ಕುರುಗೋಡು: ಬೇಸಿಗೆ ಹಿನ್ನೆಲೆಯಲ್ಲಿ ದಿನ ದಿನಕ್ಕೆ ಬಿಸಿಲಿನ ತಾಪ ಹೆಚ್ಚುತ್ತಿದೆ. ಎಲ್ಲೆಂದರಲ್ಲಿ ಜಲಮೂಲಗಳು ಬತ್ತಿ ಹೊಗುತ್ತಿವೆ. ಅದರಲ್ಲೂ ಇನ್ನೂ ದಿನದಿಂದ ದಿನಕ್ಕೆ ತುಂಗಭದ್ರಾ ನದಿಯಲ್ಲಿ ನೀರು ಕಡಿಮೆ ಆಗುತ್ತಿದೆ. ಇದರಿಂದ ಭತ್ತ ನಾಟಿ ಮಾಡಿದ ರೈತರು ದಿನ ದಿನಕ್ಕೆ ಆತಂಕದ ಒಳಗಾಗುತ್ತಿದ್ದಾರೆ.
ತುಂಗಭದ್ರಾ ನದಿ ದಂಡೆ ರೈತರು ಈಗಾಗಲೇ ಸೋನಾ, ನಲ್ಲೂರು ಸೋನಾ, ಗಂಗಾ ಕಾವೇರಿ ಸೇರಿದಂತೆ ಇತರೆ ಭತ್ತದ ಬೆಳಗಳು ನಾಟಿ ಮಾಡಿದ್ದು, ಬೆಳೆಗಳು ಕುಸುಮ ಹೊಡೆದು ಹಾಲು ತುಂಬಿ ಕಾಳು ಕಟ್ಟಿವೆ. ಇನ್ನೆನು ಒಂದು ಅಥವಾ ಎರಡು ನೀರು ಹರಿಸಿ ಬೆಳೆ ಕಾಟವು ಮಾಡಿ ಫಲ ಕೈಗೆ ಬರೋ ಸಮಯದಲ್ಲಿ ಹೊಳೆಯಲ್ಲಿ ನೀರು ಇಲ್ಲದೆ ಪಂಪ್ ಸೆಟ್‌ಗೆ ನೀರು ಸಿಗದೆ ಕಟಾವಿಗೆ ಬಂದ ಭತ್ತದ ಬೆಳೆಗಳು, ನೀರಿಲ್ಲದೇ ಬಿರುಕು ಬಿಟ್ಟಿದ್ದು ರೈತರು ಪರದಾಡುವಂತಾಗಿದೆ.
ಈಗಾಗಲೇ ನಾಲ್ಕು-ಐದು ವರ್ಷಗಳಿಂದ ಸರಿಯಾಗಿ ಮಳೆ, ಬೆಳೆ ಇಲ್ಲದೆ ರೈತರು ಕಂಗಾಲಾಗಿದ್ದು, ಈ ಬಾರಿ ತುಂಗಭದ್ರಾ ನದಿಗೆ ನೀರು ಬಿಟ್ಟಿರುವುದರಿಂದ ಆರ್ಥಿಕ ಪರಿಸ್ಥಿತಿಯಿಂದ ಚೇತರಿಸಿಕೊಳ್ಳಲು ಭತ್ತ ಬೆಳೆದಿದ್ದು, ಕೈಗೆ ಬರುವ ಸಮಯದಲ್ಲಿ ನೀರು ಇಲ್ಲವಾಗಿದೆ.
ಈಗಾಗಲೇ ಪಟ್ಟಣದ ವ್ಯಾಪ್ತಿಯ ತುಂಗಭದ್ರಾ ನದಿ ದಂಡೆಯ ರೈತರು ಮಣ್ಣೂರು ಗ್ರಾಮದ 3500 ಎಕರೆ ನೀರಾವರಿ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು, ಸೂಗೂರು 5910 ಎಕರೆ ನೀರಾವರಿ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ನಡವಿಯಲ್ಲಿ 5987.13 ಎಕರೆ ನೀರಾವರಿ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು, ಇನ್ನೂ ಸಿರಿಗೇರಿ, ಗೇಣಿಕೆಹಾಳ, ಬಸಾಪುರ, ಕೋಳೂರು ಇತರೆ ಗ್ರಾಮಗಳಲ್ಲಿ ಬೋರ್‌ವೆಲ್ ನೀರು ಅವಲಂಬಿತದಿಂದ ಭತ್ತ ನಾಟಿ ಮಾಡಿದ್ದಾರೆ. ಭತ್ತ ನಾಟಿ ಮಾಡುವ ಪ್ರಾರಂಭದಲ್ಲಿ ಸಸಿಗಳಿಗೆ ಕೊರತೆ ಕಂಡುಬಂದಿದ್ದರು, ಸೆಂಟ್ಸ್ ಲೆಕ್ಕದಲ್ಲಿ ಬೇರೆಡೆಯಿಂದ ತಂದು ಭತ್ತ ನಾಟಿ ಮಾಡಿದ್ದಾರೆ. ವರ್ಷ ಪೂರ್ತಿ ಜಮೀನು ಹದಗೊಳಿಸಿ ರಸಗೊಬ್ಬರ ಹಾಕಿ ಔಷಧಿ ಸಿಂಪರಣೆ ಮಾಡಿದರು ಕೊನೆ ವೇಳೆಯಲ್ಲಿ ವಿದ್ಯುತ್ ಮತ್ತು ನೀರಿನ ಕೊರತೆಯಿಂದ ರೈತರು ಚೇತರಿಸಿಕೊಳ್ಳುವುದು ಕಷ್ಟಕರವಾಗಿದೆ.
ಈಗಾಗಲೇ ಏ.10ರವರೆಗೆ ಕಾಲುವೆ ಮತ್ತು ನದಿಗಳಿಗೆ ನೀರು ಬಿಡಬೇಕು ಎಂದು ನೀರಾವರಿ ಸಚಿವರಿಗೆ ತಿಳಿಸಿ ಮನವಿ ಕೂಡ ಮಾಡಿದ್ದೀವಿ. ನಂದಿದಂಡೆ ವ್ಯಾಪ್ತಿಯಲ್ಲಿ ಸುಮಾರು 75 ಸಾವಿರ ಎಕರೆ ರೈತರು ಭತ್ತ ನಾಟಿ ಮಾಡಿದ್ದಾರೆ. ಏ.10ರವರೆಗೆ ನೀರು ಬಿಡದಿದ್ರೆ ರೈತರು ಕಂಗಾಲಾಗುತ್ತಾರೆ. ನೀರು ಕೊಡದೆ ಇರುವವರಿಗೆ ಲೋಕಸಭೆ ಚುನಾವಣೆಯಲ್ಲಿ ಮತ ಹಾಕುವುದಿಲ್ಲ.
. ದರೂರು ಪುರುಷೋತ್ತಮಗೌಡ,
ಜಿಲ್ಲಾಧ್ಯಕ್ಷ, ತುಂಗಭದ್ರಾ ರೈತ ಸಂಘ.