ಕುಷ್ಟಗಿ: ಪಿಯುಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಬೆಂಗಳೂರಲ್ಲಿ ಗಾರೆ ಕೆಲಸ ನಿರತನಾಗಿದ್ದ ಶಿವಕುಮಾರ ಕನಕಗಿರಿ ಶೆಟ್ಟರ ಪಿಯುಸಿ ಕಲಾ ವಿಭಾಗದಲ್ಲಿ ಶೇ.95 ಅಂಕ ಪಡೆದಿದ್ಧಾನೆ.
ತಾಲೂಕಿನ ಶಿರಗುಂಪಿ ಗ್ರಾಮದ ಅಶೋಕ ಕನಕಗಿರಿ ಶೆಟ್ಟರ್- ಸಂಗಮ್ಮ ಅವರ ಪುತ್ರ ಶಿವಕುಮಾರ ಕನಕಗಿರಿ ಶೆಟ್ಟರ. ಇಬ್ಬರು ಐವರು ಮಕ್ಕಳಿರುವ ತುಂಬು ಕುಟುಂಬದಲ್ಲಿ ಈತ ಎರಡನೇಯವನು. ತಂದೆ, ತಾಯಿ ಉದ್ಯೋಗ ಅರಸಿ ಬೆಂಗಳೂರಿನಲ್ಲಿ ಗಾರೆ ಕೆಲಸದಲ್ಲಿದ್ದಾರೆ.
ಕುಷ್ಟಗಿಯ ಅರಾಳಗೌಡ ಪ.ಪೂ.ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿ ಪಿಯುಸಿ ಪರೀಕ್ಷೆ ಮುಗಿಯುತ್ತಿದ್ದಂತೆ ಶಿರಗುಂಪಿಯಲ್ಲಿರದೇ ಬೆಂಗಳೂರಿನಲ್ಲಿ ಪ್ರತಿ ದಿನ 600ರೂ. ಕೂಲಿಯಂತೆ ಗಾರೆ ಕೆಲಸದಲ್ಲಿದ್ದನು.
ಫಲಿತಾಂಶ ದಿನವಾದ ನಿನ್ನೆ ಮೊಬೈಲ್ ನಲ್ಲಿ ಫಲಿತಾಂಶದ ವಿವರ ಪಡೆದುಕೊಂಡಿದ್ದು, ಶೇ.95 ಅಂಕದೊಂದಿಗೆ ಕಾಲೇಜಿಗೆ ಟಾಪರ್ ಆಗಿದ್ದಾನೆ.
ಈ ಕುರಿತು ಉದಯವಾಣಿ ಡಿಜಿಟಲ್ ವೆಬ್ ನೊಂದಿಗೆ ಸಂತಸ ಹಂಚಿಕೊಂಡ ಶಿವಕುಮಾರ, ಶಿರಗುಂಪಿ ಗ್ರಾಮದಲ್ಲಿ ಜಮೀನು ಇಲ್ಲ. ತಂದೆ ತಾಯಿ ಕೂಲಿ ಕೆಲಸಕ್ಕೆ ಬೆಂಗಳೂರಿಗೆ ಗುಳೇ ಬಂದಿದ್ದಾರೆ. ಅವರ ಬಡತನದ ಕಷ್ಟಕರ ಪರಿಸ್ಥಿತಿಯಲ್ಲಿ ನನ್ನನ್ಮು ಓದಿಸಿದ್ದಾರೆ. ಅವರ ಶ್ರಮಕ್ಕೆ ಚ್ಯುತಿ ಬಾರದ ರೀತಿ ಕಷ್ಟಪಟ್ಟು ಓದಿರುವುದಕ್ಕಾಗಿ ಈ ಸಾಧನೆ ಸಾದ್ಯವಾಗಿದೆ. ಅಂದಿನ ಪಾಠ ಅಂದೇ ಓದುತ್ತಿದ್ದೆ. ಪ್ರೌಢಶಾಲೆಯಲ್ಲಿ ಸಂತೋಷ ಸಿ.ಕೆ. ಗುರುಗಳು. ಪಿಯುಸಿಯಲ್ಲಿ ಶಿವಕುಮಾರ ಅರಾಳಗೌಡ್ರು ಅವರ ಪರಿಣಾಮಕಾರಿ ಭೋಧನೆ ಪ್ರೇರಣೆಯಾಗಿತ್ತು. ಮುಂದೆ ಕಾನೂನು ಪದವಿ ಪಡೆದು ವಕೀಲನಾಗುವ ಆಶಯ ವ್ಯಕ್ತಪಡಿಸಿದ ಈತ, ಸಮಾಜದಲ್ಲಿ ಅನ್ಯಾಯ ನಡೆಯುತ್ತಿದ್ದು, ವಕೀಲನಾಗಿ ನ್ಯಾಯದಾನ ಮಾಡುವ ಮನದ ಇಂಗಿತ ವ್ಯಕ್ತಪಡಿಸಿದರು.