Advertisement

ಕುಷ್ಟಗಿ: ಹೆಚ್ಚುವರಿ ಬಸ್‌ ವ್ಯವಸ್ಥೆ ಕಲ್ಪಿಸುವಂತೆ ಡಿ.19ರಂದು ವಿದ್ಯಾರ್ಥಿಗಳಿಂದ ಬಸ್ ತಡೆದು ಪ್ರತಿಭಟನೆ

03:43 PM Dec 15, 2022 | Team Udayavani |

ಕುಷ್ಟಗಿ: ಬೆಳಿಗ್ಗೆ ಕಿಡದೂರನಿಂದ ಟೆಂಗುಂಟಿ ಮೂಲಕ ಕುಷ್ಟಗಿಗೆ ಹಾಗೂ ಸಂಜೆ ಕುಷ್ಟಗಿಯಿಂದ ಕಿಡದೂರಿಗೆ ಒಂದೇ ಬಸ್ಸಿನಲ್ಲಿ ಜೀವ ಪಣಕ್ಕಿಟ್ಟು ಜೋತು ಬಿದ್ದು ಬಸ್ ಹತ್ತುವ ಅನಿವಾರ್ಯತೆ ಸೃಷ್ಟಿಸಿದೆ. ಈ ಬೆಳವಣಿಗೆಯಿಂದ ವಿದ್ಯಾರ್ಥಿಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂಬುದು ಟೆಂಗುಂಟಿ ಗ್ರಾಮದ ವಿದ್ಯಾರ್ಥಿಗಳ ಅಳಲು.

Advertisement

ಈ ಗ್ರಾಮದ ವಿದ್ಯಾರ್ಥಿಗಳು ಕುಷ್ಟಗಿ ತಾಲೂಕು ಕೇಂದ್ರಕ್ಕೆ ಬಸ್ ನಲ್ಲಿ ನಿತ್ಯ ಹೋಗಿ, ಬರಲು ಹೋಗಲು ಸರ್ಕಸ್ ಮಾಡಲೇಬೇಕಿದೆ. ಈ ಬಸ್ ನಲ್ಲಿ ವಿದ್ಯಾರ್ಥಿಗಳ್ಯಾರು ಸೀಟ್ ನಲ್ಲಿ ಕುಳಿತು ಪ್ರಯಾಣಿಸಿದ ಉದಾಹರಣೆಯೇ ಇಲ್ಲ. ಸಂಪೂರ್ಣ ತುಂಬಿಕೊಂಡಿರುವ ಬಸ್ಸಿನಲ್ಲಿ ಎಲ್ಲರೂ ನಿಂತುಕೊಂಡೆ ಪ್ರಯಾಣಿಸಬೇಕಿದೆ.

ಇಂತಹ ಸಂದರ್ಭದಲ್ಲಿ ಬಹುತೇಕ ವಿದ್ಯಾರ್ಥಿಗಳು ಬಸ್ ಹತ್ತದೇ ಉಳಿಯುತ್ತಿದ್ದು, ಶಾಲಾ-ಕಾಲೇಜು ದೈನಂದಿನ ತರಗತಿ ತಪ್ಪಲು ಬಸ್ ಅವ್ಯವಸ್ಥೆ ಕಾರಣವಾಗಿದೆ ಎಂಬುದು ವಿದ್ಯಾರ್ಥಿಗಳ ದೂರು.

ಶಾಲಾ-ಕಾಲೇಜು ಸೇರಿದಂತೆ 125ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗಾಗಿ ಹಾಗೂ ಇತರ ಸಾರ್ವಜನಿಕರಿಗಾಗಿ ಟೆಂಗುಂಟಿ ಗ್ರಾಮಕ್ಕೆ ಪ್ರತ್ಯೇಕ ಬಸ್ಸಿನ ಅವಶ್ಯಕತೆ ಇದೆ. ಹೆಚ್ಚುವರಿ ಬಸ್ ಸೇವೆ ಕಲ್ಪಿಸಲು ವಿದ್ಯಾರ್ಥಿಗಳು ಹೋರಾಟ, ಪ್ರತಿಭಟನೆ ನಡೆಸಿ, ಬಸ್ ಡಿಪೋ ವ್ಯವಸ್ಥಾಪಕರ ಹಾಗೂ ಶಾಸಕರ ಗಮನಕ್ಕೆ ತಂದರೂ ಪೊಲೀಸ್ ಠಾಣೆಯ‌ ಮೆಟ್ಟಿಲು ಏರಿದರೂ ಏನೂ ಪ್ರಯೋಜನವಾಗಿಲ್ಲ.

ಹೆಚ್ಚು ಮಾತಾಡಿದರೆ ಎಫ್ಐಆರ್:

Advertisement

ಇದು ಸಾಲದು ಎಂಬಂತೆ ನಿರ್ವಾಹಕರು ವಿದ್ಯಾರ್ಥಿಗಳನ್ನು ಕೀಳಾಗಿ ಕಾಣುತ್ತಿದ್ದು, ವಿದ್ಯಾರ್ಥಿಗಳಿಗೆ ಬಾಯಿಗೆ ಬಂದಂತೆ‌ ಬಯ್ಯುವುದು ಸಾಮಾನ್ಯವಾಗಿದೆ. ಗುರುವಾರ ನಿರ್ವಾಹಕಿಯೊಬ್ಬರು ಹೆಚ್ಚು‌ ಮಾತನಾಡಿದರೆ ಎಫ್.ಐ.ಆರ್. ಹಾಕಿಸುತ್ತೇನೆ ಎಂದು ಗದರಿಸುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದರು.

ಟೆಂಗುಂಟಿ ರಸ್ತೆಯಲ್ಲಿರುವ ಪಾಲಿಟೆಕ್ನಿಕ್ ಕಾಲೇಜು ಬಳಿ ಬಸ್ ನಿಲುಗಡೆ ಇದ್ದರೂ ಕೆಲವೊಮ್ಮೆ ನಿಲ್ಲಿಸುತ್ತಾರೆ, ಕೆಲವೊಮ್ಮೆ ನಿಲ್ಲಿಸುವುದಿಲ್ಲ. ಪ್ರಶ್ನಿಸಿದರೆ ಅವಾಚ್ಯವಾಗಿ ನಿಂದಿಸುತ್ತಾರೆ. ನಿರ್ವಾಹಕಿಯೊಬ್ಬರು ಬಸ್ಸಿನಲ್ಲಿರುವ ಬ್ಯಾಗ್ ಹಾಗೂ ಬಸ್ ಪಾಸ್ ನ್ನು ಹೊರಕ್ಕೆ ಎಸೆದು ಅವಮಾನಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.

ಈ ಮಾರ್ಗಕ್ಕೆ ಹೆಚ್ಚುವರಿ ಬಸ್ ಸೇವೆ ಕಲ್ಪಿಸುವಂತೆ ಒತ್ತಾಯಿಸಿ ಡಿ.19 ರಂದು ಟೆಂಗುಂಟಿ ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next