ಕುರುಗೋಡು: ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ರೈತರು ಜಮೀನನ್ನು ಹದಗೊಳಿಸಿ ಸಸಿಮಡಿ ಹಾಕಲು ಮುಂದಾಗಿದ್ದಾರೆ.
ಈಗಾಗಲೇ ಮೇಲ್ಭಾಗದಲ್ಲಿ ಅಲ್ಪಮಳೆ ಸುರಿದು ಕಳೆದ ನಾಲ್ಕು-ಐದು ದಿನಗಳಿಂದ ರೈತರ ಜೀವನಾಡಿಯಾದ ತುಂಗಭದ್ರಾ ಡ್ಯಾಂಗೆ ನೀರು ಬರುವುದರಿಂದ, ಮುಂದಿನ ತಿಂಗಳ ಮೊದಲ ವಾರದೊಳಗೆ ಜಲಾಶಯ ಭರ್ತಿಗೊಂಡು ನದಿಗೆ ನೀರು ಬಿಡುವ ಅಶಾಭಾವ ಹೊಂದಿ ರೈತರು ತಮ್ಮ ಜಮೀನನ್ನು ಹದಗೊಳಿಸಿ ಭತ್ತದ ಸೋನಾ ಬೀಜ ಸೇರಿದಂತೆ ವಿವಿಧ ರೀತಿಯ ಬೀಜಗಳ ಸಸಿಮಾಡಿ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಈ ಭಾಗದಲ್ಲಿ ಹಳ್ಳ ಮತ್ತು ಬೋರ್‌ವೆಲ್ ಹೊಲಗದ್ದೆಗಳಿಗೆ ಬಾರಿ ಬೇಡಿಕೆ ಹೆಚ್ಚಿದ್ದು, ಬೋರ್‌ವೆಲ್ ಹಾಗೂ ಹಳ್ಳದ ಪ್ರದೇಶದಲ್ಲಿ ಹಾಕಿರುವ ಸಸಿಗಳನ್ನು ಖರೀದಿ ಮಾಡಲು ನಾನಾ ಭಾಗದ ರೈತರು ಮುಂಗಡವಾಗಿ ಒಪ್ಪಂದ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಹಲವು ಬೇರೆ ಕಡೆ ರೈತರು ತಮ್ಮ ಹೊಲಗಳಲ್ಲಿ ಸಸಿ ಮಡಿ ಹಾಕಲು ನೀರಿನ ವ್ಯವಸ್ಥೆ ಇಲ್ಲದ ಕಾರಣ ಬೋರ್‌ವೆಲ್ ಪ್ರದೇಶದ ಹೊಲಗದ್ದೆಗಳ ಜಮೀನಿನಲ್ಲಿ ಸೋನಮಸೂರಿ ಬೀಜ ಹಾಕಲು ಚೀಲಕ್ಕೆ (75 ಕೆಜಿ) 3ರಿಂದ 4 ಸಾವಿರವರೆಗೆ ಬೇಡಿಕೆಯಿದೆ. ಪೂರ್ವವಾಗಿ ಸಸಿಮಾಡಿ ಬೀಜ ಹಾಕುವುದರಿಂದ ಸರಿಯಾದ ಸಮಯಕ್ಕೆ ಮುಂದಿನ ತಿಂಗಳ ನಂತರ ಹೊಲಗಳಲ್ಲಿ ಭತ್ತದ ಸಸಿ ನಾಟಿ ಮಾಡಲು ಅನುಕೂಲವಾಗುತ್ತದೆ ಎಂದು ಗ್ರಾಮದ ಪ್ರಗತಿಪರ ರೈತರ ಆಶಯವಾಗಿದೆ.
ಒಟ್ಟಾರೆಯಾಗಿ ಸರಿಯಾದ ಸಮಯಕ್ಕೆ ಮಳೆ ಅಗದೆ ಮತ್ತು ಜಲಾಶಯದಲ್ಲಿ ಸರಿಯಾಗಿ ನೀರಿಲ್ಲದ ಕಾರಣ ಇದನ್ನೇ ಅವಲಂಬಿಸಿರುವ ರೈತರು ಕೆಲಸವಿಲ್ಲದೆ ಕುಳಿತ್ತಿದ್ದು ಮೂರು ನಾಲ್ಕು ದಿನಗಳಿಂದ ಅಲ್ಪ ಮಳೆ ಆಸರೆಗೆ ಹಾಗೂ ಮೆಲ್ಭಾಗದ ಮಳೆಯಿಂದ ಜಲಶಾಲಯಕ್ಕೆ ನೀರು ಬರುತ್ತಿರುವ ಹಿನ್ನೆಲೆಯಲ್ಲಿ ಕೆಲ ರೈತರು ಸಸಿ ಮಡಿ ಹಾಕಲು ಮುಂದಾಗಿದ್ದಾರೆ. ಇನ್ನೂ ಹಲವು ರೈತರು ಭತ್ತ ನಾಟಿ ಮಾಡಲು ಮುಂದಾಗಿದ್ದಾರೆ. ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ಬರುವ ಗುತ್ತಿಗನೂರು, ಗೆಣಿಕೆಹಾಳು, ನೆಲ್ಲೂಡಿ, ಎಚ್. ವೀರಾಪುರ, ನೆಲ್ಲೂಡಿ ಕೊಟ್ಟಾಲ್, ಮಣ್ಣೂರು, ಸುಗೂರು, ಸೋಮಲಾಪುರ, ಚೀಟಿಗಿನಹಾಳ್‌ನಲ್ಲಿ ಬೀಜ ಹಾಕುವುದು ಭರದಿಂದ ಸಾಗಿದೆ.