ದರ್ಶನ್ ಅಭಿನಯದ 50ನೇ ಚಿತ್ರವಾದ “ಕುರುಕ್ಷೇತ್ರ’ಕ್ಕೆ ಇನ್ನೂ ಇಬ್ಬರು ಸೇರ್ಪಡೆಯಾಗಿದ್ದಾರೆ. ಈ ಬಾರಿ ಸೇರ್ಪಡೆಯಾಗಿರುವವರು ಹಿರಿಯ ನಟಿ ಭಾರತಿ ವಿಷ್ಣುವರ್ಧನ್ ಮತ್ತು “ಸ್ಟೈಲ್ ಕಿಂಗ್’ ಚಿತ್ರದಲ್ಲಿ ಅಭಿನಯಿಸಿದ್ದ ರಮ್ಯಾ ನಂಬೀಸನ್. ಈ ಪೈಕಿ ಭಾರತಿ ವಿಷ್ಣುವರ್ಧನ್ ಅವರು ಕುಂತಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ದುರ್ಯೋಧನನ ಪತ್ನಿ ಭಾನುಮತಿಯಾಗಿ ರಮ್ಯಾ ನಂಬೀಸನ್ ಕಾಣಿಸಿಕೊಳ್ಳುತ್ತಿದ್ದಾರೆ.
ಇದಕ್ಕೂ ಮುನ್ನ ಕುಂತಿ ಪಾತ್ರವನ್ನು ಹಿರಿಯ ನಟಿ ಲಕ್ಷ್ಮೀ ಅವರು ಮಾಡಬೇಕಿತ್ತು. ಆದರೆ, ಅವರು “ಡ್ರಾಮಾ ಜ್ಯೂನಿಯರ್ – 2′ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವುದರಿಂದ, ಚಿತ್ರದಲ್ಲಿ ನಟಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಅವರ ಬದಲಿಗೆ ಈಗ ಭಾರತಿ ವಿಷ್ಣುವರ್ಧನ್ ಬಂದಿದ್ದಾರೆ. “ಕುರುಕ್ಷೇತ್ರ’ ಚಿತ್ರದ ಚಿತ್ರೀಕರಣ ಸತತವಾಗಿ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.
ಈಗಾಗಲೇ ಒಂದು ಹಾಡು, ಸೇರಿದಂತೆ ಹಲವು ಮಹತ್ವದ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ಅಂಬರೀಶ್, ಶ್ರೀನಾಥ್, ದರ್ಶನ್, ಹರಿಪ್ರಿಯಾ, ರವಿಚಂದ್ರನ್, ಅರ್ಜುನ್ ಸರ್ಜಾ, ಸೋನು ಸೂದ್, ರವಿಚೇತನ್ ಸೇರಿದಂತೆ ಹಲವರು ಅಭಿನಯಿಸಿರುವ ಪ್ರಮುಖ ದೃಶ್ಯಗಳನ್ನು ನಿರ್ದೇಶಕ ನಾಗಣ್ಣ ಚಿತ್ರೀಕರಿಸಿಕೊಂಡಿದ್ದಾರೆ. “ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್, ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಮಿಕ್ಕಂತೆ ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ಶಶಿಕುಮಾರ್, ರವಿಶಂಕರ್, ಶ್ರೀನಾಥ್, ಜಿ.ಕೆ. ಶ್ರೀನಿವಾಸಮೂರ್ತಿ, ಸ್ನೇಹ, ಹರಿಪ್ರಿಯಾ, ನಿಖೀಲ್ ಕುಮಾರ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಜಯನನ್ ವಿನ್ಸೆಂಟ್ ಛಾಯಾಗ್ರಹಣ, “ಕಿಂಗ್ ಸಾಲೋಮನ್’ ರವಿ ಸಾಹಸ, ಹರಿಕೃಷ್ಣ ಸಂಗೀತ, ಜೊ.ನಿ.ಹರ್ಷ ಸಂಕಲನ ಚಿತ್ರಕ್ಕಿದೆ. ಜಿ.ಕೆ. ಭಾರವಿ ಅವರು ಚಿತ್ರಕಥೆಯನ್ನು ರಚಿಸಿದ್ದು, ಯೋಜನಾ ನಿರ್ದೇಶಕರಾಗಿ ಜಯಶ್ರೀದೇವಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಚಿತ್ರವು ಥ್ರಿàಡಿಯಲ್ಲಿ ತಯಾರಾಗುತ್ತಿದೆ.