ಮಡಿಕೇರಿ: ಕುಶಾಲನಗರದ ರೋಟರಿ ಸಂಸ್ಥೆ ಹಾಗೂ ರೆಡ್‌ಕ್ರಾಸ್ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ರಕ್ತದಾನ ಶಿಬಿರ ಮತ್ತು ಏಡ್ಸ್ ಕುರಿತ ಜಾಗೃತಿ ಜಾಥಾ ಕಾರ್ಯಕ್ರಮ ನಡೆಯಿತು.
ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ರೋಟರಿ 3181 ಜಿಲ್ಲಾ ಗವರ್ನರ್ ಜೋಸೆಫ್ ಮ್ಯಾಥು ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ಶ್ರಮಿಸಬೇಕಿದೆ ಎಂದರು. ಸಾಮಾಜಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅತಿ ಮುಖ್ಯ ಎಂದ ಅವರು ಗುರುಹಿರಿಯರು, ಶಿಕ್ಷಕರನ್ನು ಗೌರವಿಸುವುದು, ದೇಶದ ಕಾನೂನು, ಸಂಚಾರಿ ನಿಯಮಗಳನ್ನು ಪರಿಪಾಲಿಸುವುದರೊಂದಿಗೆ ಮತ್ತೂಬ್ಬರ ಕಷ್ಟಕ್ಕೆ ನೆರವಾಗುವ ಗುಣಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ರೆಡ್‌ಕ್ರಾಸ್ ಸಂಸ್ಥೆ ಅಧ್ಯಕ್ಷ ಎಸ್.ಕೆ.ಸತೀಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಪಘಾತ, ಅವಘಡಗಳ ಸಂದರ್ಭ ತುರ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವುದು ಸಂಸ್ಥೆಯ ಮೂಲ ಧ್ಯೇಯ ಎಂದು ಮಾಹಿತಿ ನೀಡಿದರು.ಜಿಲ್ಲಾ ರಕ್ತನಿಧಿ ಘಟಕದ ವೈದ್ಯರಾದ ಡಾ| ಕರುಂಬಯ್ಯ ರಕ್ತದಾನದ ಮಹತ್ವ ಮತ್ತು ಕ್ರಮಗಳ ಬಗ್ಗೆ ಅರಿವು ಮೂಡಿಸಿದರು.
ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲ ಕೆಂಪೇಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೋಟರಿ ವಲಯ ಕಾರ್ಯದರ್ಶಿ ಎಚ್. ಟಿ. ಅನಿಲ್, ವಲಯ ಪ್ರತಿನಿಧಿ ಎನ್. ಜಿ. ಪ್ರಕಾಶ್, ಕುಶಾಲನಗರ ರೋಟರಿ ಅಧ್ಯಕ್ಷ ಎಂ.ಡಿ. ಅಶೋಕ್, ಕಾರ್ಯದರ್ಶಿ ಸಂಜು ಬೆಳ್ಳಿಯಪ್ಪ, ಕಾಲೇಜು ರೆಡ್‌ಕ್ರಾಸ್ ಘಟಕದ ಸಂಚಾಲಕ ಗಿರೀಶ್, ರೋಟರಿ ಮತ್ತು ರೆಡ್‌ಕ್ರಾಸ್ ಸಂಸ್ಥೆ ಪ್ರಮುಖರಾದ ಕೆ.ಪಿ. ಚಂದ್ರಶೇಖರ್, ಪಂಡರಿನಾಥನಾಯ್ಡು, ಮಹೇಶ್ ನಾಲ್ವಡೆ, ಕ್ರಿಜ್ವಲ್ ಕೋಟ್ಸ್, ಶೋಭಾ ಸತೀಶ್, ಎನ್.ಕೆ. ಮೋಹನ್‌ಕುಮಾರ್, ಬಿ.ಜೆ. ಅಣ್ಣಯ್ಯ ಸೇರಿದಂತೆ ನಿರ್ದೇಶಕರು, ಸದಸ್ಯರು, ಕಾಲೇಜು ಉಪನ್ಯಾಸಕ ವೃಂದದವರು ಇದ್ದರು.
ರೆಡ್‌ಕ್ರಾಸ್ ಸಂಸ್ಥೆ ಪ್ರಮುಖರು, ವಿದ್ಯಾರ್ಥಿಗಳು ರಕ್ತದಾನ ಮಾಡಿದರು.ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ರೋಟರಿ ಸಂಸ್ಥೆ ವತಿಯಿಂದ ಏಡ್ಸ್ ಕುರಿತ ಜಾಗೃತಿ ಜಾಥಾ ನಡೆಯಿತು.