ಕುಷ್ಟಗಿ:ಸಿಮೆಂಟ್ ಕಾಂಕ್ರೀಟ್ ರಸ್ತೆಯ ಮೇಲೆ ಲೋಕೋಪಯೋಗಿ ಇಲಾಖೆ ಡಾಂಬರೀಕರಣಕ್ಕೆ ಮುಂದಾಗಿದ್ದು, ತರಾತುರಿಯಲ್ಲಿ ಡಾಂಬರೀಕರಣ ಕಾಮಗಾರಿ ನಡೆದಿದೆ.
ಕುಷ್ಟಗಿ ಪಟ್ಟಣದ 7ನೇ ವಾರ್ಡ್ ವಿದ್ಯಾ ನಗರದಲ್ಲಿ ಸಿಸಿ ರಸ್ತೆಯಾಗಿ ಈಗಾಗಲೇ ಅಭಿವೃಧ್ಧಿ ಪಡಿಸಲಾಗಿದೆ. ಗಟ್ಟಿಮುಟ್ಟಾದ ಈ ರಸ್ತೆಗೆ ಡಾಂಬರೀಕರಣದ ಅಭಿವೃದ್ದಿಯ ಅಗತ್ಯ ಇರಲಿಲ್ಲ. ಆದಾಗ್ಯೂ ಶುಕ್ರವಾರ ಸಂಜೆಯಿಂದ ತರಾತುರಿಯಲ್ಲಿ ಡಾಂಬರೀಕರಣ ಕಾರ್ಯ ಸಾಗಿದೆ. ಈ ರೀತಿಯ ಕಾರ್ಯದಿಂದ ಬೇಸಿಗೆ ಬಿಸಿಲಿಗೆ ಡಾಂಬರ್ ತಡೆಯುವುದಿಲ್ಲ. ಬೇಗನೇ ಕಿತ್ತು ಬರಲಿದೆ. ಪಟ್ಟಣದಲ್ಲಿ ಡಾಂಬರು ಕಾಣದ ರಸ್ತೆಗಳಿದ್ದರೂ ಆ ರಸ್ತೆಯ ಅಭಿವೃದ್ಧಿ ಗೆ ಮುಂದಾಗದೇ ಅಭಿವೃದ್ಧಿಯಾದ ರಸ್ತೆಯನ್ನು ಅಭಿವೃದ್ಧಿಗೆ ಮುಂದಾಗಿರುವುದು ಅಧಿಕ ಪ್ರಸಂಗವೆನಿಸಿದೆ.
ಈ ಕುರಿತು ಸಂಬಂಧಿಸಿದ ಜೆಇ ಧರಣೇಂದ್ರ ಪ್ರತಿಕ್ರಿಯಿಸಿ ಸಿಸಿ ರಸ್ತೆಯ ಮೇಲೆ ಡಾಂಬರೀಕರಣ ರಸ್ತೆ ಅವೈಜ್ಞಾನಿಕವಲ್ಲ ಟ್ಯಾಕೌಟ್ ಮಾಡಿದರೆ ಏನೂ ಆಗುವುದಿಲ್ಲ ಎಂದಿದ್ದಾರೆ.
ವಾರ್ಡ್ ನ ಸದಸ್ಯ ರಾಮಣ್ಣ ಬಿನ್ನಾಳ ಮಾತನಾಡಿ, ವಾರ್ಡನ ಅಗಲವಾದ ರಸ್ತೆಗಳಲ್ಲಿ ಡಾಂಬರ್ ರಸ್ತೆಗಳಾಗಿ ಪರಿವರ್ತಿಸಲು ಶಾಸಕರು ಸೂಚಿಸಿದ್ದಾರೆ ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಗಂಗಾಧಸ್ವಾಮಿ ಹಿರೇಮಠ ಅವರು, ಶಾಸಕರು 2 ಕೋಟಿ ರೂ.ಗಳ ಅಭಿವೃಧ್ಧಿ ಅನುದಾನದಲ್ಲಿ ತಲಾ 20 ಲಕ್ಷ ರೂ. ದಂತೆ 10 ಕಾಂಗ್ರೆಸ್ ಸದಸ್ಯರ ವಾರ್ಡ್ ಗೆ ಹಂಚಿಕೆ ಮಾಡಿದ್ದಾರೆ. ಪಟ್ಟಣದಲ್ಲಿ ಡಾಂಬರೀಕರಣದಿಂದ ಹಾಳಾದ ರಸ್ತೆಯ ಅಭಿವೃದ್ದಿ ಮಾಡುವ ಬದಲಿಗೆ ತಮ್ಮ ಕಾಂಗ್ರೆಸ್ ವಾರ್ಡುಗಳಿಗೆ ಸೀಮಿತವಾಗಿ ರಸ್ತೆ ಅಭಿವೃದ್ದಿ ಮಾಡಿದ್ದಾರೆ. ಸಿಸಿ ರಸ್ತೆಯ ಮೇಲೆ ಡಾಂಬರೀಕರಣ ಮಾಡುವುದು ಅವೈಜ್ಞಾನಿಕವಾಗಿದೆ ಎಂದರು.