Advertisement

Kushtagi; ಭಕ್ತರ ಪರಕಾಷ್ಠೆಯ ಶ್ರೀ ಬುತ್ತಿ ಬಸವೇಶ್ವರ ವೈಭವದ ಮಹಾರಥೋತ್ಸವ

08:45 PM Feb 24, 2024 | Team Udayavani |

ಕುಷ್ಟಗಿ: ಈ ಭಾಗದ ಆರಾಧ್ಯ ದೈವ ಇಲ್ಲಿನ ಶ್ರೀ ಅನ್ನದಾನೇಶ್ವರ ಶಾಖಾಮಠದ ಶ್ರೀ ಬುತ್ತಿ ಬಸವೇಶ್ವರ ಜಾತ್ರಾಮಹೋತ್ಸವ ಪ್ರಯುಕ್ತ ಶನಿವಾರ ಸಂಜೆ ಭಕ್ತಗಣಗಳ ಭಕ್ತಿಯ ಸಡಗರ ಸಂಭ್ರಮದ ಮಹಾರಥೋತ್ಸವ ವೈಭವದಿಂದ ಜರುಗಿತು.

Advertisement

ಬೆಳಗ್ಗೆ ಶ್ರೀ ಬುತ್ತಿ ಬಸವೇಶ್ವರ ಮೂರ್ತಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ನಂತರ ಇಲ್ಲಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಿಂದ ನಂದೀಶ್ವರ ಮೂರ್ತಿ ಹಾಗೂ ತೇರಿನ ಕಳಶದೊಂದಿಗೆ ಸಕಲ ವಾದ್ಯಗಳ ಸಮೇತ ಮೆರವಣಿಗೆ ನಡೆಯಿತು. ಮದ್ಯಾಹ್ನ ದೇವಸ್ಥಾನ ಆವರಣದಲ್ಲಿ ಮಹಾ ದಾಸೋಹದ ನೆರವೇರಿತು. ಸಂಜೆ ಕೊರಡಕೇರಾದ ವೇ.ಮೂ. ಶಿವಾನಂದಯ್ಯ, ವೇ. ಮೂ. ಗುರುಸಿದ್ದಯ್ಯ ಗುರುವಿನ್ ನೇತೃತ್ವದಲ್ಲಿ ಹಾಲುಮತ ಭಕ್ತರು ಶೃಂಗಾರಗೊಂಡ ಜೋಡೆತ್ತಿನ ಮೆರವಣಿಗೆಯಲ್ಲಿ ರಥದ ಹಗ್ಗವನ್ನು ದೇವಸ್ಥಾನ ಆವರಣದ ಸರ್ವಾಲಂಕೃತಗೊಂಡ ರಥದವರೆಗೆ ತರಲಾಯಿತು.

ಹಾಲಕೆರೆ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ದೇವರು, ಮದ್ದಾನಿ ಹಿರೇಮಠದ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ನಿಡಶೇಸಿ ಕಲ್ಮಠದ ಅಭಿನವ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ, ಶಾಸಕ ದೊಡ್ಡನಗೌಡ ಪಾಟೀಲ, ದೊಡ್ಡಬಸನಗೌಡ ಪಾಟೀಲ ಬಯ್ಯಾಪೂರ, ಜಿ.ಪಂ. ಮಾಜಿ ಸದಸ್ಯ ಕೆ.ಮಹೇಶ, ವಿಜಯಕುಮಾರ ಹಿರೇಮಠ, ಶಶಿಧರ ಕವಲಿ ಸೇರಿದಂತೆ ಪಟ್ಟಣದ ಪ್ರಮುಖರು ಭಾಗವಹಿಸಿದ್ದರು.

ಕುಷ್ಟಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಭಕ್ತಾದಿಗಳ ಸಮ್ಮುಖದಲ್ಲಿ ಮಹಾರಥವನ್ನು ಭಕ್ತರು ಭಕ್ತಿ ಭಾವದಿಂದ ಎಳೆದು ಭಕ್ತಿ ಸೇವೆ ಸಮ ಪಾದಗಟ್ಟೆಯವರೆಗೂ ಸಾಗಿದ ರಥಕ್ಕೆ ರಥ ಬೀದಿಯಲ್ಲಿ ನಿಂತಿದ್ದ ಭಕ್ತರು ಜೈಕಾರದೊಂದಿಗೆ ಉತ್ತತ್ತಿ ಎಸೆದು ಭಕ್ತಿ ಸೇವೆ ಸಲ್ಲಿಸಿ ಧನ್ಯತಾಭಾವ ಮೆರೆದರು. ನಂತರ ಮಹಾರಥವು ಪುನಃ ದೇವಸ್ಥಾನದ ರಥದ ಮನೆಗೆ ವಾಪಸ್ಸಾಗುವ ಮೂಲಕ ಶ್ರೀ ಬುತ್ತಿ ಬಸವೇಶ್ವರ ಮಹಾರಥೋತ್ಸವ ಸಂಭ್ರಮ ಸಂಪನ್ನಗೊಂಡಿತು. ದೇವಸ್ಥಾನದ ಆವರಣದಲ್ಲಿ ಬಾಣ ಬಿರುಸು ಪ್ರದರ್ಶನ ಬಳಿಕ ಶ್ರೀ ಬುತ್ತಿ ಬಸವೇಶ್ವರ ಸಭಾ ಮಂಟಪದಲ್ಲಿ ಧರ್ಮಸಭೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next