Advertisement

ಕುರುಕ್ಷೇತ್ರ-ಪೈಲ್ವಾನ್‌ ಒಂದೇ ದಿನ ರಿಲೀಸ್‌ ಆಗುತ್ತಾ?

08:58 AM May 23, 2019 | Nagendra Trasi |

“ಆಗಸ್ಟ್‌ 9’… ಕನ್ನಡ ಚಿತ್ರರಂಗದ ಮಟ್ಟಿಗೆ ಹಬ್ಬ. ಅದರಲ್ಲೂ ಅಭಿಮಾನಿಗಳ ಪಾಲಿಗಂತೂ ಎಲ್ಲಿಲ್ಲದ ಸಡಗರ, ಸಂಭ್ರಮ. ಹಾಗಂತ, ಆಗಸ್ಟ್‌ 9 ರಂದು ಯಾವುದೇ ಚಿತ್ರೋತ್ಸವ ನಡೆಯುತ್ತಿಲ್ಲ. ಬದಲಿಗೆ ಇಬ್ಬರು ಬಿಗ್‌ಸ್ಟಾರ್‌ಗಳ ಚಿತ್ರಗಳು ಬಿಡುಗಡೆಯಾಗುತ್ತಿವೆ ಎಂಬ ಮಾತು ಜೋರಾಗಿದೆ. ಆ ಪೈಕಿ ಈಗಾಗಲೇ ದರ್ಶನ್‌ ಅಭಿನಯದ “ಮುನಿರತ್ನ ಕುರುಕ್ಷೇತ್ರ’ ಚಿತ್ರ ಬಿಡುಗಡೆಯ ದಿನಾಂಕವನ್ನು ಘೋಷಿಸಿಕೊಂಡಿದೆ. ಆಗಸ್ಟ್‌ 9 ರ ವರಮಹಾಲಕ್ಷ್ಮೀ ಹಬ್ಬದ ದಿನ
ಬಿಡುಗಡೆಯಾಗುತ್ತಿದೆ. ಅದೇ ದಿನ ಸುದೀಪ್‌ ಅಭಿನಯದ “ಪೈಲ್ವಾನ್‌’ ಚಿತ್ರವೂ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

ಹಾಗಾದರೆ, ನಿಜಕ್ಕೂ ಒಂದೇ ದಿನ “ಕುರುಕ್ಷೇತ್ರ’ ಮತ್ತು “ಪೈಲ್ವಾನ್‌’ ಚಿತ್ರಗಳು ಬಿಡುಗಡೆಯಾಗುತ್ತವೆಯಾ? ಇದು ಸದ್ಯಕ್ಕೆ ಎಲ್ಲರ ತಲೆಯಲ್ಲೂ ಗಿರಕಿ ಹೊಡೆಯುತ್ತಿರುವ ಪ್ರಶ್ನೆ.
ಇಷ್ಟಕ್ಕೂ ಆಗಸ್ಟ್‌ 9 ರಂದು “ಕುರುಕ್ಷೇತ್ರ’ ಬಿಡುಗಡೆ ಮಾಡುವುದನ್ನು ಪಕ್ಕಾ ಮಾಡಿರುವ ನಿರ್ಮಾಪಕ ಮುನಿರತ್ನ, ಯಾವುದೇ ಕಾರಣಕ್ಕೂ “ಕುರುಕ್ಷೇತ್ರ’ ಚಿತ್ರದ ಬಿಡುಗಡೆ
ದಿನಾಂಕವನ್ನು ಮುಂದೆ ಹಾಕುವುದಿಲ್ಲ. ಅಂದು ಯಾವುದೇ ಚಿತ್ರ ಬಿಡುಗಡೆಯಾದರೂ, “ಕುರುಕ್ಷೇತ್ರ’ ಬಿಡುಗಡೆಯಾಗುವುದು ಗ್ಯಾರಂಟಿ’ ಎಂದು ಹೇಳಿದ್ದಾರೆ.

ಅತ್ತ, ನಿರ್ದೇಶಕ ಕೃಷ್ಣ ಕೂಡ ವರಮಹಾಲಕ್ಷ್ಮೀ ಹಬ್ಬದ ದಿನದಂದೇ “ಪೈಲ್ವಾನ್‌’ ಚಿತ್ರವನ್ನು ಬಿಡುಗಡೆ ಮಾಡಲು ಜೋರು ತಯಾರಿ ನಡೆಸುತ್ತಿರುವುದಾಗಿ ಹಿಂದೆ ಹೇಳಿಕೊಂಡಿದ್ದರು. ಹಾಗಾದರೆ, ದರ್ಶನ್‌ ಸಿನಿಮಾ ಜೊತೆಗೆ ಸುದೀಪ್‌ ಚಿತ್ರವೂ ಬಿಡುಗಡೆಯಾಗುತ್ತಾ? ಈ ಪ್ರಶ್ನೆಗೆ ಉತ್ತರ ಆಗಸ್ಟ್‌ 9 ರಂದು ಸಿಗಲಿದೆ.

ಇಬ್ಬರು ಬಿಗ್‌ಸ್ಟಾರ್ ಚಿತ್ರಗಳು ಒಂದೇ ದಿನ ತೆರೆಗೆ ಬರುತ್ತಿವೆ ಅಂದರೆ, ಅಲ್ಲಿ ಸಹಜವಾಗಿಯೇ ಸಾಕಷ್ಟು ನಿರೀಕ್ಷೆ, ಕುತೂಹಲ ಇದ್ದೇ ಇರುತ್ತದೆ. ‌ “ಕುರುಕ್ಷೇತ್ರ’ ಮತ್ತು “ಪೈಲ್ವಾನ್‌’ ಚಿತ್ರಗಳು ಅಭಿಮಾನಿಗಳಲ್ಲಂತೂ ಇನ್ನಿಲ್ಲದ ಕುತೂಹಲ ಮೂಡಿಸಿವೆ. ಇದು ಅಭಿಮಾನಿಗಳಲ್ಲಷ್ಟೇ ಅಲ್ಲ, ಕನ್ನಡ ಚಿತ್ರರಂಗದಲ್ಲೂ ಸಂಚಲನ ಮೂಡಿಸುವ ವಿಷಯವೇ. ಆದರೆ, ಇದೆಲ್ಲಾ ಎಷ್ಟರ ಮಟ್ಟಿಗೆ ಸತ್ಯ ಅನ್ನೋದಷ್ಟೇ ಮುಖ್ಯ. ಆ ಸತ್ಯಾಸತ್ಯತೆಗೆ ವರಮಹಾಲಕ್ಷ್ಮೀ ಹಬ್ಬ ಸಾಕ್ಷಿಯಂತೂ ಆಗಲಿದೆ.

ಇಂದು ಕನ್ನಡ ಚಿತ್ರರಂಗದ ಮಾರುಕಟ್ಟೆ ವಿಸ್ತಾರವಾಗಿದೆ. ಸಿನಿಮಾ ಅನ್ನುವುದು ಮನರಂಜನೆ ಮಾತ್ರವಲ್ಲ. ಅದೊಂದು ವ್ಯಾವಹಾರಿಕ ಕ್ಷೇತ್ರ. ಯಾವುದೇ ನಿರ್ಮಾಪಕ ಇರಲಿ, ರಿಸ್ಕ್ ತೆಗೆ ದುಕೊಳ್ಳಲು ಸಿದ್ಧ ಇರುವುದಿಲ್ಲ. ಪ್ರತಿಯೊಬ್ಬರೂ, ಪ್ರೀತಿಯಿಂದ ಹಣ ಹಾಕಿ, ಕಷ್ಟಪಟ್ಟು ಸಿನಿಮಾ ತಯಾರು ಮಾಡಿರುತ್ತಾರೆ. ಹಾಗಾಗಿ, ಸುಖಾಸುಮ್ಮನೆ, ಪೈಪೋಟಿಗೆ ಬಿದ್ದು ಸಿನಿಮಾ ಬಿಡುಗಡೆ ಮಾಡಲು ಮುಂದಾಗುವುದೂ ಇಲ್ಲ. ಪ್ರತಿಯೊಬ್ಬ ನಿರ್ಮಾಪಕನಿಗೂ ಇಲ್ಲಿ ವ್ಯವಹಾರ ಅನ್ನುವುದು ಮುಖ್ಯ. ಆದ್ದರಿಂದ, ಎಲ್ಲವನ್ನೂ ತೂಗಿ, ಅಳೆದು ನಂತರ ಲಾಭ-ನಷ್ಟದ ಲೆಕ್ಕಾಚಾರ ಹಾಕಿಯೇ ಚಿತ್ರ ಬಿಡುಗಡೆ ಮಾಡಲು ನಿರ್ಧರಿಸುತ್ತಾನೆ.

Advertisement

ಗಾಂಧಿನಗರದಲ್ಲಿ ಈ ರೀತಿಯ ಎಷ್ಟೇ ಸುದ್ದಿಗಳು ಹರಡಿದರೂ, ಅದಕ್ಕೆ ಬಿಡುಗಡೆಯ ದಿನದವರೆಗೂ ಸ್ಪಷ್ಟತೆ ಸಿಗುವುದಿಲ್ಲ. ಚಿತ್ರರಂಗದಲ್ಲಿ ಈಗ ಆರೋಗ್ಯಕರ ಬೆಳವಣಿಗೆ ಇದೆ. ಯಾರೂ ಕೂಡಾ ರಿಸ್ಕ್ ಹಾಕಿಕೊಂಡು, ಜಿದ್ದಿಗೆ ಬಿದ್ದು ಕೈ ಸುಟ್ಟುಕೊಳ್ಳಲು ಸಿದ್ಧರಿಲ್ಲ. ಜೊತೆಗೆ ಎರಡು ಬಿಗ್‌ಸ್ಟಾರ್‌ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ, ಇಲ್ಲಿ ಯಾರಿಗೆ ನಷ್ಟ? ಯಾರಿಗೆ ಲಾಭ? ಎಂಬ ಲೆಕ್ಕಾಚಾರದ ಮೇಲೆ ಬಿಡುಗಡೆ ನಿರ್ಧರಿತವಾಗುತ್ತದೆ. ಇಲ್ಲಿ ಸಾವಧಾನದಿಂದ ಇದ್ದರೆ, ಎಲ್ಲವೂ ಒಳಿತು. ಇಲ್ಲವಾದರೆ, ಯಥಾಪ್ರಕಾರ ಒಂದಲ್ಲ ಒಂದು ಸಮಸ್ಯೆ ಸಹಜ.

ಬಿಗ್‌ಸಿನಿಮಾಗಳು ಒಂದೇ ದಿನ ತೆರೆಗೆ ಬಂದ ಉದಾಹರಣೆಗಳೂ ಇವೆ. ಬಿಡುಗಡೆ ಮಾಡುವ ಕುರಿತು ಜೋರಾದ ಮಾತುಕತೆಗಳೂ ನಡೆದಿವೆ. 2012 ರಲ್ಲಿ ಉಪೇಂದ್ರ ಅಭಿನಯದ “ಕಠಾರಿ ವೀರ ಸುರಸುಂದರಾಂಗಿ’ ಮತ್ತು “ಗಾಡ್‌ಫಾದರ್‌’ ಚಿತ್ರಗಳ ಬಿಡುಗಡೆ ಕುರಿತು ಸಾಕಷ್ಟು ಚರ್ಚೆ ಆಗಿದ್ದು ಗೊತ್ತೇ ಇದೆ. ಎರಡು ಸಿನಿಮಾಗಳಿಗೂ ಉಪೇಂದ್ರ ಹೀರೋ. ಆದರೆ, ನಿರ್ಮಾಪಕರು
ಬೇರೆ. ಮುನಿರತ್ನ ನಿರ್ಮಾಣದಲ್ಲಿ “ಕಠಾರಿ ವೀರ’ ತಯಾರಾಗಿತ್ತು.

ಕೆ.ಮಂಜು “ಗಾಡ್‌ಫಾದರ್‌’ ನಿರ್ಮಿಸಿದ್ದರು. ಒಂದೇ ದಿನ ಬಿಡುಗಡೆಗೆ ಇಬ್ಬರೂ ಪಟ್ಟು ಹಿಡಿದಿದ್ದರು. ಕೊನೆಗೆ ಹಿಂದೆ ಮುಂದೆ ಬರುವಂತಾಯ್ತು. ಅದು ಯಾರಿಗೆ ಎಷ್ಟು ಲಾಭ-ನಷ್ಟ ಆಯಿತು ಎಂಬುದಕ್ಕೆ ಉತ್ತರವಿಲ್ಲ. ಆದರೆ, ಆ ಸಿನಿಮಾದ ಬಿಡುಗಡೆಯ ಚರ್ಚೆ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿ ಚಿತ್ರದ ಪ್ರಚಾರಕ್ಕೆ ಸಹಾಯ ಮಾಡಿದ್ದು ಸುಳ್ಳಲ್ಲ.

ಈಗ “ಕುರುಕ್ಷೇತ್ರ’ ಮತ್ತು “ಪೈಲ್ವಾನ್‌’ ಚಿತ್ರ ಬಿಡುಗಡೆಯ ವಿಷಯದಲ್ಲೂ ಗೊಂದಲವಿದೆ. “ಪೈಲ್ವಾನ್‌’ ಚಿತ್ರದ ಒಂದಷ್ಟು ಕೆಲಸಗಳು ಬಾಕಿ ಇದ್ದರೂ, ವರಮಹಾಲಕ್ಷ್ಮೀ ಹಬ್ಬದ ಹೊತ್ತಿಗೆ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಶ್ರಮಿಸುತ್ತಿದೆ ಎನ್ನಲಾಗಿದೆ. ಇದೆಲ್ಲಾ ಸರಿ, ದೊಡ್ಡ ಸ್ಟಾರ್‌ ಸಿನಿಮಾಗಳು ಒಂದೇ ದಿನ ಬಿಡುಗಡೆಯಾದರೆ ಮುಖ್ಯವಾಗಿ ಕಾಡುವ ಸಮಸ್ಯೆ ಯಾವುದು? ಮೊದಲಿಗೆ ಚಿತ್ರಮಂದಿರಗಳು ಸರಿಯಾಗಿ ಸಿಗುವುದಿಲ್ಲ. ಇರುವ ಮುನ್ನೂರು ಪ್ಲಸ್‌ ಚಿತ್ರಮಂದಿರಗಳಲ್ಲಿ ಯಾರಿಗೆ ಎಷ್ಟು ಹಂಚಿಕೆಯಾಗುತ್ತವೆ ಅನ್ನುವುದು ಕುತೂಹಲ. ಸಿಂಗಲ್‌ ಥಿಯೇಟರ್‌ ಸೇರಿದಂತೆ ಮಲ್ಟಿಪ್ಲೆಕ್ಸ್‌ ಸಮಸ್ಯೆಯೂ ಕಾಡಲಿದೆ.

ಇನ್ನು, ಚಿತ್ರ ನೋಡುವ ಪ್ರೇಕ್ಷಕರಿಗೂ ಗೊಂದಲ ಸಹಜ. ನಿರ್ಮಾಪಕರಿಗೂ ಗೊಂದಲ ಇದ್ದೇ ಇರುತ್ತೆ. ಹಾಗಾಗಿ, ನಿರ್ಮಾಪಕರು ಕೂಡಾ ಯೋಚನೆ ಮಾಡಿಯೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿಬಂದಿವೆ. ಒಂದೇ ದಿನ ಅಣ್ಣ-ತಮ್ಮಂದಿರ ಗೃಹಪ್ರವೇಶವಾದರೆ ಕುಟುಂಬ ವರ್ಗ ಎರಡೂ ಕಾರ್ಯಕ್ರಮಗಳಲ್ಲಿ ಖುಷಿಯಿಂದ ಭಾಗವಹಿಸಲು ಆಗಲ್ಲ ಎಂಬ ಮಾತೂ ಕೇಳಿಬರುತ್ತಿರುವುದು ಸುಳ್ಳಲ್ಲ.

Advertisement

Udayavani is now on Telegram. Click here to join our channel and stay updated with the latest news.

Next