ಸಾಗರ: ಹಲವು ಕಾರಣಗಳಿಂದ ಸಾಗರ ತಾಲೂಕಿನ ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬವಾದರೂ ತಾಂತ್ರಿಕ ಸಮಿತಿಯ ಶಿಪಾರಿಸಿನ ಮೇರೆಗೆ ನೂತನ ತಂತ್ರಜ್ಞಾನ ಉಪಯೋಗಿಸಿ ನಿರ್ಮಾಣ ಕಾರ್ಯ ನಡೆದಿದೆ. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಬರುವ 2024ರ ಡಿಸೆಂಬರ್ ವೇಳೆಗೆ ಕಾಮಗಾರಿಯನ್ನು ಪೂರೈಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಹಸಿರುಮಕ್ಕಿ ಸೇತುವೆ ಕಾಮಗಾರಿ ವಿಳಂಬ ನೀತಿಯ ಬಗ್ಗೆ ಸರ್ಕಾರದ ಗಮನ ಸೆಳೆದ ಶಾಸಕ ಬೇಳೂರು ಗೋಪಾಲಕೃಷ್ಣ ಬೆಳಗಾವಿ ಅಧಿವೇಶನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವಿಷಯವನ್ನು ಮಂಡಿಸಿದ ಸಂದರ್ಭದಲ್ಲಿ ಉತ್ತರಿಸಿದ ಸಚಿವರು, ಹೆಚ್ಚು ನೀರಿನ ಸಂದರ್ಭದಲ್ಲಿಯೂ ಯಂತ್ರೋಪಕರಣಗಳನ್ನು ಬಳಸಿ ನಿರ್ಮಾಣದ ಕೆಲಸವನ್ನು ಕೈಗೊಳ್ಳಲಾಗುತ್ತಿದೆ. ಸೇತುವೆಯ ತಳಪಾಯದ ಕೆಲಸ ವೇಗವಾಗಿ ನಡೆಯುತ್ತಿದೆ. ಕಳೆದ 4 ತಿಂಗಳಲ್ಲಿ ತಳಪಾಯದ 35 ಫೈಲಿಂಗ್ ಕಾಮಗಾರಿ, 6 ಫೈಲ್ ಕ್ಯಾಪ್ ಕಾಮಗಾರಿಗಳು ಪೂರ್ಣಗೊಂಡಿದೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಸೇತುವೆ ಕಾಮಗಾರಿಯನ್ನು ಇನ್ನು ಒಂದು ವರ್ಷದೊಳಗೆ ಪೂರೈಸುವ ಭರವಸೆ ಇದೆ ಎಂದರು.
ಶರಾವತಿ ಹಿನ್ನೀರ ಪ್ರದೇಶವಾದ ಹಸಿರುಮಕ್ಕಿ ಸೇತುವೆಯ ಕಾಮಗಾರಿಯನ್ನು 2018ರಿಂದ ಕೆಆರ್‌ಡಿಸಿಎಲ್ ವತಿಯಿಂದ ನಡೆಸಲಾಗುತ್ತಿದ್ದು ಇಲ್ಲಿಯವರೆಗೆ ಅದು ಪೂರ್ಣಗೊಂಡಿಲ್ಲ. ಇದರಿಂದ ಆ ಭಾಗದ ಜನರಿಗೆ ಹಾಗೂ ಶಾಲಾ ಕಾಲೇಜು ಮಕ್ಕಳಿಗೆ ಪ್ರವಾಸಿಗರಿಗೆ ತೊಂದರೆಯಾಗುತ್ತಿದೆ. ಇದು ಸರ್ಕಾರದ ಗಮನಕ್ಕೆ ಬಂದಿದೆಯೇ ಅಥವಾ ಯಾವ ಕಾರಣಕ್ಕೆ ವಿಳಂಬವಾಗುತ್ತಿದೆ ಎಂದು ಶಾಸಕರು ಪ್ರಶ್ನೆಯನ್ನು ಕೇಳಿದ್ದಾರೆ.
ಸಂಬಂಧಪಟ್ಟ ಜಾರಕಿಹೊಳಿ ಉತ್ತರವನ್ನು ನೀಡಿ, ಸೇತುವೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿರುತ್ತದೆ. 2018ರಲ್ಲಿ ವಿಧಾನಸಭಾ ಚುನಾವಣೆಯು ಘೋಷಣೆಯಾದ ಹಿನ್ನಲೆಯಲ್ಲಿ ನೀತಿ ಸಂಹಿತೆಯಿಂದ ಕಾಮಗಾರಿ ಆರಂಭ ಹಂತದಲ್ಲೇ ವಿಳಂಬವಾಗಿದೆ. ಅಲ್ಲದೆ 2019ರಲ್ಲಿ ಮತ್ತೆ ಲೋಕಸಭಾ ಚುನಾವಣೆ ಘೋಷಣೆಯಾಗಿ ನೀತಿ ಸಂಹಿತೆ ಅಡ್ಡಬಂದಿದ್ದರಿಂದ ಕೆಲವು ಮಾದರಿ ತಂತ್ರಜ್ಜಾನಗಳ ಪರೀಕ್ಷೆಯಲ್ಲಿ ವಿಳಂಬವಾಗಿ ದೆ. ಆರಂಭದ ಹಂತದಲ್ಲಿ ಹಿನ್ನೀರಿನ ಮಟ್ಟ ಹೆಚ್ಚಾಗಿದ್ದರಿಂದ ನಕ್ಷೆ ಹಾಗೂ ಸರ್ವೆ ಕಾರ್ಯದಲ್ಲಿ ವಿಳಂಬವಾಗಿದೆ. ಸದರಿ ಸೇತುವೆ ಕಾಮಗಾರಿ ಟರ್ನ್ ಕೀ ಆಧಾರದಲ್ಲಿ ಕೈಗೊಂಡಿದ್ದರಿಂದ ಸರ್ಕಾರಕ್ಕೆ ಆರ್ಥಿಕವಾಗಿ ನಷ್ಟವಾಗದ ರೀತಿಯಲ್ಲಿ ವಿನ್ಯಾಸಗಳನ್ನು ಪರಿಷ್ಕರಿಸಿ ಅನುಮೋದಿಸಲು ವಿಳಂಬವಾಗಿದೆ ಎಂದು ಸ್ಪಷ್ಟಪಡಿಸಲಾಗಿದೆ.
ಸೇತುವೆ ಕಾಮಗಾರಿ ಲಿಂಗನಮಕ್ಕಿ ಹಿನ್ನೀರಿನಲ್ಲಿ ನಡೆಯುತ್ತಿರುವುದರಿಂದ ಹಿನ್ನೀರು ಅತೀ ಹೆಚ್ಚು ತುಂಬಿದಾಗ ಕಾಮಗಾರಿ ನಡೆಸುವುದು ಸಾದ್ಯವಾಗುವುದಿಲ್ಲ. ವರ್ಷದಲ್ಲಿ 5,6 ತಿಂಗಳು ಮಾತ್ರ ಕಾಮಗಾರಿ ನಡೆಸಲು ಸಾಧ್ಯವಾಗುತ್ತಿದೆ. ಸೇತುವೆಯ ವಿನ್ಯಾಸದ ಮಾರ್ಪಾಡಿನಿಂದ ಕಾಮಗಾರಿ ಕುಂಠಿತವಾಗಿದೆ. ಕೋವಿಡ್ ಎರಡು ವರ್ಷ ಕಾಡಿದ್ದರಿಂದ ಲಾಕ್‌ಡೌನ್ ಕಾರಣದಿಂದ ಸರಕು ಸಾಮಗ್ರಿಗಳ ಸಾಗಾಟ ಹಾಗೂ ಕಾರ್ಮಿಕರ ಕೊರತೆಯಿಂದಾಗಿ ಕಾಮಗಾರಿ ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ.