Advertisement

ಕೊನೇ ಹಂತದಲ್ಲಿ ಕುರುಕ್ಷೇತ್ರ

10:47 AM Dec 30, 2017 | |

ನಿರ್ಮಾಪಕ ಮುನಿರತ್ನ “ಕುರುಕ್ಷೇತ್ರ’ ಚಿತ್ರ ಮಾಡುತ್ತೇನೆಂದು ಘೋಷಿಸಿದ ದಿನದಿಂದಲೂ ಆ ಚಿತ್ರದ ಬಗ್ಗೆ ಕುತೂಹಲ, ನಿರೀಕ್ಷೆಗಳು ಹೆಚ್ಚುತ್ತಲೇ ಹೋಗಿವೆ. ದರ್ಶನ್‌ ದುರ್ಯೋಧನ ಪಾತ್ರ, ನಾಗಣ್ಣ ನಿರ್ದೇಶನ ಮಾಡುತ್ತಾರೆಂದು ಆರಂಭವಾದ ಸುದ್ದಿ, ಚಿತ್ರಕ್ಕೆ ಹೊಸ ಹೊಸ ಕಲಾವಿದರು ಸೇರ್ಪಡೆಗೊಳ್ಳುವುದರಿಂದ ಹಿಡಿದು ಅದ್ಧೂರಿ ಸೆಟ್‌ನಲ್ಲಿ ಚಿತ್ರೀಕರಣವಾಗುವವರೆಗೆ ಸಾಗಿ ಬಂದಿದೆ. ಈಗ ಚಿತ್ರದ ಕೊನೆಯ ಹಂತದ ಚಿತ್ರೀಕರಣ ನಡೆಯುತ್ತಿದೆ.

Advertisement

ಹೈದರಾಬಾದ್‌ನ ರಾಮೋಜಿ ರಾವ್‌ ಫಿಲಂ ಸಿಟಿಯಲ್ಲಿ ಹಾಕಲಾದ ನಾನಾ ಬಗೆಯ ಕಲರ್‌ಫ‌ುಲ್‌ ಸೆಟ್‌ನಲ್ಲಿ “ಕುರುಕ್ಷೇತ್ರ’ವನ್ನು ಕಟ್ಟಿಕೊಡಲಾಗಿದೆ. ಚಿತ್ರೀಕರಣ ಆರಂಭವಾದ ದಿನದಿಂದಲೂ ಸತತವಾಗಿ ಚಿತ್ರೀಕರಣದಲ್ಲಿ ಬಿಝಿಯಾಗಿದ್ದ ಚಿತ್ರತಂಡ ಚಿತ್ರದ ಕೊನೆಯ ಶೆಡ್ನೂಲ್‌ನಲ್ಲಿ ಪತ್ರಕರ್ತರನ್ನು ಹೈದರಾಬಾದ್‌ನ ಸೆಟ್‌ಗೆ ಕರೆಸಿಕೊಂಡು ಚಿತ್ರದ ಬಗೆಗಿನ ವಿವರ ನೀಡಿದೆ. ರಾಮೋಜಿ ರಾವ್‌ ಫಿಲಂ ಸಿಟಿಯೊಳಗಿನ “ಕುರುಕ್ಷೇತ್ರ’ ಝಲಕ್‌ ಅನ್ನು “ಉದಯವಾಣಿ‘ ಇಲ್ಲಿ ನೀಡುತ್ತಿದೆ ….   

ಅದ್ಧೂರಿ ಸೆಟ್‌ಗಳು: “ಕುರುಕ್ಷೇತ್ರ’ ಚಿತ್ರದ ಮುಖ್ಯ ಆಕರ್ಷಣೆಯಲ್ಲಿ ಸೆಟ್‌ಗಳು ಪ್ರಮುಖವಾಗಿರುತ್ತವೆ. ಇಡೀ ಚಿತ್ರವನ್ನು ಸೆಟ್‌ನೊಳಗೆ ಚಿತ್ರೀಕರಿಸಲಾಗಿದ್ದು, ಅದಕ್ಕಾಗಿಯೇ ಚಿತ್ರತಂಡ ಕೋಟಿಗಟ್ಟಲೇ ವ್ಯಯಿಸಿದೆ. ಚಿತ್ರದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುವುದಕ್ಕೆಂದೇ, ವಿಶೇಷ ಸೆಟ್‌ಗಳನ್ನು ಹಾಕಲಾಗಿದೆ. ಇಡೀ ಚಿತ್ರೀಕರಣಕ್ಕಾಗಿ ಸುಮಾರು 20ಕ್ಕೂ ಹೆಚ್ಚು ಸೆಟ್‌ಗಳನ್ನು ಹಾಕಿದ್ದು, ಇದರಲ್ಲಿ ಇಡೀ “ಕುರುಕ್ಷೇತ್ರ’ ಮೂಡಿಬಂದಿದೆ.

ಸೆಟ್‌ನ ವಿಶೇಷತೆಯಲ್ಲಿ ದರ್ಬಾರ್‌ ಹಾಲ್‌ ಕೂಡಾ ಒಂದು. ಇದು ಅತಿದೊಡ್ಡ ಸೆಟ್‌. ಚಿತ್ರದ ಎಲ್ಲಾ ಕಲಾವಿದರು ಸೇರುವ ಜಾಗ. ಅತಿಭಾರದ ಕಾಸ್ಟೂಮ್‌, ಮೇಕಪ್‌ ಹಾಕಿರುವ ಕಲಾವಿದರು ದಣಿಯಬಾರದು ಕಾರಣಕ್ಕೆ ಆ ದರ್ಬಾರ್‌ ಹಾಲ್‌ಗೆ ಹವಾನಿಯಂತ್ರಿತ ವ್ಯವಸ್ಥೆ ಮಾಡಿಸಿದ್ದಾರೆ ನಿರ್ಮಾಪಕ ಮುನಿರತ್ನ. ಈ ಹಾಲ್‌ನಲ್ಲಿ 30 ದಿನ ಚಿತ್ರೀಕರಣ ಮಾಡಲಾಗಿದೆ. 

ಕಿರಣ್‌ ಎನ್ನುವವರು ಈ ಚಿತ್ರದ ಕಲಾನಿರ್ದೇಶಕರಾಗಿದ್ದು, ಸೆಟ್‌ ಎಲ್ಲವೂ ಅವರ ಕಲ್ಪನೆಯಲ್ಲಿ ಮೂಡಿಬಂದಿದೆ. ಕಿರಣ್‌ ಅವರಿಗೆ ಕನ್ನಡದಲ್ಲಿ ಇದು ಎರಡನೇ ಸಿನಿಮಾ. ಈ ಹಿಂದೆ ಮುನಿರತ್ನ ನಿರ್ಮಾಣದ “ಕಠಾರಿವೀರ ಸುರಸುಂದರಾಂಗಿ’ ಚಿತ್ರಕ್ಕೆ ಕೆಲಸ ಮಾಡಿದ ಕಿರಣ್‌ ಅವರಿಗೆ ಮುನಿರತ್ನ ಅವರು ಮತ್ತೂಂದು ದೊಡ್ಡ ಪ್ರಾಜೆಕ್ಟ್ ಕೊಟ್ಟಿದ್ದಾರೆ. ಮುನಿರತ್ನ ಅವರ ನಂಬಿಕೆಯನ್ನು ಸಾಕಾರಗೊಳಿಸುವಂತಹ ಕೆಲಸ ಮಾಡಿದ ತೃಪ್ತಿ ಕಲಾ ನಿರ್ದೇಶಕ ಕಿರಣ್‌ ಅವರಿಗಿದೆ.

Advertisement

ದರ್ಶನ್‌ ಇಂಟ್ರೋಡಕ್ಷನ್‌ ಬಲುಜೋರು: “ಕುರುಕ್ಷೇತ್ರ’ ಚಿತ್ರದಲ್ಲಿ ದರ್ಶನ್‌ ದುರ್ಯೋಧನ ಪಾತ್ರ ಮಾಡುತ್ತಿರೋದು ನಿಮಗೆ ಗೊತ್ತೇ ಇದೆ. ಚಿತ್ರದಲ್ಲಿ ದುರ್ಯೋಧನನ ಎಂಟ್ರಿಯನ್ನು ಅದ್ಧೂರಿಯಾಗಿ ಚಿತ್ರೀಕರಿಸಲಾಗುತ್ತಿದೆ. ಶುಕ್ರವಾರ ಕೂಡಾ ದರ್ಶನ್‌ ಅವರ ಎಂಟ್ರಿ ಸಾಂಗ್‌ ಅನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು.

ನೂರಾರು ಕುದುರೆಗಳು, ಆನೆ, 500ಕ್ಕೂ ಹೆಚ್ಚು ಜ್ಯೂನಿಯರ್ ಭಾಗಿಯಾದ ಈ ಹಾಡಿನಲ್ಲಿ ದರ್ಶನ್‌ ಆನೆಮೇಲೆ ಕುಳಿತು ಗಾಂಭೀರ್ಯದೊಂದಿಗೆ ಬರುತ್ತಿರುವ “ಸಾಹೋರೇ ಸಾಹೋರೇ ಆಜಾನುಬಾಹುರೇ, ರಾಜಾಧಿ ರಾಜ …’ ಎಂಬ ಹಾಡನ್ನು ಚಿತ್ರೀಕರಿಸಿಕೊಳ್ಳುತ್ತಿತ್ತು ಚಿತ್ರತಂಡ. ಖ್ಯಾತ ನೃತ್ಯ ನಿರ್ದೇಶಕ ಗಣೇಶ್‌ ಅವರ ನಿರ್ದೇಶನದಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಈ ಹಾಡಿಗೆ ನಾಲ್ಕು ವಿಶೇಷವಾದ ಸೆಟ್‌ ಅನ್ನು ಬಳಸಿಕೊಳ್ಳಲಾಗಿದೆ.

ಜನವೋ, ಜನ: “ಕುರುಕ್ಷೇತ್ರ’ ಎಂಬ ಪದದ ಹಿಂದಿನ ಅರ್ಥವೇ ಬಹುದೊಡ್ಡದು. ಹೀಗಿರುವಾಗ ಅದನ್ನು ಸಿನಿಮಾ ಮಾಡೋದು ಸುಲಭದ ಕೆಲಸವಲ್ಲ. ಅದಕ್ಕೆ ಸಾಕಷ್ಟು ತಯಾರಿ ಬೇಕಾಗುತ್ತದೆ. ಹಾಗೆ ತಯಾರಿಯೊಂದಿಗೆ ಆರಂಭವಾದ “ಕುರುಕ್ಷೇತ್ರ’ ಚಿತ್ರದ ಸೆಟ್‌ನಲ್ಲಿ ದಿನವೊಂದಕ್ಕೆ 700 ರಿಂದ 800 ಮಂದಿ ಕೆಲಸ ಮಾಡುತ್ತಾರೆ. ಅದು ಜೂನಿಯರ್ನಿಂದ ಹಿಡಿದು ನಾಲ್ಕು ಯುನಿಟ್‌ವರೆಗೆ. ಚಿತ್ರ ಥ್ರಿಡಿ ಹಾಗೂ ಟುಡೀಯಲ್ಲಿ ತಯಾರಾಗುತ್ತಿರುವುದರಿಂದ ಪ್ರತಿ ದಿನ ಸೆಟ್‌ನಲ್ಲಿ 6 ಕ್ಯಾಮೆರಾ ಇರುತ್ತದೆ.

ಈ ಮೂಲಕ “ಕುರುಕ್ಷೇತ್ರ’ ಕನ್ನಡದ ಅದ್ಧೂರಿ ಚಿತ್ರವಾಗಿ ಮೂಡಿಬರುತ್ತಿದೆ. ಏಕಕಾಲಕ್ಕೆ “ಕುರುಕ್ಷೇತ್ರ’ದ ಚಿತ್ರೀಕರಣ ನಾಲ್ಕು ಸೆಟ್‌ಗಳಲ್ಲಿ ನಡೆಯುತ್ತಿರೋದು ಮತ್ತೂಂದು ವಿಶೇಷ. ಒಂದು ಸೆಟ್‌ನಲ್ಲಿ ಹಾಡಿನ ಚಿತ್ರೀಕರಣವಾದರೆ, ಇನ್ನೊಂದು ಸೆಟ್‌ನಲ್ಲಿ ಯುದ್ಧದ ಚಿತ್ರೀಕರಣ ಮಾಡಲಾಗುತ್ತಿದೆ. ಚಿತ್ರದಲ್ಲಿ ಯುದ್ಧದ ಎಪಿಸೋಡ್‌ ಕೂಡಾ ಪ್ರಮುಖ ಅಂಶವಾಗಿದ್ದು, ಗ¨ಯುದ್ಧವನ್ನು 16 ದಿನಗಳ ಚಿತ್ರೀಕರಣ ಮಾಡಲಾಗಿದೆ. 

ಕುರುಕ್ಷೇತ್ರಕ್ಕೆ ಗ್ರಾಫಿಕ್‌ ಬಲ: ಯಾವುದೇ ಒಂದು ಪೌರಾಣಿಕ ಸಿನಿಮಾಗಳಿಗೆ ದೊಡ್ಡ ಶಕ್ತಿಯಾಗಿ ನಿಲ್ಲುವುದು ಗ್ರಾಫಿಕ್‌. ಅದು ಈಗಾಗಲೇ ಅನೇಕ ಸಿನಿಮಾಗಳ ಮೂಲಕ ಸಾಬೀತಾಗಿದೆ ಕೂಡಾ. “ಕುರುಕ್ಷೇತ್ರ’ ಕೂಡಾ ಅದರಿಂದ ಹೊರತಾಗಿಲ್ಲ. ಈ ಚಿತ್ರಕ್ಕೂ ಶೇ 90 ರಷ್ಟು ಗ್ರಾಫಿಕ್‌ ಬಳಕೆಯಾಗಲಿದೆಯಂತೆ. ಈಗಾಗಲೇ ಚಿತ್ರೀಕರಣವಾಗಿರುವ ಅಂಶಗಳನ್ನು ಗ್ರಾಫಿಕ್‌ ಮತ್ತಷ್ಟು ಚೆಂದಗಾಣಿಸಲಿದೆ.

ಚಿತ್ರದ ಗ್ರಾಫಿಕ್‌ ಕೆಲಸ ಆರಂಭವಾಗಿದ್ದು, ದುರ್ಗಾಪ್ರಸಾದ್‌ ಎನ್ನುವವರು “ಕುರುಕ್ಷೇತ್ರ’ ಚಿತ್ರದ ಮುಖ್ಯ ಗ್ರಾಫಿಕ್‌ ಡಿಸೈನರ್‌. ಸದ್ಯ ಐದು ಕಡೆಗಳಲ್ಲಿ ಚಿತ್ರದ ಸಿಜಿ ಕೆಲಸ ನಡೆಯುತ್ತಿದೆ. ಬೆಂಗಳೂರು, ಹೈದರಾಬಾದ್‌, ಚೆನ್ನೈ, ಕೇರಳ ಹಾಗೂ ಮುಂಬೈನಲ್ಲಿ ಚಿತ್ರದ ಕೆಲಸ ನಡೆಯುತ್ತಿದೆ. ಎಲ್ಲವನ್ನು ದುರ್ಗಾಪ್ರಸಾದ್‌ ಅವರೇ ನೋಡಿಕೊಳ್ಳುತ್ತಿದ್ದಾರಂತೆ.

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಕುರುಕ್ಷೇತ್ರ’ ಚಿತ್ರೀಕರಣ ಇಷ್ಟೊತ್ತಿಗೆ ಮುಗಿಯಬೇಕಿತ್ತು. ಆದರೆ, ಕೆಲ ದಿನ ಚಿತ್ರೀಕರಣ ಮುಂದೆ ಹೋಗಿದ್ದು, ಈಗ ಮುಗಿಯುವ ಹಂತಕ್ಕೆ  ಬಂದಿದೆ. ಜನವರಿ 5 ರಂದು ಚಿತ್ರತಂಡ ಕುಂಬಳಕಾಯಿ ಒಡೆಯಲಿದೆ. ಹಾಗಾದರೆ ಚಿತ್ರ ಬಿಡುಗಡೆ ಯಾವಾಗ ಎಂದು ನೀವು ಕೇಳಬಹುದು. ಮಾರ್ಚ್‌ 2ರ ವೇಳೆಗೆ ಸೆನ್ಸಾರ್‌ ಮಾಡಿಸಿ, ಮಾರ್ಚ್‌ 9ರ ವೇಳೆಗೆ ಚಿತ್ರ ಬಿಡುಗಡೆ ಮಾಡಬೇಕೆಂಬ ಯೋಚನೆ ನಿರ್ಮಾಪಕ ಮುನಿರತ್ನ ಅವರಿಗಿದೆ. 

ದರ್ಶನ್‌ ಮೈಯಲ್ಲಿ 50 ಕೆಜಿ ಭಾರ: ದರ್ಶನ್‌ ಅವರ ದುರ್ಯೋಧನ ಪಾತ್ರದ ಮೇಕಪ್‌, ಕಾಸ್ಟೂéಮ್‌ ಕೂಡಾ ವಿಶೇಷವಾಗಿದ್ದು, ಕಾಸ್ಟೂಮ್‌ನ ಭಾರವೇ 40 ರಿಂದ 50 ಕೆಜಿ ಇತ್ತಂತೆ. ಬೆಳಗ್ಗೆ ಬಂದು ಕಾಸ್ಟೂéಮ್‌ ಹಾಕಿಕೊಂಡರೆ ಸಂಜೆ ಚಿತ್ರೀಕರಣ ಮುಗಿಯುವವರೆಗೆ ಅದೇ ಕಾಸ್ಟೂಮ್‌ನಲ್ಲಿ ಅಷ್ಟು ಭಾರವನ್ನು ಹೊತ್ತುಕೊಂಡು ಇರಬೇಕಿತ್ತು. ಚಿತ್ರೀಕರಣದ ಆರಂಭದಲ್ಲಿ ದರ್ಶನ್‌ ಬಳಸಿದ ಕಿರೀಟ ಅತಿಭಾರದಿಂದ ಕೂಡಿದ್ದು, ತಲೆನೋವು ಬರುತ್ತಿತ್ತಂತೆ.

ಅದಕ್ಕಾಗಿ ದರ್ಶನ್‌, 10 ದಿನ ಚಿತ್ರೀಕರಣ ಮಾಡಿ, ಎರಡು ದಿನ ರೆಸ್ಟ್‌ ಕೊಡಿ ಎಂದು ಕೇಳಿದ್ದು ಉಂಟು. ಕೊನೆಗೆ ನಿರ್ಮಾಪಕ ಮುನಿರತ್ನ ಹೊಸ ಕಿರೀಟ ಮಾಡಿಸಿ ಕೊಟ್ಟಿದ್ದಾರೆ. ಆ ಕಿರೀಟದ ಭಾರ ಕೇವಲ 22 ಕೆಜಿ! ದರ್ಶನ್‌ ಈ ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ ಕೂಡಾ. ಬೆಳಗ್ಗೆ ಐದು ಗಂಟೆಗೆ ಎದ್ದು ಎರಡು ಗಂಟೆ ವಕೌಟ್‌ ಮಾಡಿ, ಸೆಟ್‌ಗೆ ಬಂದರೆ, ಅವರ ಮೇಕಪ್‌ಗೆ ಒಂದೂವರೆ ಗಂಟೆ ಸಮಯ ತಗುಲುತ್ತಿತ್ತಂತೆ. 

“ಕುರುಕ್ಷೇತ್ರ ಕನ್ನಡ ಚಿತ್ರರಂಗಕ್ಕೊಂದು ಹೊಸ ಮೈಲುಗಲ್ಲು ಸೃಷ್ಟಿಸುತ್ತದೆ. ನಾನು ಮುನಿರತ್ನ ಅವರ ಸಿನಿಮಾ ಪ್ರೀತಿಯನ್ನು ಇಷ್ಟಪಡುತ್ತೇನೆ. ಕಮರ್ಷಿಯಲ್‌ ಸಿನಿಮಾಗಳನ್ನು ಯಾರು ಬೇಕಾದರೂ ನಿರ್ಮಿಸಬಹುದು. ಆದರೆ, ಈ ತರಹದ ಪೌರಾಣಿಕ ಸಿನಿಮಾಗಳನ್ನು ಮಾಡೋದು ಸುಲಭದ ಕೆಲಸವಲ್ಲ. ಆದರೆ, ಮುನಿರತ್ನ ಅವರು ಆಗಸ್ಟ್‌ನಿಂದ ಇವತ್ತಿನವರೆಗೂ ತುಂಬಾ ಪ್ರೀತಿಯಿಂದ ಸಿನಿಮಾ ನಿರ್ಮಿಸುತ್ತಿದ್ದಾರೆ. ನಾನು ಕೂಡಾ ತುಂಬಾ ಖುಷಿಯಿಂದ ಈ ಸಿನಿಮಾದಲ್ಲಿ ನಟಿಸಿದ್ದೇನೆ. ಮುಖ್ಯವಾಗಿ ಈ ಸಿನಿಮಾದಿಂದ ತಾಳ್ಮೆ ಕಲಿತೆ.

ಜೊತೆಗೆ ಡೈಲಾಗ್‌ ಡೆಲಿವರಿ, ಲಿಪ್‌ಮೂಮೆಂಟ್‌ ವಿಚಾರದಲ್ಲೂ ಸಾಕಷ್ಟು ಎಚ್ಚರ ವಹಿಸಿದ್ದೇವೆ. ಏಕೆಂದರೆ ಇಲ್ಲಿ ಸಂಸ್ಕೃತ, ಹಳೆಗನ್ನಡ ಸಂಭಾಷಣೆಗಳಿವೆ. ಡಬ್ಬಿಂಗ್‌ನಲ್ಲಿ ಲಿಪ್‌ಮೂಮೆಂಟ್‌ ಮಿಸ್‌ ಆಗಬಾರದು. ಹಾಗಾಗಿ, ಸಂಭಾಷಣೆಯನ್ನು ಚೆನ್ನಾಗಿ ಓದಿಕೊಂಡು ಬರುತ್ತಿದ್ದೆ. ಮುಖ್ಯವಾಗಿ ಈ ಸಿನಿಮಾದಲ್ಲಿ ನಾಲ್ಕು ಜನರೇಶನ್‌ನ ಕಲಾವಿದರನ್ನು ನೋಡಬಹುದು. 70,80, 90 ಹಾಗೂ ಈಗಿನ ಜನರೇಶನ್‌ನ ಕಲಾವಿದರು ನಟಿಸಿದ್ದಾರೆ. ಈ ಚಿತ್ರದ ಕಾಸ್ಟೂéಮ್‌ ಡಿಸೈನ್‌ ವಿಷಯದಲ್ಲಿ ನಿರ್ಮಾಪಕರ ಸಿನಿಮಾ ಪ್ರೀತಿಯನ್ನು ಮೆಚ್ಚಲೇಬೇಕು. ಪ್ರತಿಯೊಂದು ಕಾಸ್ಟೂéಮ್‌ ಹೀಗೆಯೇ ಬೇಕು ಎಂದು ಮಾಡಿಸಿದ್ದು ನಿರ್ಮಾಪಕರು. ಚಿತ್ರದ ಟೀಸರ್‌ಗಿಂತ ಸಿನಿಮಾ ಇನ್ನೂ ಭರ್ಜರಿಯಾಗಿರುತ್ತದೆ.’

-ದರ್ಶನ್‌

“ಕುರುಕ್ಷೇತ್ರ’ ಚಿತ್ರದ ಪ್ರಮುಖ ಕಲಾವಿದರು ಕನ್ನಡಿಗರೇ ಇರಬೇಕೆಂಬ ಆಸೆ ನನಗಿತ್ತು. ಅದು ಈಡೇರಿದೆ. ಸಿನಿಮಾವನ್ನು ನಾನು ಅಂದುಕೊಂಡಂತೆ ಅದ್ಧೂರಿಯಾಗಿ ಮಾಡಿದ್ದೇನೆ. ಇಲ್ಲಿ ಚಿತ್ರೀಕರಣ ನಡೆಯುವಾಗ ಬೇರೆ ಭಾಷೆಯ ಮಂದಿ ಬರೋರು. ಈ ಅದ್ಧೂರಿತನ ನೋಡಿ, “ಇದು ನಿಮ್ಮ ಕನ್ನಡಕ್ಕೆ ವಕೌಟ್‌ ಆಗುತ್ತಾ’ ಎಂದು ಕೇಳ್ಳೋರು. ನಾವು ಯಾವ ಭಾಷೆಗೂ ಕಮ್ಮಿ ಇಲ್ಲ ಎಂಬುದನ್ನು ತೋರಿಸಬೇಕಿದೆ. ಈ ಸಿನಿಮಾದಲ್ಲಿ ನಾಗೇಂದ್ರ ಪ್ರಸಾದ್‌ ಕೂಡಾ ಕೆಲಸ ಮಾಡಿದ್ದಾರೆ. ಬೇರೆ ಬೇರೆ ಯುನಿಟ್‌ಗಳು ಇರುವುದರಿಂದ ಅವರ ಸಹಕಾರವಿತ್ತು’
-ಮುನಿರತ್ನ, ನಿರ್ಮಾಪಕ

“ಇಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿದ್ದರಿಂದ ಇಂತಹ ಒಂದು ಸಿನಿಮಾವಾಗುತ್ತಿದೆ. ಯಾರು ಕೂಡಾ ನಾನು ಎಂಬ ಭಾವನೆಯಿಂದ ಕೆಲಸ ಮಾಡಿಲ್ಲ. ನಾವು ಎಂಬ ಭಾವನೆಯಿಂದ ದುಡಿದಿದ್ದೇವೆ. ಈ ಸಿನಿಮಾಕ್ಕಾಗಿ ರಾತ್ರಿ ಹಗಲು ಕೆಲಸ ಮಾಡಿದ್ದಾರೆ. ಎಲ್ಲವೂ ಪ್ಲ್ರಾನ್‌ ಪ್ರಕಾರ ಆಗಿದ್ದರಿಂದ ಏಕಕಾಲಕ್ಕೆ ಮೂರ್‍ನಾಲ್ಕು ಸೆಟ್‌ಗಳಲ್ಲಿ ಚಿತ್ರೀಕರಣವಾಗುತ್ತಿತ್ತು.’
-ನಾಗಣ್ಣ, ಸಿನಿಮಾ ನಿರ್ದೇಶಕ

ದರ್ಶನ್‌ ನನ್ನನ್ನು ತಮ್ಮನಂತೆ ಪ್ರೀತಿಯಿಂದ ನೋಡಿಕೊಂಡರು. ನಾನು ಇಂಗ್ಲೀಷ್‌ನಲ್ಲಿ ಡೈಲಾಗ್‌ ಬರೆದುಕೊಂಡು ಹೇಳಿದೆ. ಸೆಟ್‌ನಲ್ಲಿ ಎರಡು ತಿಂಗಳು ಇದ್ದಿದ್ದು ನನ್ನ ಜೀವನದ ಅಮೂಲ್ಯ ಅನುಭವ. ಇದನ್ನು ನಾನು ನನ್ನ ಜೀವನ ಸಾಧನೆ ಎಂದು ಪರಿಗಣಿಸಿದರೂ ತಪ್ಪಲ್ಲ.
-ಡ್ಯಾನಿಶ್‌ ಅಖ್ತರ್‌, ಭೀಮ ಪಾತ್ರಧಾರಿ

ದರ್ಶನ್‌ ಜೊತೆ ಮೊದಲ ಬಾರಿಗೆ ನಟಿಸಿದ್ದೇನೆ. ಈ ತರಹದ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಬೇಕೆಂಬ ಕನಸಿತ್ತು. ಅದೀಗ ಈಡೇರಿದೆ. 
-ಮೇಘನಾ ರಾಜ್‌, “ಭಾನುಮತಿ’ ಪಾತ್ರಧಾರಿ

* ವಿಜಯ್‌ ಭರಮಸಾಗರ

Advertisement

Udayavani is now on Telegram. Click here to join our channel and stay updated with the latest news.

Next