Advertisement

ಮೂಲ ಸೌಲಭ್ಯವಿಲ್ಲದೆ ನಿತ್ಯ ನರಕಯಾತನೆ!

12:38 PM Feb 09, 2020 | Naveen |

ಕುರುಗೋಡು: ಸೊಳ್ಳೆಗಳ ಕಾಟ… ಜನ ಜಂಗುಳಿಯ ಜಂಜಾಟ…ವಾಸ್ತವ್ಯ ಹೂಡುವುದೇ ವರ್ಷ ಪೂರ್ತಿ ಪೀಕ ಲಾಟ… ಇದು ಪಟ್ಟಣ ಸಮೀಪದ ಮಣ್ಣೂರು-ಸೂಗೂರು ಗ್ರಾಮದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿಗಳ ನಿಲಯದ ದುಸ್ಥಿತಿ!

Advertisement

ಮಣ್ಣೂರು ಸೂಗೂರು ಗ್ರಾಮಕ್ಕೆ 2013-14ನೇ ಸಾಲಿನಲ್ಲಿ ಶಾಸಕರಾಗಿದ್ದ ಸೋಮಲಿಂಗಪ್ಪ ಅವರ ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗಗಳ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿಯೇ ವಸತಿ ನಿಲಯವನ್ನು ಮಂಜೂರು ಮಾಡಲಾಗಿತ್ತು. ಆದರೆ ವಸತಿನಿಲಯಕ್ಕೆ ಮೂಲ ಸೌಲಭ್ಯ ವಿಲ್ಲದೇ, ಸ್ವಂತ ಕಟ್ಟಡವಿಲ್ಲದೆ ಅಂದಿನಿಂದ ಇಂದಿನವರೆಗೂ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಈ ವಸತಿ ನಿಲಯದಲ್ಲಿ ಎ. ಸೂಗೂರು, ಮಣ್ಣೂರು, ನಡವಿ, ರುದ್ರಪಾದ, ಇಟಗಿ, ದೊಡ್ಡರಾಜ ಕ್ಯಾಂಪ್‌, ಎಮ್ಮಿಗನೂರು, ನೆಲ್ಲೂಡಿ, ಸಿರಿಗೇರಿ, ಮುದ್ದಟನೂರು, ಉಡೆಗೋಳ ಸೇರಿದಂತೆ ಇತರೆ ಹಳ್ಳಿಗಳ 5ನೇ ತರಗತಿಯಿಂದ 10ನೇ ತರಗತಿಯ 50 ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿದ್ದಾರೆ. ಇಲ್ಲಿ ಮಲಗಲು ಹಾಗೂ ಕಚೇರಿ ಕೆಲಸ ಹೊರತುಪಡಿಸಿ ಯಾವುದೇ ರೀತಿಯ ಮೂಲಭೂತ ಸೌಲಭ್ಯ ಕಾಣದೆ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

ಏನೇನು ಸಮಸ್ಯೆ?: ಸರಿಯಾದ ಶೌಚಾಲಯದ ವ್ಯವಸ್ಥೆ ಮತ್ತು ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯಕ್ಕೆ ಬಯಲು ಬಹಿರ್ದೆಸೆಯನ್ನೇ ಅವಲಂಬಿಸಬೇಕಾಗಿದೆ. ಬಟ್ಟೆ ಒಗೆದುಕೊಳ್ಳುವುದಕ್ಕೆ ಹಾಗೂ ಸ್ನಾನ ಮಾಡುವುದಕ್ಕೂ ಅನುಕೂಲತೆ ಇಲ್ಲದಾಗಿದೆ. ನೆಲದ ಮೇಲೆಯೇ ಮಲಗಬೇಕಾದ ಅನಿವಾರ್ಯತೆಯಿದೆ. ವಸತಿ ನಿಲಯದ ಮುಂಭಾಗದಲ್ಲಿ ಚರಂಡಿ ನೀರು ಹರಿಯುತ್ತಿದ್ದು ವಸತಿ ತುಂಬೆಲ್ಲಾ ಗಬ್ಬುನಾತ ಹೊಡೆಯುತ್ತದೆ. ಶಾಲೆ ಮುಗಿದ ನಂತರ ಆಟವಾಡುವುದಕ್ಕೆ ಮೈದಾನವಿಲ್ಲ ಎಂಬುದು ವಿದ್ಯಾರ್ಥಿಗಳ ಅಳಲು.

ರೋಗ ಉಲ್ಬಣ: ಶೌಚಾಲಯದ ಕೊರತೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಬಯಲು ಬಹಿರ್ದೆಸೆ ಮಾಡಿ ನಾನಾ ರೋಗಗಳಿಗೆ ತುತ್ತಾಗುವ ಸನ್ನಿವೇಶ ನಿರ್ಮಾಣವಾಗಿದೆ. ಕಲುಷಿತ ನೀರಿನಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿವೆ ಎನ್ನುತ್ತಾರೆ ವಿದ್ಯಾರ್ಥಿಗಳು. ಇನ್ನೂ ಗ್ರಾಮದ ಮುಖ್ಯ ರಸ್ತೆಬಳಿಯಲ್ಲಿ ವಸತಿ ನಿಲಯದ ಇರುವುದರಿಂದ ಹಗಲು-ರಾತ್ರಿ ತಿರುಗಾಡುವ ಜನಜಂಗುಳಿ ಮತ್ತು ವಾಹನ ಗಳ ಅರ್ಭಟಕ್ಕೆ ವಿದ್ಯಾರ್ಥಿಗಳು ತತ್ತರಿಸಿದ್ದಾರೆ. ಕಳೆದ ವರ್ಷ ವಿದ್ಯಾರ್ಥಿಗಳು ರಾತ್ರಿ ಊಟ ಮುಗಿಸಿ ಹೊರಗಡೆ ವಿಶ್ರಾಂತಿಗೆ ಬಂದಾಗ ವಿದ್ಯಾರ್ಥಿ ಕಾಲಿಗೆ ಹಾವು ಸುತ್ತುವರಿದು ಅಪಾಯದಿಂದ ಪಾರಾಗಿದ್ದಾನೆ. ಇನ್ನೊಮ್ಮೆ ಅಡುಗೆಯಲ್ಲಿ ಹಲ್ಲಿ ಬಿದ್ದು ವಿದ್ಯಾರ್ಥಿಗಳು ಅಸ್ವಸ್ಥರಾಗಿ ಅವರನ್ನು ರಾತ್ರೋರಾತ್ರಿ ವಿಮ್ಸ್‌ಗೆ ದಾಖಲಿಸಲಾಗಿತ್ತು ಎಂದು ವಿದ್ಯಾರ್ಥಿಗಳು ತಿಳಿಸಿದರು.

ದಿ. ಯಾಡ್ಡಿ ವೆಂಕೋಬಣ್ಣ ಶೆಟ್ಟಿ ಅವರ ಜಮೀನಿನಲ್ಲಿ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ಬಾಲಕರ ನೂತನ ವಿದ್ಯಾರ್ಥಿ ನಿಲಯವು ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು ಜನವರಿ 17ರಂದು ಉದ್ಘಾಟನೆಗೊಳ್ಳಬೇಕಾಗಿದ್ದು ರದ್ದಾಗಿದೆ. ಮುಂದಿನ ದಿನಾಂಕ ಗೊತ್ತುಪಡಿಸದ್ದರಿಂದ ವಿದ್ಯಾರ್ಥಿಗಳು ಚಿಂತೆಗೀಡಾಗಿದ್ದಾರೆ.

Advertisement

ಈಗಾಗಲೇ ಮಣ್ಣೂರು ಸೂಗೂರು ಗ್ರಾಮದಲ್ಲಿ ನಿರ್ಮಾಣಗೊಂಡಿರುವ ಡಿ.ದೇವರಾಜ ಅರಸು ವಸತಿ ನಿಲಯದ ಕಟ್ಟಡ ಉದ್ಘಾಟನೆ ಆಗಬೇಕಿತ್ತು. ಸಿರುಗುಪ್ಪದಲ್ಲಿ ನಗರಸಭೆ ಚುನಾವಣೆ ನಡೆಯುತ್ತಿರುವುದರಿಂದ ತಡೆಹಿಡಿಯಲಾಗಿದೆ. ಚುನಾವಣೆ ಮುಗಿದ ನಂತರ ಉದ್ಘಾಟನೆಗೆ ಒಂದು ಸಮಯ ನಿಗದಿ
ಮಾಡಿ ಕೂಡಲೇ ಉದ್ಘಾಟನೆ ಮಾಡುವ ವ್ಯವಸ್ಥೆ ಮಾಡುತ್ತೇನೆ.
ಎಂ.ಎಸ್‌.ಸೋಮಲಿಂಗಪ್ಪ, ಶಾಸಕ

ಹಾಸ್ಟಲ್‌ಗೆ ಸ್ವಂತ ಕಟ್ಟಡವಿಲ್ಲದ ಕಾರಣ ಬಾಡಿಗೆ ರೂಂನಲ್ಲಿದ್ದೇವೆ. ಮೂಲಭೂತ ಸಮಸ್ಯೆಗಳ ಕೊರತೆ ಇರುವುದರಿಂದ ಎಲ್ಲ ಅನಾನುಕೂಲವಾಗಿದೆ. ಗ್ರಾಮದ ಹೊರಗಡೆ ಕಟ್ಟಿರುವ ಹೊಸ ಕಟ್ಟಡ ಉದ್ಘಾಟನೆಯಾದರೆ ಎಲ್ಲ ಮಕ್ಕಳಿಗೆ ಅನುಕೂಲವಾಗಲಿದೆ.
ವಸತಿ ನಿಲಯದ ನೊಂದ ವಿದ್ಯಾರ್ಥಿ

„ಸುಧಾಕರ್‌ ಮಣ್ಣೂರು

Advertisement

Udayavani is now on Telegram. Click here to join our channel and stay updated with the latest news.

Next