ಕುಷ್ಟಗಿ: ಸರ್ಕಾರಿ ಆಸ್ಪತ್ರೆಗೆ ಹೊಟ್ಟೆ ನೋವಿನ ಚಿಕಿತ್ಸೆಗೆ ಹೋಗಿದ್ದ ರೋಗಿ ತೆರೆದ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ಆತನನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಿಸಿದ ಘಟನೆ ಆ.4ರ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಇಲಕಲ್ ಪಟ್ಟಣದ ಅಲ್ಲಿಪುರಪೇಟೆ ನಿವಾಸಿ ಗಂಗಾಧರ ನಾಗಪ್ಪ ಅಂಗಡಿ(37) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ.
ಈತ ಕಳೆದ ರಾತ್ರಿ ಸರ್ಕಾರಿ ಆಸ್ಪತ್ರೆಗೆ ಹೊಟ್ಟೆ ನೋವು ಎಂದು ಚಿಕಿತ್ಸೆ ಪಡೆದುಕೊಂಡು ರಾತ್ರೋರಾತ್ರಿ ಕಣ್ಮರೆಯಾಗಿದ್ದ. ಆ.4ರ ಭಾನುವಾರ ಸರ್ಕಾರಿ ಆಸ್ಪತ್ರೆಯ ಪಕ್ಕದ (ಹಳೆ ಪ್ರವಾಸಿ ಮಂದಿರ ಹಿಂಭಾಗ) ತೆರೆದ ಹಾಳು ಬಾವಿಗೆ ಹಾರಿದ್ದ. ಇದನ್ನು ಗಮನಿಸಿದ್ದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.
ಕೂಡಲೇ ಅಗ್ನಿ ಶಾಮಕ ಠಾಣಾಧಿಕಾರಿ ಎನ್.ರಾಜು ನೇತೃತ್ವದಲ್ಲಿ ಸಿಬ್ಬಂದಿ ಆಗಮಿಸಿ, ಗಲೀಜು ನೀರಿನ ಮಡುವಿನಲ್ಲಿ ಸಿಲುಕಿದ್ದ ವ್ಯಕ್ತಿಯನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.
ಈ ವ್ಯಕ್ತಿ ಮೇಲ್ನೋಟಕ್ಕೆ ಮಾನಸಿಕ ಅಸ್ವಸ್ಥನಂತೆ ಕಂಡು ಬಂದಿದ್ದು, ಕೊಲೆ ಮಾಡಿಲ್ಲ, ನಾನೇನು ಮಾಡಿಲ್ಲ ಎಂದು ಕನವರಿಸುತ್ತಿದ್ದು ಈ ವ್ಯಕ್ತಿಯ ನಡವಳಿಕೆ ವಿಚಿತ್ರವಾಗಿದೆ ಎನ್ನಲಾಗಿದೆ.
ಈ ವ್ಯಕ್ತಿ ತೆರೆದ ಬಾವಿಗೆ ಹಾರಿದ ಕಾರಣ ಸ್ಪಷ್ಟಪಡಿಸಿಲ್ಲ. ವ್ಯಕ್ತಿಯನ್ನು ವಶಕ್ಕೆ ಪಡೆದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.