Advertisement

ಕುರುಕ್ಷೇತ್ರ ಬಿಡುಗಡೆ: 25 ಸಾವಿರ ಲಾಡು ಹಂಚಿಕೆ

02:31 PM Aug 10, 2019 | Suhan S |

ಮಂಡ್ಯ: ರೆಬಲ್ ಸ್ಟಾರ್‌ ದಿ. ಅಂಬರೀಶ್‌ ಹಾಗೂ ನಟ ದರ್ಶನ್‌ ಅಭಿನಯದ ಕುರುಕ್ಷೇತ್ರ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ದರ್ಶನ್‌ ಅಭಿಮಾನಿಗಳು ಮಂಡ್ಯದಲ್ಲಿ ಜೋಡೆತ್ತುಗಳ ಮೆರವಣಿಗೆ ನಡೆಸಿ, ಸಾರ್ವಜನಿಕರಿಗೆ 25 ಸಾವಿರ ಲಾಡು ವಿತರಣೆ ಮಾಡಿ ಸಂಭ್ರಮಿಸಿದರು.

Advertisement

ನಗರದ ಶ್ರೀ ಕಾಳಿಕಾಂಬ ದೇಗುಲದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿ ಶತದಿನೋತ್ಸವ ಆಚರಿಸಲಿ ಎಂದು ಪ್ರಾರ್ಥಿಸಿದರು. ಅಲ್ಲಿಂದ 50 ಜೊತೆ ಜೋಡೆತ್ತುಗಳು, 50 ಆಟೋಗಳು ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮಹಾವೀರ ಚಿತ್ರಮಂದಿರದವರೆಗೆ ಮೆರವಣಿಗೆ ನಡೆಸಲಾಯಿತು.

ಸಿಹಿ ವಿತರಣೆಗೆ ಸೀಮಿತ: ಚಿತ್ರಮಂದಿರದ ಬಳಿ ಬೆಳಗಿನ ಪ್ರದರ್ಶನಕ್ಕೆ ಆಗಮಿಸಿದ್ದ ಪ್ರೇಕ್ಷಕರು ಹಾಗೂ ಸಾರ್ವಜನಿಕರೆಲ್ಲರಿಗೂ ಲಾಡು ವಿತರಿಸಲಾಯಿತು. ಬಳಿಕ ಮಾತನಾಡಿದ ಕೆ.ಎಸ್‌.ಸಚ್ಚಿದಾನಂದ, ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಯಾಗಿ ಲಕ್ಷಾಂತರ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್‌ ಕಟೌಟ್‌ಗೆ ಭಾರೀ ಗಾತ್ರದ ಹೂವಿನ ಹಾರ ಹಾಕುವುದು, ಕ್ಷೀರಾಭಿಷೇಕ ನಡೆಸುವುದು ಸರಿಯಲ್ಲ. ಹಾಗಾಗಿ ಜೋಡೆತ್ತುಗಳ ಮೆರವಣಿಗೆಯೊಂದಿಗೆ ಆಗಮಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸುವುದಕ್ಕಷ್ಟೇ ಕಾರ್ಯಕ್ರಮವನ್ನು ಸೀಮಿತಗೊಳಿಸಿದ್ದೇವೆ ಎಂದರು. ಅಂಬರೀಶ್‌ ಅವರು ಕೊನೆಯದಾಗಿ ಅಭಿನಯಿಸಿದ ಚಿತ್ರ ಹಾಗೂ ದರ್ಶನ್‌ ಮೊದಲ ಬಾರಿಗೆ ಪೌರಾಣಿಕ ಚಿತ್ರದಲ್ಲಿ ನಟಿಸಿರುವ ಕುರುಕ್ಷೇತ್ರ ಚಿತ್ರ ಕನ್ನಡ ಚಿತ್ರರಂಗವಷ್ಟೇ ಅಲ್ಲದೆ ಭಾರತೀಯ ಚಿತ್ರರಂಗದ ಮಟ್ಟಿಗೆ ಅತ್ಯಂತ ಮಹತ್ವಾಕಾಂಕ್ಷೆಯ ಚಿತ್ರವಾಗಿದೆ. ಪ್ರೇಕ್ಷಕರು ಚಿತ್ರ ನೋಡುವ ಮೂಲಕ ಯಶಸ್ಸಿಗೆ ನೆರವಾಗಬೇಕು ಎಂದು ಮನವಿ ಮಾಡಿದರು.

ಆಹಾರ ಧಾನ್ಯ ರವಾನೆ: ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿ ಸಂಕಷ್ಟ ಸ್ಥಿತಿ ಎದುರಿಸುತ್ತಿರುವವರಿಗೆ ನೆರವಾಗಲು ದರ್ಶನ್‌ ಅಭಿಮಾನಿಗಳೆಲ್ಲರೂ ಕೈಜೋಡಿಸಿದ್ದೇವೆ. ಮುಂದಿನ ಎರಡು-ಮೂರು ದಿನದಲ್ಲಿ 100 ಕ್ವಿಂಟಲ್ ಅಕ್ಕಿ ಸೇರಿದಂತೆ ಮತ್ತಿತರ ಆಹಾರ ಧಾನ್ಯಗಳನ್ನು ಸಂಗ್ರಹಿಸಿ ರವಾನಿಸಲಾಗುವುದು ಎಂದು ಹೇಳಿದರು.

ಪೌರಾಣಿಕ ಪರ್ವ: ತಾಪಂ ಮಾಜಿ ಅಧ್ಯಕ್ಷ ತ್ಯಾಗರಾಜು ಮಾತನಾಡಿ, ಕುರುಕ್ಷೇತ್ರ ಕನ್ನಡ ಚಿತ್ರರಂಗದ ಮಹೋನ್ನತ ಚಿತ್ರ. ಪೌರಾಣಿಕ ಚಿತ್ರಗಳು ಕಣ್ಮರೆಯಾಗುತ್ತಿದ್ದ ಸಂದರ್ಭದಲ್ಲಿ ಕನ್ನಡ ಚಿತ್ರರಂಗದಲ್ಲಿ ಮತ್ತೆ ಹೊಸ ಪರ್ವ ಶುರುವಾಗಿದೆ. ಈ ಪ್ರಯತ್ನವನ್ನು ಕನ್ನಡ ಚಿತ್ರರಸಿಕರು ಪ್ರೋತ್ಸಾಹಿಸಿ ಬೆಂಬಲಿಸುವುದರೊಂದಿಗೆ ಚಿತ್ರ ಶತದಿನೋತ್ಸವ ಆಚರಿಸುವುದಕ್ಕೆ ನೆರವಾಗಬೇಕು ಎಂದು ಹೇಳಿದರು.

Advertisement

ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಲುಕಿರುವವರೆಲ್ಲರೂ ನಮ್ಮವರೇ. ಅವರ ರಕ್ಷಣೆ ನಮ್ಮ ಗುರಿಯಾಗಿದ್ದು, ಅದಕ್ಕಾಗಿ ಸಂತ್ರಸ್ಥರಿಗೆ ಅಗತ್ಯವಾದ ಆಹಾರ ಪದಾರ್ಥಗಳನ್ನು ಸಂಗ್ರಹ ಮಾಡುವುದರೊಂದಿಗೆ ಶೀಘ್ರವೇ ರವಾನಿಸಲಾಗುವುದು. ರಕ್ತದಾನ ಶಿಬಿರ ಏರ್ಪಡಿಸಿ ರಕ್ತ ಸಂಗ್ರಹಿಸಿ ಕಳುಹಿಸಿಕೊಡುವುದಾಗಿ ಹೇಳಿದರು. ಗ್ರಾಪಂ ಮಾಜಿ ಸದಸ್ಯ ರುದ್ರಪ್ಪ, ಮಹೇಶ್‌, ವೇಣು, ಆದರ್ಶ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next