ಕುಷ್ಟಗಿ: ಹನುಮಸಾಗರದಿಂದ ಇಲಕಲ್ಲ ಕಡೆಗೆ ಶಾಲೆ, ಕಾಲೇಜು ವೇಳೆಗೆ ಬಸ್ ಸೇವೆ ಕಲ್ಪಿಸುವಂತೆ ಆಗ್ರಹಿಸಿ ಹನುಮಸಾಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ನ.27ರ ಬುಧವಾರ ಬೆಳಗ್ಗೆ ಹನುಮಸಾಗರ ಬಸ್ ನಿಲ್ದಾಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹನುಮಸಾಗರದಿಂದ ಇಲಕಲ್ ಗೆ ಬೆಳಗ್ಗೆ 9ಕ್ಕೆ ಕುಷ್ಟಗಿ ಘಟಕದ ಸೇವೆಯನ್ನು ಬೆಳಗ್ಗೆ 8 ರಿಂದ ಆರಂಭಿಸುವಂತೆ ವಿದ್ಯಾರ್ಥಿಗಳು ಪ್ರತಿಭಟಿಸಿದರು. ವಿದ್ಯಾರ್ಥಿಗಳ ಪ್ರತಿಭಟನೆಗೆ ಸ್ಪಂಧಿಸಿದ ಪಿಎಸೈ ಧನಂಜಯ ಹಿರೇಮಠ ಅವರು, ಕೂಡಲೇ ಕುಷ್ಟಗಿ ಘಟಕ ವ್ಯವಸ್ಥಾಪಕ ಸುಂದರಗೌಡ ಅವರನ್ನು ಹನುಮಸಾಗರ ಬಸ್ ನಿಲ್ದಾಣಕ್ಕೆ ಕರೆಸಿದರು.
ಹನುಮಸಾಗರ ಬಸ್ ನಿಲ್ದಾಣಕ್ಕೆ ಆಗಮಿಸಿದ ಘಟಕ ವ್ಯವಸ್ಥಾಪಕ ಸುಂದರಗೌಡ ವಿದ್ಯಾರ್ಥಿಗಳ ಮನವಿ ಆಲಿಸಿದರು. ಕಳೆದ 4 ತಿಂಗಳಿನಿಂದ ಇದೇ ಸಮಸ್ಯೆ ಇದೆ. ಪ್ರತಿದಿನ ಮೊದಲ ತರಗತಿ ತಪ್ಪುತ್ತಿದೆ. ಗಜೇಂದ್ರಗಡ ಮೂಲಕ ಹನುಮಸಾಗರ ಮೂಲಕ ಇಲಕಲ್ ಗೆ ಹೋಗುವ ಬಸ್ಸುಗಳು ನಿಗದಿತ ವೇಳೆಗೆ ಇದ್ದರೂ ಪ್ರಯಾಣಿಕರಿಂದ ತುಂಬಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳಿಗೆ ಬಸ್ಸಲ್ಲಿ ಜಾಗ ಇರುವುದಿಲ್ಲ. ಬೆಳಗ್ಗೆ 8ಕ್ಕೆ ಇಲ್ಲವೇ 8.20ಕ್ಕೆ ಹನುಮಸಾಗರದಿಂದ ಇಲಕಲ್ಲಗೆ ಪ್ರತ್ಯೇಕ ಬಸ್ ಸೇವೆ ತುರ್ತು ಅಗತ್ಯವಿದೆ ಎಂದು ನಿವೇದಿಸಿಕೊಂಡರು.
ಇನ್ಮುಂದೆ ಸಮಯಕ್ಕೆ ಸರಿಯಾಗಿ ಬಸ್ ಸೇವೆಯ ವ್ಯವಸ್ಥೆ ಮಾಡಿಸುವುದಾಗಿ ಹಾಗೂ ಆಗಿರುವ ಸಮಸ್ಯೆ ಸರಿಪಡಿಸುವ ಘಟಕ ವ್ಯವಸ್ಥಾಪಕ ಸುಂದರಗೌಡ ಭರವಸೆ ಮೇರೆಗೆ ಪ್ರತಿಭಟನೆ ಹಿಂಪಡೆಯಲಾಯಿತು.
ಇದೇ ವೇಳೆ ಗ್ರಾ.ಪಂ. ಅಧ್ಯಕ್ಷ ರುದ್ರಗೌಡ ಗೌಡರ್, ಸೂಚಪ್ಪ ಬೋವಿ, ನಿಲ್ದಾಣ ನಿಯಂತ್ರಕ ಮಹಾಂತೇಶ ಲಕ್ಕಲಕಟ್ಟಿ ಮತ್ತಿತರರಿದ್ದರು.