Advertisement

Vijay Deverakonda: 100 ಬಡ ಕುಟುಂಬಕ್ಕೆ 1 ಕೋಟಿ ರೂ. ದಾನ ಮಾಡಲಿದ್ದಾರೆ ನಟ ದೇವರಕೊಂಡ

06:48 PM Sep 05, 2023 | Team Udayavani |

ಹೈದರಾಬಾದ್: ವಿಜಯ್‌ ದೇವರಕೊಂಡ – ಸಮಂತಾ ಅಭಿನಯದ ʼಖುಷಿʼ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸ್‌ ಆಫೀಸ್‌ ನಲ್ಲೂ ಸಿನಿಮಾ ಉತ್ತಮ ಕಮಾಯಿ ಮಾಡುತ್ತಿದೆ.

Advertisement

ವಿಜಯ್‌ ದೇವರಕೊಂಡ – ಸಮಂತಾ ಇಬ್ಬರಿಗೂ ʼಖುಷಿʼ ಕಂಬ್ಯಾಕ್‌ ಸಿನಿಮಾವೆಂದೇ ಹೇಳಬಹುದು. ಇಬ್ಬರ ಹಿಂದಿನ ಸಿನಿಮಾಗಳನ್ನು ಹೋಲಿಸಿದರೆ ʼಖುಷಿʼ ಸಿನಿಮಾಕ್ಕೆ ಪಾಸಿಟಿವ್‌ ರೆಸ್ಪಾನ್ಸ್‌ ವ್ಯಕ್ತವಾಗುತ್ತಿದೆ. ಸಿನಿಮಾ ರಿಲೀಸ್‌ ಆದ 4 ದಿನದಲ್ಲಿ 70 ಕೋಟಿಗೂ ಅಧಿಕ ಕಲೆಕ್ಷನ್‌ ಮಾಡಿದೆ. ಈ ವಾರದ ಅಂತ್ಯಕ್ಕೆ 100 ಕೋಟಿ ದಾಟುವ ಸಾಧ್ಯತೆಯಿದೆ.

ವಿಜಯ್‌ ದೇವರಕೊಂಡ ಅವರು ನಟನೆಯಲ್ಲಿ ಮಾತ್ರವಲ್ಲದೆ ಸಾಮಾಜಿಕವಾಗಿ ಹಲವು ಕೆಲಸಗಳನ್ನು ಮಾಡಿದ್ದಾರೆ. ಇದೀಗ ಬಡ ಕುಟುಂಬಕ್ಕೆ ನೆರವಾಗುವ ನಿಟ್ಟಿನಲ್ಲಿ ಹಣಕಾಸಿನ ನೆರವನ್ನು ನೀಡಲು ಮುಂದಾಗಿದ್ದಾರೆ.

ʼಖುಷಿʼ ಸಿನಿಮಾ ಸಕ್ಸಸ್‌ ಬೆನ್ನಲೇ ಚಿತ್ರತಂಡ ವಿವಿಧೆಡೆ ಸಂಚಾರ ಮಾಡುತ್ತಿದೆ. ವಿಶಾಖಪಟ್ಟಣಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಟ ವಿಜಯ್‌ ದೇವರಕೊಂಡ “ನೀವು ಸಂತೋಷವಾಗಿದ್ದೀರಿ ಮತ್ತು ನಾನು ಸಂತೋಷವಾಗಿದ್ದೇನೆ. ನಾನು ಏನನ್ನಾದರೂ ಮಾಡುವ ಯೋಚನೆಯಲ್ಲಿದ್ದೇನೆ. ನನಗೆ ಗೊತ್ತಿಲ್ಲ ಇದು ಸರಿಯೋ, ತಪ್ಪೋ ಎಂದು. ಆದರೆ ಅದನ್ನು ಮಾಡದೆ ಇದ್ದರೆ ನನಗೆ ಸರಿಯಾಗಿ ನಿದ್ರೆ ಬರುವುದಿಲ್ಲ. ನಿಮ್ಮೊಂದಿಗೆ ಸಂತೋಷವನ್ನು ಹಂಚಿಕೊಳ್ಳಲು ನಾನು ಬಯಸುತ್ತೇನೆ. ʼಖುಷಿʼ ಸಿನಿಮಾದ ಸಂಭಾವನೆಯಿಂದ 1 ಕೋಟಿ ರೂಪಾಯಿಯನ್ನು ನಾನು 100 ಬಡ ಕುಟುಂಬಕ್ಕೆ ಹಂಚಲು ನಿರ್ಧರಿಸಿದ್ದೇನೆ. ಈ ಕುರಿತು ನಾನು 100 ಬಡ ಕುಟುಂಬಗಳನ್ನು ಮೊದಲು ಆಯ್ಕೆ ಮಾಡಲಿದ್ದೇನೆ. 100 ಕುಟುಂಬಕ್ಕೆ ತಲಾ 1 ಲಕ್ಷ ರೂಪಾಯಿಯ ಚೆಕ್‌ ನ್ನು ನೀಡುತ್ತೇನೆ. ನನ್ನ ಯಶಸ್ಸು, ನನ್ನ ಸಂತೋಷ ಮತ್ತು ನನ್ನ ಸಂಬಳವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಬೇಕು.” ಎಂದು ನಟ ಹೇಳಿದ್ದಾರೆ.

“ನಾನು ನನ್ನ ಸೋಶಿಯಲ್‌ ಮೀಡಿಯಾ ಪೇಜ್‌ ನಲ್ಲಿ ಫಾರ್ಮ್‌ ವೊಂದನ್ನು ಹಂಚಿಕೊಳ್ಳುತ್ತೇನೆ. ನಾನಿನ್ನೂ ಇದರ ಬಗ್ಗೆ ಸರಿಯಾಗಿ ಪ್ಲ್ಯಾನ್‌ ಮಾಡಿಲ್ಲ. ಈ ಫಾರ್ಮ್‌ ಗೆ “ಖುಷಿ ಹರಡೋಣ” ಅಥವಾ “ದೇವರ ಕುಟುಂಬ” ಎಂದು ಹೆಸರಿಡುತ್ತೇನೆ. ನಾನು ಕೊಟ್ಟ ಹಣದಿಂದ ಜನರು ತಮ್ಮ ಬಾಡಿಗೆ ಅಥವಾ ಶುಲ್ಕ ಅಥವಾ ಯಾವುದನ್ನಾದರೂ ಪಾವತಿಸಲು ಸಹಾಯವಾದರೆ ನನಗೆ ಸಂತೋಷವಗುತ್ತದೆ. ಇನ್ನು 10 ದಿನಗಳಲ್ಲಿ ಹೈದರಾಬಾದ್‌ನಲ್ಲಿ ‘ಖುಶಿ’ ಯಶಸ್ಸಿನ ಸಂಭ್ರಮಾಚರಣೆ ನಡೆಸಲಿದ್ದೇವೆ. ಅದಕ್ಕೂ ಮೊದಲು ನಾನು ಇದನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತೇನೆ ಮತ್ತು 100 ಕುಟುಂಬಗಳಿಗೆ ಸಹಾಯ ಮಾಡುತ್ತೇನೆ. ಒಮ್ಮೆ ನಾನು ಇದನ್ನು ಪೂರ್ಣಗೊಳಿಸಿದರೆ, ನಾನು ಯಶಸ್ಸನ್ನು ನಿಜವಾಗಿಯೂ ಆನಂದಿಸಲು ಸಾಧ್ಯವಾಗುತ್ತದೆ” ಎಂದು ನಟ ಹೇಳಿದರು.

Advertisement

ಸದ್ಯ ವಿಜಯ್‌ ದೇವರಕೊಂಡ ಅವರ ಈ ಮಾತುಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ನಟನ ಮಾನವೀಯ ಗುಣ, ಕಾಳಜಿಯನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

 

 

Advertisement

Udayavani is now on Telegram. Click here to join our channel and stay updated with the latest news.

Next