Advertisement

Mulki:  ಜಾಗ ಮೀಸಲು ಇಟ್ಟಿದ್ದರೂ ಸ್ಥಾಪನೆಯಾಗದ ಅಗ್ನಿ ಶಾಮಕ ಠಾಣೆ

06:58 PM Sep 27, 2024 | Team Udayavani |

ಮೂಲ್ಕಿ: ಬಹಳಷ್ಟು ತಡವಾಗಿ ಮೂಲ್ಕಿ ತಾಲೂಕು ಕೇಂದ್ರವಾಗಿ ಗುರುತಿಸಿಕೊಂಡಿದ್ದರೂ ಅದಕ್ಕೆ ಬೇಕಾದ ಮೂಲ ವ್ಯವಸ್ಥೆಗಳನ್ನು ಮಾಡಲಾಗಿಲ್ಲ. ಅದರಲ್ಲೂ ಮುಖ್ಯವಾಗಿ ಬೆಂಕಿ ಮತ್ತು ಇತರ ಪ್ರಾಕೃತಿಕ ದುರಂತಗಳು ಸಂಭವಿಸಿದಾಗ ತುರ್ತು ನೆರವಿಗೆ ಬರಬೇಕಾಗಿರುವ ಅಗ್ನಿ ಶಾಮಕ ವ್ಯವಸ್ಥೆ ಮೂಲ್ಕಿಯಲ್ಲಿ ಇನ್ನೂ ಆರಂಭಗೊಂಡಿಲ್ಲ. ಅಚ್ಚರಿ ಎಂದರೆ, ಅಗ್ನಿಶಾಮಕ ಠಾಣೆಗಾಗಿ ಒಂದು ಎಕರೆ ಜಾಗವನ್ನು ಮೀಸಲು ಇಟ್ಟಿದ್ದರೂ ಪ್ರಸ್ತಾವನೆಗೆ ಒಪ್ಪಿಗೆ ಸಿಕ್ಕಿದ್ದರೂ ಸ್ಥಾಪನೆಯನ್ನು ವಿಳಂಬಿಸಲಾಗುತ್ತಿದೆ.

Advertisement

ಹೀಗಾಗಿ ಅಗ್ನಿ ದುರಂತವೇನಾದರೂ ಸಂಭವಿಸಿದರೆ ಮಂಗಳೂರಿನಿಂದ ಅಗ್ನಿ ಶಾಮಕ ವಾಹನ ಬರಬೇಕಾಗಿದೆ. ಅಷ್ಟು ದೂರದಿಂದ ಬರುವಾಗ ಇಲ್ಲಿ ಆಗುವ ಅನಾಹುತಗಳೆಲ್ಲ ನಡೆದುಹೋಗಿರುತ್ತವೆ. ಹೆಚ್ಚಿನ ಸಂದರ್ಭದಲ್ಲಿ ಸ್ಥಳೀಯರೇ ತಮಗೆ ಸಾಧ್ಯವಾದಷ್ಟು ಅಗ್ನಿ ಶಮನ ಕಾರ್ಯ ನಡೆಸಿದ ಬಳಿಕವೇ ಮಂಗಳೂರಿನ ವಾಹನಗಳು ಬರುತ್ತಿವೆ.

ಜಾಗ ಸಿದ್ಧವಾಗಿದೆ ಆದರೆ….
ಇಲ್ಲಿಯ ಕಾರ್ನಾಡು ಕೈಗಾರಿಕಾ ಪ್ರದೇಶದಲ್ಲಿ ಸುಮಾರು ಒಂದು ಎಕ್ರೆ ಮಿಕ್ಕಿದ ಜಾಗವನ್ನು ಅಗ್ನಿಶಾಮಕ ದಳದ ಇಲಾಖೆ ಮೀಸಲಾಗಿರಿಸಿಕೊಂಡಿದೆ. ಆದರೆ ಕೇಂದ್ರ ಸ್ಥಾಪನೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ. ಇನ್ನೊಂದು ಮಾಹಿತಿ ಪ್ರಕಾರ, ಇನ್ನಷ್ಟು ಜಾಗದ ಬೇಡಿಕೆಯನ್ನು ಇಡಲಾಗುತ್ತಿದೆ. ಅಷ್ಟು ಜಾಗ ಈಗಿನ ಕಾಲದಲ್ಲಿ ಕೊಡಲು ಸಾಧ್ಯವೇ ಎಂಬುದರ ಜತೆಗೆ ಅಷ್ಟೊಂದು ಜಾಗ ಯಾಕೆ ಎಂಬುದೂ ಪ್ರಶ್ನೆಯಾಗಿದೆ.

ಮೂಲ್ಕಿ ಪರಿಸರದಲ್ಲಿ ಎಕರೆಗಟ್ಟಲೆ ಜಮೀನು ಸಿಗುವುದು ಕಷ್ಟವೇ ಸರಿ. ಹಾಗಿರುವಾಗ 32 ಗ್ರಾಮ ವ್ಯಾಪ್ತಿಯ ಮೂಲ್ಕಿ ತಾಲೂಕಿನ ಅಗತ್ಯಕ್ಕೆ ತಕ್ಕುದಾದ ಸಣ್ಣ ಪ್ರಮಾಣದ ಅಗ್ನಿಶಾಮಕ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎನ್ನುವುದು ಜನರ ಆಗ್ರಹ.

ಮೂಲ್ಕಿಗೆ ಯಾಕೆ ಠಾಣೆ ಅಗತ್ಯ?
ಮೂಲ್ಕಿಯಲ್ಲಿ ಬೃಹತ್‌ ಕೈಗಾರಿಕಾ ವಲಯವಿದೆ. ಇಲ್ಲಿ ಗ್ಯಾಸ್‌ ಸಂಗ್ರಹಣ ಕೇಂದ್ರ, ಸಾಕಷ್ಟು ಹಳೆ ಪ್ಲಾಸ್ಟಿಕ್‌ಗಳ ಗುಜರಿ ಸಂಗ್ರಹವೂ ಇದ್ದು ಯಾವಾಗಲೂ ಭಯ ಹುಟ್ಟಿಸುತ್ತದೆ. ಕೆಳವು ಸಮಯಗಳ ಹಿಂದೆ ಗುಜರಿ ಸಂಗ್ರಹ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡು ಬಹಳಷ್ಟು ನಷ್ಟ ಉಂಟಾಗಿದೆ. ನೂರಾರು ಮನೆಗಳು, ವಿವಿಧ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು ಬೆಂಕಿಯ ಅವಘಡ ಸಂಭವಿಸಿದರೆ ಹೆಚ್ಚು ನಾಶ ನಷ್ಟ ಉಂಟಾಗುತ್ತದೆ.

Advertisement

ಮೂಲ್ಕಿ ಭಾಗದಲ್ಲಿ ಯಾವುದೇ ಅವಘಡ ಸಂಭವಿಸಿದರೆ ಮಂಗಳೂರಿನಿಂದಲೇ ವಾಹನ ಬರಬೇಕು. ಆಗ ಸಾಕಷ್ಟು ಅನಾಹುತ ನಡೆದುಹೋಗುತ್ತದೆ.

-ಸರ್ವೋತ್ತಮ ಅಂಚನ್‌

Advertisement

Udayavani is now on Telegram. Click here to join our channel and stay updated with the latest news.

Next