ಕುರುಗೋಡು: ಬೇಸಿಗೆ ಅವಧಿ ಮುಗಿಯುವುದರೊಳಗೆ ಭತ್ತದ ಬೆಳೆ ಕಾಳು ಕಟ್ಟಲು ಅರಂಭಿಸಿದ್ದು ಭತ್ತದ ಬೆಳೆಗಳ ಇಳುವರಿಯಲ್ಲಿ ಕುಂಠಿತಗೊಳ್ಳುವ ಸಾಧ್ಯತೆ ರೈತರನ್ನು ಆತಂಕಕ್ಕೀಡು ಮಾಡಿದೆ.
ಹೌದು, ನದಿ ದಂಡೆ ರೈತರು ಸೇರಿದಂತೆ ಹಲವು ಕಡೆ ರೈತರು ಬೇಸಿಗೆ ಬೆಳೆಯಲ್ಲಿ ಗಂಗಾ ಕವೇರಿ, ನಲ್ಲೂರು ಸೋನಾ, ಗಂಗಾವತಿ ಸೋನಾ, ಆರ್‌ಎನ್ ಆರ್ 15048 ಭತ್ತದ ತಳಿಗಳನ್ನು ನಾಟಿ ಮಾಡಿದ್ದು, ಆರ್‌ಎನ್‌ಆರ್ 15048 ಭತ್ತವು ಕುಸುಮ ಹೊಡೆದು ಕಾಳುಕಟ್ಟುತ್ತಿದೆ. ಇದರಿಂದ ಭತ್ತವು ಬಟ್ಟೆ ಕಟ್ಟದೆ ಕಾಳುಗಳಲ್ಲಿ ಪಿಂಡ ಇಲ್ಲದೆ ಇಳುವರಿ ಕುಂಠಿತವಾಗುತ್ತಿದೆ.
ಕುರುಗೋಡು ಪಟ್ಟಣ ಸೇರಿದಂತೆ ಎಮ್ಮಿಗನೂರು, ಸಿರಿಗೇರಿ, ಮಣ್ಣೂರು ಸೂಗೂರು, ರುದ್ರಪಾದ, ನಡವಿ, ಸಿಂ ಗೇರಿ, ಬೈಲೂರು, ಕೋಳೂರು, ದೊಡ್ಡರಾಜ ಕ್ಯಾಂಪ್, ಗುತ್ತಿಗನೂರು, ಸಿದ್ದಮ್ಮನಹಳ್ಳಿ ಸೇರಿದಂತೆ ಇತರೆ ಬಹುತೇಕ ಗ್ರಾಮಳಲ್ಲಿ ರೈತರು ನಾಟಿ ಮಾಡಿದ ಬೆಳೆಗಳಲ್ಲಿ ಅವ ಧಿ ಮುಂಚಿತವಾಗಿಯೇ ಭತ್ತ ಬೆಳೆ ಕಾಳು ಕಟ್ಟಿವೆ. ಈಗಾಗಲೇ ರೈತರು ನಾಟಿ ಮಾಡಿದ ಬೆಳೆಗೆ ಎರಡರಿಂದ ಮೂರು ಸಲ ರಸಗೊಬ್ಬರ ಹಾಗೂ ಔಷಧ ಸಿಂಪರಣೆ ಮತ್ತು ಕಳೆನಾಶಕ, ಭತ್ತದ ಸಸಿ ಸೇರಿದಂತೆ ಎಕರೆಗೆ 20 ಸಾವಿರದಿಂದ 25 ಸಾವಿರ ಖರ್ಚು ಮಾಡಿದ್ದಾರೆ. ಇತರದ ಬೆಳೆ ಇರುವುದರಿಂದ ಬೆಳೆಗೆ ಖರ್ಚು ಮಾಡಿದ ಹಣವನ್ನು ಪಡಿಯುತ್ತೇವೆ ಇಲ್ಲವೋ ಎಂಬುವುದು ರೈತರ ಸಮಸ್ಯೆಯಾಗಿದೆ.
ಕಳೆದ ವರ್ಷದ ಎಫೆಕ್ಟ್: ಕಳೆದ ಬೇಸಿಗೆಯಲ್ಲಿ ಬೆಳೆಗೆ ಸರಿಯಾದ ನೀರಿನ ಸೌಲಭ್ಯವಿಲ್ಲದೆ, ಮಳೆ ಇಲ್ಲದೆ ನಾಟಿ ಮಾಡಿದ ಬೆಳೆಗಳು ಜಾನುವಾರುಗಳ ಪಾಲಾಗಿದ್ದವು. ಇನ್ನೊಂದು ಕಡೆ ಕೆಲ ರೈತರು ನೀರಿನ ಸಮಸ್ಯೆಯಿಂದ ಜಮೀನುಗಳನ್ನು ಹದಗೊಳಿಸಿ ನಾಟಿ ಮಾಡದೆ ಹಾಗೆ ಬಿಟ್ಟಿದ್ದಾರೆ. ಇದರಿಂದ ಕೆಲ ಹೊಲಗಳ ಭೂಮಿಯ ಮಣ್ಣಿನ ಫಲವತ್ತತೆ ಕುಸಿತದಿಂದ ಈ ವರ್ಷ ನಾಟಿ ಮಾಡಿದ ಭತ್ತದ ಬೆಳೆಗಳಲ್ಲಿ ಸರಿಯಾಗಿ ಬೆಳವಣಿಗೆ ಕಾಣುತ್ತಿಲ್ಲ. ಇನ್ನೂ ನಾಟಿ ಮಾಡಿದ ಬೆಳೆಗಳಲ್ಲಿ ಕೆಲವು ಕಡೆ ಸಸಿಗಳು ಚಿಗುರದೆ ಕರಗಿ ಹೋಗುತ್ತಿವೆ. ಈ ಎಲ್ಲ ನಿಟ್ಟಿನಲ್ಲಿ ರೈತರು ಸಾಲದ ಬಾಧೆಯಲ್ಲಿ ಜೀವನ ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಬೇಸಿಗೆ ಬೆಳೆಗಳು ಚಳಿಗಾಲ ಇರುವುದರಿಂದ ಆರ್‌ಎನ್‌ಆರ್ ಅಲ್ಲದೆ ಎಲ್ಲ ತಳಿಯ ಬೆಳೆಗಳು ಅವಧಿಗೂ ಮುನ್ನ ಕಾಳು ಬಿಡಲಾರಂಭಿಸಿವೆ. ಅಲ್ಲದೆ ಬೇಸಿಗೆ ಬೆಳೆಗೆ ನೀರು ಸಿಗಲ್ಲ ಎಂಬ ಕಾರಣದಿಂದ ಬೇರೆ ಬೇರೆ ಕಡೆ ಹಾಕಿದ ಸಸಿಗಳನ್ನು ರೈತರು ಖರೀದಿ ಮಾಡಿ ನಾಟಿ ಮಾಡಿದ್ದಾರೆ. ಅವು ದಿನಗಳನ್ನು ಪೂರೈಸಿರುತ್ತವೆ. ಇದರಿಂದ ಕೂಡ ಅವಧಿಗೂ ಮುನ್ನ ಕಾಳು ಬಿಡುವ ಸಾಧ್ಯತೆ ಇರಬಹುದು.
ಡಾ| ಬಸವಣ್ಣೆಪ್ಪ ಎಂ.ಎ.,
ಕೃಷಿ ವಿಜ್ಞಾನಿಗಳು
ನಾನು ಸುಮಾರು 5 ಎಕರೆಯಲ್ಲಿ ಆರ್‌ಎನ್‌ಆರ್ ಭತ್ತ ನಾಟಿ ಮಾಡಿ ಸುಮಾರು ಎರಡೂವರೆ ತಿಂಗಳಾಗಿದೆ. ಈಗಾಲೇ ಅಲ್ಲಲ್ಲಿ ಕಾಳು ಬಿಡಲಾರಂಭಿಸಿದೆ. ಇದರಿಂದ ಇಳುವರಿ ಕುಂಠಿತಗೊಂಡು ಖರ್ಚು ಮಾಡಿದ ಹಣ ತೆಗೆಯುವುದೂ ಕಷ್ಟವಾಗಿದೆ.
ಈರಣ್ಣ, ರೈತ
ಸುಧಾಕರ್ ಮಣ್ಣೂರು