ಕುರುಗೋಡು: ಜ್ಞಾಪಕಶಕ್ತಿ ಹೆಚ್ಚಿಸಿಕೊಳ್ಳಲು ಮೂಲ ಅಧಾರವೇ ಗ್ರಂಥಾಲಯ. ಪತ್ರಿಕೆಗಳು ಜೊತೆಗೆ ಕವನ, ಸಾಹಿತ್ಯ, ಸಾಂಸ್ಕೃತಿಕ ಪರಂಪರೆ ಪುಸ್ತಕಗಳ ಓದುಗರಿಗೆ ಗ್ರಂಥಾಲಯವಿದ್ರೂ ಶಿಥಿಲಾವ್ಯಸ್ಥೆ, ಅಸ್ವಚ್ಛತೆಯಿಂದ ಕೂಡಿದೆ.
ಕುರುಗೋಡಿನ ಮುಷ್ಟಗಟ್ಟಿ ರಸ್ತೆಯ ಹಳೆ ಉಪನೋಂದಣಿ ಕಚೇರಿ ಹಿಂಭಾಗದಲ್ಲಿರುವ ಸಾರ್ವಜನಿಕ ಗ್ರಂಥಾಲಯವೂ ದಿ. ರಾಜಶೇಖರ್ ಗೌಡ ಅವರ ರಾಜಕೀಯ ಅವಧಿಯ 1991ರಲ್ಲಿ ಪ್ರಾರಂಭಿಸಲಾಗಿತ್ತು. 2007ರಿಂದ ಅದನ್ನು ಸಾರ್ವಜನಿಕ ಗ್ರಂಥಾಲಯ ಎಂದು ಕರೆಯಲಾಯಿತು. ಇದು ಸರಕಾರಿ ಕಟ್ಟಡದಲ್ಲಿದ್ದರೂ ಸಂಬಂಧಿ ಸಿದ ಇಲಾಖೆಯು ಮಾತ್ರ ಇದಕ್ಕೆ ಅನುದಾನ ಬಿಡುಗಡೆ ಮಾಡಿ ಸೌಕರ್ಯ ಒದಗಿಸಲು ಮುಂದಾಗದಿರುವುದು ದುರಂತದ ಸಂಗತಿಯಾಗಿದೆ.
ಗ್ರಂಥಾಲಯದಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದ ಕಾರಣ ಸಾರ್ವಜನಿಕರು ಗ್ರಂಥಾಲಯಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ. ಬೀಳುವ ಹಂತದಲ್ಲಿ ಗ್ರಂಥಾಲಯ: ಸಾರ್ವಜನಿಕ ಗ್ರಂಥಾಲಯದ ಮೇಲ್ಛಾವಣಿ ಸಂಪೂರ್ಣ ಶಿಥಿಲಾವಸ್ಥೆಯಿಂದ ಕೂಡಿದ್ದು ಮಳೆ ಬಂದರೆ ಎಲ್ಲೆಂದರಲ್ಲಿ ಸೋರುತ್ತದೆ. ಇವತ್ತೋ ನಾಳೆಯೋ ಬೀಳಲಿರುವ ಕಟ್ಟಡದಲ್ಲಿ ಜೀವ ಭಯದಿಂದಲೇ ಹೋಗಿ ಓದಿ ಬರಬೇಕಾದ ಸ್ಥಿತಿ ಇದೆ.
ಸ್ವಚ್ಛತೆ ಮರೀಚಿಕೆ: ಗ್ರಂಥಾಲಯದ ಒಳ ಭಾಗ ಮತ್ತು ಹೊರ ಭಾಗದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ. ಕಟ್ಟಡ ಪಾಳುಬಿದ್ದಂತಿದೆ. ಅಲ್ಲಿರುವ ಕುರ್ಚಿಗಳಿಗೆ, ಪುಸ್ತಕಗಳಿಗೆ ಧೂಳು ಆವರಿಸಿದ್ದು ಆವರಣದಲ್ಲಿ ಶ್ವಾನಗಳು ಆವಾಸ ಸ್ಥಾನ ಮಾಡಿಕೊಂಡಿದ್ದು ಮದ್ಯಪ್ರಿಯರು ಎಸೆದ ಬಾಟಲಿಗಳೂ ಅಲ್ಲೇ ಇವೆ.
ಬಳಕೆಯಾಗದ ಗ್ರಂಥಾಲಯ: ಗ್ರಂಥಾಲಯ ಯಾವಾಗಲೂ ಮುಚ್ಚಿಯೇ ಇರುತ್ತದೆ. ಸಿಬ್ಬಂದಿ ಪ್ರತಿನಿತ್ಯ ಬಾಗಿಲ ತೆರೆಯುವುದಿಲ್ಲ. ಹಾಗಾಗಿ ಓದುಗರಿಗೆ ತುಂಬ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಗ್ರಂಥಾಲಯಕ್ಕೆ ಬರುವುದು ಬಾಗಿಲು ಹಾಕಿರುವುದನ್ನು ನೋಡಿ ಮರಳಿ ಹೋಗುವುದು ನಿತ್ಯದ ಕೆಲಸವಾಗಿದೆ ಎನ್ನುತ್ತಾರೆ ಸಾರ್ವಜನಿಕರು.
ಸದ್ಯ ಪುರಸಭೆಗೆ ಸಂಬಂಧಿಸಿದ ಮಳಿಗೆಯಲ್ಲಿ ಗ್ರಂಥಾಲಯ ನಡೆಯುತ್ತಿದೆ. ಸಂಬಂಧಿಸಿದ ಇಲಾಖೆಯಡಿಯಲ್ಲಿ ಕೊಠಡಿ ನಿರ್ಮಿಸಿ ಗ್ರಂಥಾಲಯ ನಿರ್ಮಾಣವಾದರೆ ಸೌಲಭ್ಯ ಕೊರತೆ ಇರುವುದಿಲ್ಲ. ಸದ್ಯ ಗ್ರಂಥಾಲಯದ ಸ್ಥಿತಿಗತಿಯನ್ನು ಶಾಸಕರಿಗೆ ಮತ್ತು ಸ್ಥಳೀಯ ಪುರಸಭೆ ಆಡಳಿತಕ್ಕೆ ತಿಳಿಸಲಾಗಿದೆ. ಯಾವುದಾದರೂ ಅನುದಾನದಡಿಯಲ್ಲಿ ಸೌಕರ್ಯಗಳನ್ನು ಒದಗಿಸಲಾಗುವುದು ಎಂದಿದ್ದಾರೆ. ಗ್ರಂಥಾಲಯ ಸ್ವಚ್ಛತೆ ಮಾಡಲು ತಿಂಗಳಿಗೆ 100 ರೂ ಕೊಡುತ್ತಾರೆ. ಅದು ಯಾರಿಗೂ ಸಾಲುವುದಿಲ್ಲ. ಅದರ ನಿರ್ವಹಣೆ ಜತೆಗೆ ಸ್ವಚ್ಛತೆ ಕೂಡ ನಾನೇ ಮಾಡಿಕೊಂಡು ಹೋಗುತ್ತಿದ್ದೇನೆ ಎನ್ನುತ್ತಾರೆ ಗ್ರಂಥಪಾಲಕ ಗಿರೀಶ್.