Advertisement

“ಕುರುಕ್ಷೇತ್ರ’ಅಬ್ಬರ ಶುರು

09:11 AM May 21, 2019 | Lakshmi GovindaRaj |

-ಕುರುಕ್ಷೇತ್ರ ಕನ್ನಡ ವರ್ಶನ್‌ ಟಿವಿ ರೈಟ್ಸ್‌ – 9 ಕೋಟಿ
-ಹಿಂದಿ ಡಬ್ಬಿಂಗ್‌ ರೈಟ್ಸ್‌ -9.5 ಕೋಟಿ
-ಕುರುಕ್ಷೇತ್ರ ಕನ್ನಡ ವರ್ಶನ್‌ ಆಡಿಯೋ ರೈಟ್ಸ್‌ -1.5 ಕೋಟಿ ಇದು ಮುನಿರತ್ನ ನಿರ್ಮಾಣದ “ಕುರುಕ್ಷೇತ್ರ’ ಚಿತ್ರ ಬಿಡುಗಡೆಗೆ ಮೊದಲೇ ಮಾಡಿರುವ ಬಿಝಿನೆಸ್‌. ಆರಂಭದಿಂದಲೂ ಸಾಕಷ್ಟು ಕುತೂಹಲ ಕೆರಳಿಸಿದ್ದ ಚಿತ್ರ ಬಿಡುಗಡೆ ಯಾವಾಗ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು ಆಗಸ್ಟ್‌ 9 ರಂದು ಚಿತ್ರ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ತೆರೆಕಾಣಲಿದೆ. ಇದನ್ನು ಸ್ವತಃ ನಿರ್ಮಾಪಕ ಮುನಿರತ್ನ ಅವರೇ ಘೋಷಿಸಿದ್ದಾರೆ. ಈಗಾಗಲೇ ಚಿತ್ರದ ಬಿಝಿನೆಸ್‌ ಕೂಡಾ ಆರಂಭಿಸಿರುವ ಮುನಿರತ್ನ ಕನ್ನಡ ವರ್ಶನ್‌ ಟಿವಿ ರೈಟ್ಸ್‌, ಹಿಂದಿ ಡಬ್ಬಿಂಗ್‌ ರೈಟ್ಸ್‌, ಕನ್ನಡ ವರ್ಶನ್‌ ಆಡಿಯೋ ರೈಟ್ಸ್‌ ಮಾರಾಟ ಮಾಡಿದ್ದಾರೆ.

Advertisement

ಇತರ ಭಾಷೆಗಳ ವ್ಯಾಪಾರದಲ್ಲಿ ಮುನಿರತ್ನ ತೊಡಗಿದ್ದಾರೆ. ಅಂದಹಾಗೆ, “ಕುರುಕ್ಷೇತ್ರ’ ಚಿತ್ರ 2 ಡಿ ಹಾಗೂ 3 ಡಿಯಲ್ಲಿ ತಯಾರಾಗಿದ್ದು, ಎರಡೂ ವರ್ಶನ್‌ಗಳನ್ನು ಬಿಡುಗಡೆ ಮಾಡಿ, ಅಭಿಮಾನಿಗಳ ಕುತೂಹಲ ತಣಿಸಲು ಮುಂದಾಗಿದ್ದಾರೆ. ಕೆ.ಜಿ.ರಸ್ತೆಯ ಚಿತ್ರಮಂದಿರಗಳಲ್ಲಿ 3 ಡಿ ವ್ಯವಸ್ಥೆ ಇಲ್ಲದಿರುವುದರಿಂದ ಅಲ್ಲಿನ ಒಂದು ಚಿತ್ರಮಂದಿರದ ಸ್ಕ್ರೀನ್‌ ಅನ್ನು 3 ಡಿಗೆ ಪರಿವರ್ತಿಸಿ, ಅಲ್ಲಿ ಬಿಡುಗಡೆ ಮಾಡಲಿದ್ದಾರೆ.

ಗ್ರಾಫಿಕ್‌ನಿಂದ ತಡ: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕುರುಕ್ಷೇತ್ರ’ ಚಿತ್ರ ಇಷ್ಟೊತ್ತಿಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ, ತಡವಾಗಿ ಈಗ ಬಿಡುಗಡೆಯ ಹಂತಕ್ಕೆ ಬಂದಿದೆ. ಇದಕ್ಕೆ ಕಾರಣ ಗ್ರಾಫಿಕ್‌ ಕೆಲಸ ಎನ್ನುತ್ತಾರೆ. ಚಿತ್ರದಲ್ಲಿ ತುಂಬಾ ಗ್ರಾಫಿಕ್‌ ಕೆಲಸ ಇದ್ದ ಕಾರಣ ಚಿತ್ರ ತಡವಾಗಿದೆಯೇ ಹೊರತು, ಬೇರೆ ಯಾವುದೇ ಕಾರಣದಿಂದಲ್ಲ ಎನ್ನುವ ನಿರ್ಮಾಪಕ ಮುನಿರತ್ನ, “ಮೊದಲು ಸಿನಿಮಾವನ್ನು ನಾನು ನೋಡಿ, ನನಗೆ ತೃಪ್ತಿಯಾದ ನಂತರ ಬಿಡುಗಡೆ ಮಾಡಲು ನಿರ್ಧರಿಸಿದ್ದೆ. ಅದರಂತೆ ಈಗ ಸಿನಿಮಾ ನೋಡಿದ್ದೇನೆ. ನನಗೆ ತೃಪ್ತಿಯಾಗಿದೆ. ಹಾಗಾಗಿ, ಸಿನಿಮಾ ಬಿಡುಗಡೆಗೆ ಮುಂದಾಗಿದ್ದೇನೆ. ಐದು ಭಾಷೆಗಳಲ್ಲಿ ಚಿತ್ರ ವಿಶ್ವದಾದ್ಯಂತ ಆಗಸ್ಟ್‌ 9 ರಂದೇ ತೆರೆಕಾಣಲಿದೆ’ ಎನ್ನುವುದು ಮುನಿರತ್ನ ಮಾತು.

ಆಡಿಯೋ ರಿಲೀಸ್‌ಗೆ ಎಲ್ಲಾ ಕಲಾವಿದರು: “ಕುರುಕ್ಷೇತ್ರ’ ಚಿತ್ರದ ಪ್ರಚಾರಕ್ಕೆ ನಿಖಿಲ್‌, ದರ್ಶನ್‌ ಸೇರಿದಂತೆ ಎಲ್ಲಾ ಕಲಾವಿದರು ಬರುತ್ತಾರಾ ಎಂಬ ಪ್ರಶ್ನೆ ಅನೇಕರಲ್ಲಿತ್ತು. ಇದಕ್ಕೂ ಉತ್ತರಿಸುವ ಮುನಿರತ್ನ, “ಚಿತ್ರದ ಡೇಟ್‌ ಅನೌನ್ಸ್‌ ಮಾಡಲು ಕಲಾವಿದರು ಬೇಕಿಲ್ಲ. ಚಿತ್ರದ ಆಡಿಯೋ ಬಿಡುಗಡೆಯ ವೇದಿಕೆಯಲ್ಲಿ ನೀವು ಎಲ್ಲಾ ಕಲಾವಿದರನ್ನು ನೋಡುತ್ತೀರಿ. ಪ್ರತಿಯೊಬ್ಬರು ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ್ದಾರೆ. ಸ್ವತಃ ಅಂಬರೀಶ್‌ ಅವರೇ ಫೋನ್‌ ಮಾಡಿ, ಚಿತ್ರದ ಡಬ್ಬಿಂಗ್‌ ಅನ್ನು ಮುಗಿಸಿಕೊಟ್ಟಿದ್ದರು. ಅನಾರೋಗ್ಯದ ನಡುವೆಯೂ ಚಿತ್ರೀಕರಣಕ್ಕೆ ಸಹಕರಿಸಿದರು. ಈ ಸಂದರ್ಭದಲ್ಲಿ ಅವರಿಲ್ಲದ ನೋವು ಕಾಡುತ್ತಿದೆ’ ಎಂದರು ಮುನಿರತ್ನ. ಜುಲೈ ಮೊದಲ ವಾರದಲ್ಲಿ ಚಿತ್ರದ ಆಡಿಯೋ ಬಿಡುಗಡೆ ಮಾಡುವ ಯೋಚನೆ ಅವರಿಗಿದೆ.

ಧ್ವನಿ ಹೊಂದಿಕೆಯಾಗುವವರಿಂದ ಡಬ್ಬಿಂಗ್‌: ಚಿತ್ರ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಿಗೆ ಡಬ್‌ ಆಗಿದೆ. ಚಿತ್ರದ ಪಾತ್ರಗಳ ಧ್ವನಿಗೆ ಹೊಂದಿಕೆಯಾಗುವವರಿಂದಲೇ ಡಬ್ಬಿಂಗ್‌ ಮಾಡಿಸಲಾಗಿದೆಯಂತೆ. ಪಾತ್ರಗಳ ಮೂಲ ಧ್ವನಿಗೆ ಡಬ್ಬಿಂಗ್‌ ಹೊಂದಿಕೆಯಾಗದೇ ಇದ್ದರೆ ಚೆನ್ನಾಗಿರುವುದಿಲ್ಲ ಎಂಬ ಕಾರಣಕ್ಕೆ ಪಾತ್ರಕ್ಕೆ ಹೊಂದಿಕೆಯಾಗುವವರಿಂದಲೇ ಡಬ್ಬಿಂಗ್‌ ಮಾಡಿಸಲಾಗಿದೆಯಂತೆ.

Advertisement

ಹಿನ್ನೆಲೆ ನೋಡಿ ವ್ಯವಹಾರ: ತೆಲುಗು, ತಮಿಳು ಹಾಗೂ ಇತರ ಭಾಷೆಗಳ ಬಿಡುಗಡೆ ಕುರಿತಂತೆ ಮಾತುಕತೆ ನಡೆಯುತ್ತಿದೆ. ಚಿತ್ರದ ವಿತರಣೆಗೆ ಬರುವವರ ಹಿನ್ನೆಲೆ ನೋಡಿಕೊಂಡು ಮುಂದುವರೆಯುವುದಾಗಿ ಹೇಳುತ್ತಾರೆ ಮುನಿರತ್ನ. “ಸುಖಾಸುಮ್ಮನೆ ಸಿನಿಮಾ ತಗೊಂಡು ಬಿಡುಗಡೆ ಮಾಡಿ, ಕಾಸು ಮಾಡಿಕೊಂಡರೆ ಸಾಕು ಎಂಬ ಭಾವನೆ ಇರುವವರ ಜೊತೆ ವ್ಯಾಪಾರ ಮಾಡುವುದಿಲ್ಲ. ಈ ಸಿನಿಮಾವನ್ನು ಪಡೆಯುವ ಹಾಗೂ ಅದನ್ನು ನೀಟಾಗಿ ಬಿಡುಗಡೆ ಮಾಡುವ ಶಕ್ತಿ ಅವರಿಗಿರಬೇಕು’ ಎನ್ನುತ್ತಾರೆ.

ಮುಂದೆ ಹೋಗೋ ಮಾತೇ ಇಲ್ಲ: ಆಗಸ್ಟ್‌ 9 ರಂದು ಸುದೀಪ್‌ ಅವರ “ಪೈಲ್ವಾನ್‌’ ಚಿತ್ರ ಕೂಡಾ ಬಿಡುಗಡೆಯಾಗುವುದಾಗಿ ಚಿತ್ರತಂಡ ಘೋಷಿಸಿಕೊಂಡಿದೆ. ಇಬ್ಬರು ಸ್ಟಾರ್‌ಗಳ ದೊಡ್ಡ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ತೊಂದರೆಯಾಗುವುದಿಲ್ಲವೇ ಎಂಬ ಪ್ರಶ್ನೆಗೂ ಮುನಿರತ್ನ ಉತ್ತರಿಸುತ್ತಾರೆ. “ತೊಂದರೆಯಾಗುವ ಪ್ರಶ್ನೆಯೇ ಇಲ್ಲ. ಯಾವುದೇ ಕನ್ನಡ ಸಿನಿಮಾವಾದರೂ ಅದು ನಮ್ಮ ಸಿನಿಮಾ.

ವಾರಕ್ಕೆ ಏಳೆಂಟು ಸಿನಿಮಾಗಳನ್ನು ತಡೆದುಕೊಳ್ಳುವ ನಮ್ಮ ಚಿತ್ರರಂಗ ಎರಡು ಸಿನಿಮಾವನ್ನು ತಡೆಯುವುದಿಲ್ಲವೇ. ನಮ್ಮ ನಡುವೆ ಸ್ಪರ್ಧೆ, ಯುದ್ಧದ ಪ್ರಶ್ನೆಯೇ ಇಲ್ಲ. ಒಂದೇ ದಿನ ಅಣ್ಣ-ತಮ್ಮಂದಿರ ಗೃಹಪ್ರವೇಶ ಆಗುತ್ತಿದೆ ಎಂದು ಭಾವಿಸಿದರೆ ಆಯಿತು’ ಎನ್ನುವ ಮುನಿರತ್ನ, ತಾವು ಮುಂದೆ ಹೋಗುವ ಪ್ರಶ್ನೆಯೇ ಇಲ್ಲ ಎನ್ನುತ್ತಾರೆ. “ಈಗಾಗಲೇ ನನ್ನ ಸಿನಿಮಾದ ಬಿಡುಗಡೆ ತಡವಾಗಿದೆ. ಮತ್ತೆ ಮುಂದೆ ಹೋಗುವ ಮಾತೇ ಇಲ್ಲ’ ಎಂದು ನೇರವಾಗಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next