ಕುಷ್ಟಗಿ:ಕುಷ್ಟಗಿ ಪಟ್ಟಣ ಪುರಸಭೆ ವ್ಯಾಪ್ತಿಯ ರಾಜ್ಯ ಹೆದ್ದಾರಿಯನ್ನು ಅತಿಕ್ರಮಿಸಿ ಖಾಸಗಿ ಲೇಔಟ್ ನಿವೇಶನ ವಿನ್ಯಾಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಪಟ್ಟಣದ ಹೊರವಲಯದ ಕುಷ್ಟಗಿ ಪಟ್ಟದಕಲ್ಲ ರಸ್ತೆಯ ವಾರ್ಡ ನಂ. 13 ವ್ಯಾಪ್ತಿಯ ಸ.ನಂ. 453/2 ರ 1 ಎಕರೆ 35 ಗುಂಟೆಯ ಲೇಔಟ್ ನಲ್ಲಿ ನಿವೇಶನ ವಿನ್ಯಾಸ ಕಾರ್ಯ ನಡೆದಿದೆ. ಈ ಲೇಔಟ್ ಇಲಕಲ್ ಮೂಲದ ಮಹಾಂತೇಶ ಪಾಟೀಲ ಅವರಿಗೆ ಸೇರಿದ್ದಾಗಿದೆ. ಕಳೆದ 2015ರಲ್ಲಿ ಕೊಪ್ಪಳ ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆ (ಎನ್ ಎ) ಆದೇಶ ಮಾಡಲಾಗಿದೆ. 2017ರಲ್ಲಿ ವಸತಿ ವಿನ್ಯಾಸ ಪ್ರಾಧಿಕಾರದಿಂದ ನಿವೇಶನ ಅನುಮೋದನೆ ಪಡೆದಿದ್ದಾರೆ.
ಆದರೆ ಹನುಮಸಾಗರ ರಸ್ತೆಯ ತಹಶೀಲ್ದಾರ ಕಚೇರಿಯ ಕೂಗಳತೆಯ ದೂರದಲ್ಲಿರುವ ಈ ನಿವೇಶನ ಕುಷ್ಟಗಿ-ಪಟ್ಟದಕಲ್ಲ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿದೆ. ಸದರಿ ವಿನ್ಯಾಸದ ನಕ್ಷೆಯಲ್ಲಿ ಹೆದ್ದಾರಿ ಮಧ್ಯ ರೇಖೆಯಿಂದ 15 ಮೀಟರ್ ಹಾಗೂ 6 ಮೀಟರ್ ನಿವೇಶದ ರೇಖೆಯನ್ನು ಗುರುತಿಸಿದ್ದಾರೆ. ಈ ನಿವೇಶನದ ರೇಖೆಯ ವಿಸ್ತೀರ್ಣ ರಾಜ್ಯ ಹೆದ್ದಾರಿ ಅಂಚಿಗೆ ಹೊಂದಿಕೊಂಡು ನಿವೇಶನ ವಿನ್ಯಾಸ ಮಾಡಿದ್ದಾರೆ. ಲೇಔಟ್ ಮಾಲೀಕರ ಈ ಕ್ರಮ ರಾಜ್ಯ ಹೆದ್ದಾರಿಯ ಜಾಗೆಯನ್ನು ಅತಿಕ್ರಮಿಸಲಾಗಿದೆ. ಈ ಕುರಿತು ಲೋಕೋಪಯೋಗಿ ಇಲಾಖೆಯ ಎಇಇ ಪ್ರಭು ಹುನಗುಂದ, ಪುರಸಭೆ ಮುಖ್ಯಾಧಿಕಾರಿ ಬಿ.ಟಿ.ಬಂಡಿವಡ್ಡರ ಅವರ ಗಮನಕ್ಕೂ ತರಲಾಗಿದೆ.
ರಾಜ್ಯ ಹೆದಾರಿಯ ಜಾಗೆಯನ್ನು ಅತಿಕ್ರಮಿಸಿದ್ದು ಈ ಕುರಿತಾಗಿ ಭೂ ಮಾಪನಾ ಇಲಾಖೆಯಿಂದ ಸರ್ವೆ ಮಾಡಿಸಿ ನಿವೇಶನ ವಿನ್ಯಾಸಕ್ಕೆ ತಡೆಯಬೇಕು. ಸರ್ವೆ ಕಾರ್ಯ ಮುಗಿಯುವರೆಗೂ ನಮೂನೆ-3 ನೀಡಬಾರದು, ಈಗಾಗಲೇ ಒಂದುವೇಳೆ ನೀಡಿದ್ದರೆ ಕೂಡಲೇ ಇದನ್ನು ರದ್ದುಪಡಿಸಿ. ರಾಜ್ಯ ಹೆದ್ದಾರಿ ಕಬಳಿಕೆ ಪ್ರಕರಣದ ಅಡಿಯಲ್ಲಿ ಲೇಔಟ್ ಮಾಲೀಕರ ವಿರುದ್ದ ಕ್ರಮಜರುಗಿಸಬೇಕು ಎಂದು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಮಂಜುನಾಥ ಕಟ್ಟಿಮನಿ ಒತ್ತಾಯಿಸಿದ್ದಾರೆ.
ಈ ಲೇಔಟ್ ವಿನ್ಯಾಸದಿಂದ ರಾಜ್ಯ ಹೆದ್ದಾರಿ ಅತಿಕ್ರಮದ ವಿಷಯ ಗಮನಕ್ಕೆ ಬಂದಿದೆ. ಸದರಿ ಸಂಬಂಧಿತ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಗುರುರಾಜ್ ಎಂ. ಚಲವಾದಿ ತಹಶೀಲ್ದಾರ್, ಕುಷ್ಟಗಿ