕುಮಾರ ದಾನಿ, ಡಾ. ವಸ್ತ್ರದ್, ಬಾಲಾಜಿ ಬಳಿಗಾರ, ಮಹಾಂತಯ್ಯ ಅರಳಲಿಮಠ, ಮಲ್ಲಿಕಾರ್ಜುನ ಬಳಿಗಾರ, ಅಪ್ಪಣ್ಣ ನವಲೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಂಚಾಲಕ ದೇವೇಂದ್ರಪ್ಪ ಹಿಟ್ನಾಳ, ಚೇತನ್ ಮತ್ತಿತರರು ಉಪಸ್ಥಿತದ್ದರು.