Advertisement

ಕುಷ್ಟಗಿ: ಹೆಚ್ಚಿದ ಕಾರ್ಯಭಾರ-ಒತ್ತಡದಲ್ಲಿ ಪೊಲೀಸ್‌ ಸಿಬ್ಬಂದಿ

03:37 PM Oct 04, 2024 | Team Udayavani |

ಉದಯವಾಣಿ ಸಮಾಚಾರ
ಕುಷ್ಟಗಿ: ಪಟ್ಟಣ ವಿಸ್ತಾರವಾಗುತ್ತಿದೆ. ಅದೇ ರೀತಿ ಅಪರಾಧಗಳ ಸಂಖ್ಯೆ ಹಾಗೂ ಅದರ ಜಾಲವು ವಿಸ್ತರಣೆಯಾಗುತ್ತಿದೆ. ಹೀಗಾಗಿ ಜನಸಂಖ್ಯೆ, ಅಪರಾಧಗಳ ಸಂಖ್ಯೆಗಳಾನುಸಾರವಾಗಿ ಕುಷ್ಟಗಿ ಪಟ್ಟಣಕ್ಕೆ ಗ್ರಾಮೀಣ ಪೊಲೀಸ್‌ ಠಾಣೆ ಪ್ರಸ್ತುತವೆನಿಸಿದೆ. ಇದನ್ನು ಅಪರಾಧ ಪ್ರಕರಣಗಳ ಸಂಖ್ಯೆಗಳು ಗ್ರಾಮೀಣ ಠಾಣೆಯ ಅಗತ್ಯತೆಯನ್ನು ಪುಷ್ಟಿಕರಿಸುತ್ತವೆ.

Advertisement

ತಾಲೂಕಿನಲ್ಲಿ ಕಳೆದ 2020ರಿಂದ 2024ರವರೆಗೆ ಒಟ್ಟು 2,714 ಪ್ರಕರಣಗಳಾಗಿದ್ದವು. ಈ ಮೂರು ಠಾಣಾ ವ್ಯಾಪ್ತಿಗಳ ಪೈಕಿ ಕುಷ್ಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣಗಳು ಹೆಚ್ಚು. ಈ 5 ವರ್ಷಗಳಲ್ಲಿ ಹನುಮಸಾಗರ 749, ತಾವರಗೇರಾ 728 ಪ್ರಕರಣಗಳಾಗಿದ್ದು, ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ 1,237 ಪ್ರಕರಣಗಾಗಿವೆ.

ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ ಪ್ರತಿ ವರ್ಷ 200ರಿಂದ 300 ಸರಾಸರಿ ಸಂಖ್ಯೆಯಲ್ಲಿ ಪ್ರಕರಣಗಳಾಗುತ್ತಿವೆ. ಪ್ರಕರಣಗಳ ಸಂಖ್ಯೆಗೆ
ಅನುಗುಣವಾಗಿ ಪೊಲೀಸ್‌ ಬಲ ಹೆಚ್ಚಿಸಲು ಸದರಿ ಠಾಣೆಗೆ ಪಿಐ ಹುದ್ದೆ ಅಗತ್ಯವಾಗಿದೆ. ಇದಕ್ಕೆ ಪೂರಕವಾಗಿ ಗ್ರಾಮೀಣ ಪೊಲೀಸ್‌
ಠಾಣೆ ಅವಶ್ಯ ವ್ಯಕ್ತವಾಗಿದೆ.

ಕುಷ್ಟಗಿ ಪೊಲೀಸ್‌ ಠಾಣೆಗೆ ಕುಷ್ಟಗಿ ಪಟ್ಟಣ ಸೇರಿದಂತೆ 53 ಗ್ರಾಮಗಳ ವ್ಯಾಪ್ತಿ ಇದೆ. ಪುಣೆ-ಬೆಂಗಳೂರು ಚತುಷ್ಪಥ ರಾಷ್ಟ್ರೀಯ
ಹೆದ್ದಾರಿ ಈ ಪಟ್ಟಣದ ಮೂಲಕ ಹಾದು ಹೋಗಿದೆ. ಜನದಟ್ಟನೆ, ವಾಹನ ಜೊತೆಗೆ ಅಪರಾಧ ಸಂಖ್ಯೆ ಹೆಚ್ಚಿದೆ.

ಹೆಚ್ಚುವರಿ ನಿಯೋಜನೆ: ಕುಷ್ಟಗಿ ತಹಶೀಲ್ದಾರ ಕಚೇರಿಯಲ್ಲಿನ ಖಜಾನೆ ಇಲಾಖೆ, ಕುಷ್ಟಗಿ ಪಟ್ಟಣದ ಸಂಚಾರ ನಿಯಂತ್ರಣ, ರಾತ್ರಿ ಗಸ್ತು ಇವೆಲ್ಲವೂ ನಿಯಮಿತವಾಗಿವೆ. ಇದರ ಜೊತೆ ಅನ್ಯ ಜಿಲ್ಲೆಗೆ ಹಾಗೂ ಮುಖ್ಯಮಂತ್ರಿ, ಸಚಿವರು ಸೇರಿದಂತೆ ಗಣ್ಯರಿಗೆ ಬಂದೋಬಸ್ತ್, ಜಾತ್ರೆ, ಸಂತೆ ಇತ್ಯಾದಿ ಕಾರ್ಯಕ್ರಮ, ಬಂದೋಬಸ್ತ್ ಕರ್ತವ್ಯ ಕಾರ್ಯ ನಿರ್ವಹಿಸುವುದು ಇಲ್ಲಿನ
ಪೊಲೀಸರಿಗೆ ಮತ್ತೂಂದು ಸವಾಲಾಗಿದೆ.

Advertisement

ಇಚ್ಛಾಶಕ್ತಿ ಕೊರತೆ: ಚತುಷ್ಪಥ ರಾಷ್ಟ್ರೀಯ  ಹೆದ್ದಾರಿ ಅಪಘಾತ ನಿರ್ವಹಣೆಯು ಕಷ್ಟವಾಗಿದೆ. ಅಲ್ಲದೇ ಬೇವೂರು,
ಯಲಬುರ್ಗಾ, ಇಲಕಲ್‌, ಹನುಮಸಾಗರ, ತಾವರಗೇರಾ, ಗಜೇಂದ್ರಗಡ ಮೊದಲಾದ ಠಾಣಾ ವ್ಯಾಪ್ತಿಯ ಎಂಎಲ್‌ಸಿ ಪ್ರಕರಣಗಳಿಗೂ ಠಾಣೆಯ ಪೊಲೀಸರು ಹಾಜರಾಗಬೇಕಿದೆ.

ಠಾಣೆಯ ವ್ಯಾಪ್ತಿಯ ಕುಷ್ಟಗಿ ಪಟ್ಟಣ, ಹಿರೇಮನ್ನಾಪೂರ, ದೋಟಿಹಾಳ, ಕ್ಯಾದಿಗುಪ್ಪ, ಚಳಗೇರಾ, ತಳವಗೇರಾ, ಕಲಾಲಬಂಡಿ,
ಕೊರಡಕೇರಾ, ಹಿರೇಬನ್ನಿಗೋಳ ಮೊದಲಾದ ಗ್ರಾಮಗಳು ದೊಡ್ಡ ಗ್ರಾಮಗಳಾಗಿವೆ. ಈ ಹಿನ್ನೆಲೆಯಲ್ಲಿ ಕುಷ್ಟಗಿಗೆ ಗ್ರಾಮೀಣ ಪೊಲೀಸ್‌ ಠಾಣೆ ಅಗತ್ಯವಾಗಿದೆ. ಆದರೆ ಜನಪ್ರತಿನಿ ಧಿಇಚ್ಛಾಶಕ್ತಿ ಕೊರತೆ ಪ್ರಶ್ನಾರ್ಥವಾಗಿದೆ ಎನ್ನುತ್ತಾರೆ ಇಲ್ಲಿನ ಜನರು.

ಪಿಐ ಕುಷ್ಟಗಿಗೆ ಯಾಕಿಲ್ಲ: ಕನಕಗಿರಿ, ಕಾರಟಗಿ, ಕುಕನೂರು ಹೊಸ ತಾಲೂಕು ಪೊಲೀಸ್‌ ಠಾಣೆಯಲ್ಲಿ ಈಗಾಗಲೇ ಪಿಐ ಹುದ್ದೆ ಸೃಜಿಸಲಾಗಿದೆ. ಆದರೆ ಕುಷ್ಟಗಿ ಪೊಲೀಸ್‌ ಠಾಣೆಯಲ್ಲಿ ಪಿಐ ಹುದ್ದೆ ಇಲ್ಲ. ಗ್ರಾಮೀಣ ಪೊಲೀಸ್‌ ಠಾಣೆ ಮಂಜೂರಾದರೆ 53 ಗ್ರಾಮಗಳಿಗೆ ಪ್ರತ್ಯೇಕ ಗ್ರಾಮೀಣ ಪೊಲೀಸ್‌ ಠಾಣೆಯಿಂದ ಇನ್ನಷ್ಟು ಗುಣಮಟ್ಟದ ಸೇವೆ ನಿರೀಕ್ಷಿಸಲು ಸಾಧ್ಯವಿದೆ.

ಕುಷ್ಟಗಿ ಠಾಣಾ ವ್ಯಾಪ್ತಿಯ ಸಿಬ್ಬಂದಿ ಅಂಕಿ ಮಾಹಿತಿ
ಕುಷ್ಟಗಿ, ಹನುಮಸಾಗರ, ತಾವರಗೇರಾ ಪೊಲೀಸ್‌ ಠಾಣೆ ಕಾರ್ಯ ನಿರ್ವಹಿಸುತ್ತಿವೆ. ತಾಲೂಕಿನಲ್ಲಿ ಸಿಪಿಐ-1, ಪಿಎಸೈ 6, ಎಎಸೈ-16, ಮುಖ್ಯ ಪೇದೆ 32, ಪೇದೆ, ಮಹಿಳಾ ಪೇದೆ 74 ಸಿಬ್ಬಂದಿ ಸೇವೆಯಲ್ಲಿದ್ದಾರೆ. ಈ ಸೇವೆಯಲ್ಲಿ ಸದ್ಯ 2 ಎಎಸೆ„, 4 ಪೇದೆ ಸಿಬ್ಬಂದಿ ಕೊರತೆ ಇದೆ. ಕುಷ್ಟಗಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಕುಷ್ಟಗಿ ಪಟ್ಟಣ ಸೇರಿದಂತೆ 53 ಗ್ರಾಮ- ಹನುಮಸಾಗರ 60
ಗ್ರಾಮಗಳು, ತಾವರಗೇರಾ ಪಟ್ಟಣ ಪಂಚಾಯತಿ ಸೇರಿದಂತೆ 50 ಗ್ರಾಮಗಳ ವ್ಯಾಪ್ತಿ ಹೊಂದಿದೆ.

ನಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕುಷ್ಟಗಿಗೆ ಪ್ರತ್ಯೇಕವಾಗಿ ಗ್ರಾಮೀಣ ಪೊಲೀಸ್‌ ಠಾಣೆಯ ಬಗ್ಗೆ ಅಂದಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದೆ. ಸಿಬ್ಬಂದಿ ನೇಮಕಾತಿ ವಿಚಾರದಲ್ಲಿ ಈ ಸಾಧ್ಯವಿಲ್ಲವೆಂದು ತಿಳಿಸಿದ್ದರು. ಇದೀಗ ಕುಷ್ಟಗಿಗೆ ಗ್ರಾಮೀಣ ಪೊಲೀಸ್‌ ಠಾಣೆ ಅಗತ್ಯತೆ ಬಗ್ಗೆ ಇನ್ನೊಮ್ಮೆ ಬೇಡಿಕೆ ಸಲ್ಲಿಸುತ್ತೇನೆ.
●ದೊಡ್ಡನಗೌಡ ಪಾಟೀಲ, ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ

ಠಾಣಾ ವ್ಯಾಪ್ತಿಯಲ್ಲಿ ವಿಪರೀತ ಕೆಲಸದ ಒತ್ತಡವಿದೆ. ಈ ಠಾಣಾ ವ್ಯಾಪ್ತಿ ದೊಡ್ಡದಾಗಿದ್ದು ಪ್ರಕರಣಗಳ ಸಂಖ್ಯೆಯೂ ದ್ವಿಗುಣವಾಗಿದೆ. ಏನಿಲ್ಲವೆಂದರೂ ಪ್ರತಿ ದಿನ ಎರಡ್ಮೂರು ಎಫ್‌.ಐ.ಆರ್‌. ಪ್ರಕರಣಗಳಾಗುತ್ತಿವೆ. ಸಿಬ್ಬಂದಿ ಈ ಠಾಣೆಗೆ ವರ್ಗವಾಗಿ ಬರಲು ಹಿಂಜರಿಯುತ್ತಿದ್ದಾರೆ. ಇಲ್ಲಿಗೆ ಬಂದರೆ ಶಿಕ್ಷೆ ಎಂದು ಪರಿಗಣಿಸುತ್ತಾರೆ.
●ಹೆಸರು ಹೇಳಲಿಚ್ಚಸದ ಪೊಲೀಸ್‌

*ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next