Advertisement

High Court ವಂಚಕ ಮಹಿಳೆ ಬಗ್ಗೆ ಎಚ್ಚರದಿಂದಿರಲು ಎಲ್ಲ ಪೊಲೀಸ್‌ ಠಾಣೆಗಳಿಗೆ ಸೂಚಿಸಿ

11:57 PM Sep 11, 2024 | Team Udayavani |

ಬೆಂಗಳೂರು: ರಾಜ್ಯದ ಬೇರೆ ಬೇರೆ ಕಡೆ ಹಲವು ಪುರುಷರ ವಿರುದ್ಧ ಕ್ಷುಲ್ಲಕ ಹಾಗೂ ಅನಗತ್ಯ ದೂರುಗಳನ್ನು ದಾಖಲಿಸುತ್ತಿರುವ ಮಹಿಳೆಯ ಬಗ್ಗೆ ಎಚ್ಚರಿಕೆ ವಹಿಸುವಂತೆ ಎಲ್ಲ ಪೊಲೀಸ್‌ ಠಾಣೆಗಳಿಗೆ ಸೂಚಿಸುವಂತೆ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

Advertisement

ಈ ವಿಚಾರದಲ್ಲಿ ನೊಂದ ಪತಿ ಹಾಸನ ಜಿಲ್ಲೆಯ ಸಕಲೇಶಪುರದ ಬಾಳಗದ್ದೆಯ ನಿವಾಸಿ ಪಿ.ಕೆ. ವಿವೇಕ ಸಲ್ಲಿಸಿರುವ ಕ್ರಿಮಿನಲ್‌ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ನಿರ್ದೇಶನ ನೀಡಿದೆ.

ಕುಶಾಲನಗರದ ಮುಳ್ಳುಸೋಗೆಯ ನಿವಾಸಿ, ಪತ್ನಿ ದೀಪಿಕಾ ತನ್ನ ಹಾಗೂ ಕುಟುಂಬದ ಸದಸ್ಯರ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಪತಿ ಪಿ.ಕೆ. ವಿವೇಕ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ, ಹಲವು ಪುರುಷರ ವಿರುದ್ಧ ಈಗಾಗಲೇ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಅಪರಾಧಿಕ ಪಿತೂರಿ ಮತ್ತು ಐಪಿಸಿ ಸೆಕ್ಷನ್‌ 498ಎ ನಡಿ 10 ಪ್ರಕರಣಗಳನ್ನು ದಾಖಲಿಸಿರುವ ಮಹಿಳೆ ಮತ್ತೆ 11ನೇ ಕೇಸು ದಾಖಲಿಸುವುದನ್ನು ತಡೆಯಬೇಕಾದರೆ ಆಕೆಯ ಬಗ್ಗೆ ಎಲ್ಲ ಪೊಲೀಸ್‌ ಠಾಣೆಗಳಿಗೆ ಮಾಹಿತಿ ನೀಡಬೇಕು ಎಂದು ನ್ಯಾಯಾಲಯ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸಿದೆ.

ಪ್ರತಿವಾದಿ ಮಹಿಳೆ ದೀಪಿಕಾಗೆ ನ್ಯಾಯಾಲಯದ ಮುಂದೆ ಹಾಜರಾಗಿ ತಮ್ಮ ಅಹವಾಲು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಆಕೆ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಾಲಯ ಅರ್ಜಿದಾರರ ವಿರುದ್ಧ ಕುಶಾಲನಗರ ಠಾಣೆಯಲ್ಲಿ 2022ರಲ್ಲಿ ದಾಖಲಿಸಿದ್ದ ಪ್ರಕರಣವನ್ನು ರದ್ದುಗೊಳಿಸಲಾಗುವುದು ಎಂದು ಹೇಳಿದೆ.

Advertisement

ಅಷ್ಟೇ ಅಲ್ಲದೆ ಆಕೆಯ ವಿವರಗಳು ಈಗಾಗಲೇ ಹಲವು ಪೊಲೀಸ್‌ ಠಾಣೆಗಳಲ್ಲಿ ಲಭ್ಯವಿವೆ. ಹಾಗಾಗಿ ಆ ಮಹಿಳೆ ಮತ್ತೆ ಯಾವುದಾದರೂ ಪುರುಷರ ವಿರುದ್ಧ ಪ್ರಕರಣ ದಾಖಲಿಸಲು ಬಂದರೆ, ಅಂತಹ ಸಮಯದಲ್ಲಿ ಪೊಲೀಸರು ಸುಮ್ಮನೆ ಪ್ರಕರಣ ದಾಖಲಿಸದೆ ಆಕೆಯ ದೂರಿನ ವಿಚಾರದ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದ ಅನಂತರವೇ ಮುಂದಿನ ಕ್ರಮ ಜರಗಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.