Advertisement

ಈ ಶಾಲೆಗೆ ಮೂಲ ಸೌಕರ್ಯವೇ ಮರೀಚಿಕೆ

11:42 AM Jul 15, 2019 | Naveen |

ಸುಧಾಕರ್‌ ಮಣ್ಣೂರು
ಕುರುಗೋಡು:
ತಾಲೂಕು ಸಮೀಪದ ಶಾನವಾಸಪುರ ಗ್ರಾಮದ ದಲಿತ ಕಾಲೋನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಣಮಟ್ಟದ ಶಿಕ್ಷಣ ಮತ್ತು ಮೂಲ ಸೌಲಭ್ಯ ಹಾಗೂ ಶಿಕ್ಷಕರ ಕೊರತೆ ಬಾಧಿಸುತ್ತಿದೆ.

Advertisement

ಮೂಲ ಸೌಕರ್ಯಗಳಿಂದ ವಂಚಿತಗೊಂಡಿರುವ ಈ ಶಾಲೆಯ ಕಟ್ಟಡ ಹಿಂದೆ ನಿರ್ಮಿಸಲಾಗಿದ್ದು, 2 ಕ್ಲಾಸ್‌ ರೂಂ, 1 ಚಿಕ್ಕ ಮುಖ್ಯಗುರುಗಳ ಕೊಠಡಿ ಹೊಂದಿದೆ. ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಸಂಖ್ಯೆ 73 ಇದ್ದು, ಇಬ್ಬರು ಶಿಕ್ಷಕರು ಇದ್ದಾರೆ.

2 ಶಿಕ್ಷಕರಲ್ಲಿ 1 ಮುಖ್ಯ ಶಿಕ್ಷಕಿ 1 ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಒಬ್ಬರು ರಜೆ ಮೇಲೆ ಹೋದರೆ ಒಬ್ಬರೇ ಮಕ್ಕಳನ್ನು ನೋಡಿಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗದಾಗಿದ್ದು ಹೆಚ್ಚುವರಿ ಶಿಕ್ಷಕರ ನೇಮಕದ ನೀರಿಕ್ಷೆಯಲ್ಲಿ ವಿದ್ಯಾರ್ಥಿಗಳು ಕಾಯುತ್ತಿದ್ದಾರೆ.

ಸರಿಯಾದ ಶೌಚಾಲಯ ಇಲ್ಲ: ಶಾಲೆ ವಿದ್ಯಾರ್ಥಿಗಳಿಗೆ ಸರಿಯಾದ ಶೌಚಾಲಯ ಇಲ್ಲದೆ ಪಾಳುಬಿದ್ದ ಕೊಠಡಿಯಲ್ಲಿ ಶೌಚ ಮಾಡಬೇಕಾಗಿದೆ. ಇನ್ನೂ ಹಲವು ವಿದ್ಯಾರ್ಥಿಗಳು ಬಯಲು ಜಾಗವನ್ನು ಬಳಸಬೇಕಾದ ಅನಿವಾರ್ಯತೆ ಉಂಟಾಗಿದೆ. ಸರಕಾರ ಸ್ವಚ್ಛತೆ ಬಗ್ಗೆ ನಾನಾ ರೀತಿ ಜಾಗೃತಿ ಮೂಡಿಸುತ್ತಿದ್ದು, ಇದು ಬರೆ ಹೆಸರಿಗೆ ಮಾತ್ರವಾಗಿದೆ. ಸರಕಾರಿ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದ್ದು ಇದರಿಂದ ಅಸ್ವಚ್ಛತೆ ವಾತಾವರಣದಿಂದ ನಾನಾ ರೋಗಕ್ಕೆ ತುತ್ತಾಗುವಂತಾಗಿದೆ.

ಕುಡಿಯುವ ನೀರಿಲ್ಲ: ಶಾಲೆಯಲ್ಲಿ ಕುಡಿಯುವ ನೀರಿಲ್ಲ. ಶಾಲೆ ಮುಂದುಗಡೆ ಇದ್ದ ಮಿನಿ ನೀರಿನ ಟ್ಯಾಂಕರ್‌ಗೆ ಈ ಹಿಂದೆ ಖಾಸಗಿ ವಾಹನಗಳು ಡಿಕ್ಕಿ ಹೊಡೆದಿದ್ದು ಮುರಿದು ಬಿದ್ದಿದೆ. ಅಲ್ಲಿಂದ ಇಲ್ಲಿಯವರೆಗೂ ಇನ್ನೂ ಶಾಲೆಗೆ ಸರಿಯಾದ ನೀರಿನ ವ್ಯವಸ್ಥೆ ಮಾಡಿಲ್ಲ. ಈ ಸಮಸ್ಯೆಯಿಂದ ವಿದ್ಯಾರ್ಥಿಗಳು ಬೋರ್‌ವೆಲ್ ನೀರು ಸೇವಿಸುತ್ತಿದ್ದು ಜತೆಗೆ ಅಡಿಗೆ ಸಹಾಯಕರು ಕೂಡ ವಿದ್ಯಾರ್ಥಿಗಳ ಬಿಸಿ ಊಟಕ್ಕೂ ಬೋರ್‌ವೆಲ್ ನೀರು ಬಳಸುತ್ತಿದ್ದಾರೆ.

Advertisement

ಶಾಲೆ ಮುಂಭಾಗ ತಡೆಗೋಡೆ ಮರೀಚಿಕೆ: ಶಾಲೆ ಮುಂಭಾಗದಲ್ಲಿ ಸರಿಯಾಗಿ ತಡೆಗೋಡೆ ಮತ್ತು ಗೇಟ್ ವ್ಯವಸ್ಥೆ ಇಲ್ಲದ ಕಾರಣ ಅವರಣವು ಸ್ವಚ್ಛತೆಯಿಂದ ಮರೀಚಿಕೆಯಾಗಿದೆ. ಇದಲ್ಲದೆ ಶಾಲೆಯ ಸುತ್ತಮುತ್ತ ಹಲವಾರು ಕುಟುಂಬಗಳು ವಾಸಿಸುತ್ತಿದ್ದು ಕಸ ಹಾಕುವುದಕ್ಕೆ ಅವರಿಗೆ ಆಶ್ರಯವಾಗಿದೆ. ಇನ್ನೂ ಜಾನುವಾರುಗಳ ಸಗಣಿ ಗೊಬ್ಬರವನ್ನು ಕೂಡ ಶಾಲೆಯ ಸುತ್ತಮುತ್ತ ಹಾಕಿ ತಿಪ್ಪೆಯ ಗುಂಡಿಯಂತೆ ಮಾಡಿದ್ದಾರೆ. ಶಾಲೆಗೆ ಗೇಟ್ ವ್ಯವಸ್ಥೆ ಇಲ್ಲದಿದ್ದರಿಂದ ಸಂಜೆ ವೇಳೆ ಕೀಡಿಗೇಡಿಗಳು ಶಾಲೆ ಒಳಗಡೆ ನುಗ್ಗಿ ಗಬ್ಬು ಎಬ್ಬಿಸುತ್ತಿದ್ದಾರೆ. ಇದರಿಂದ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆಯುವ ಮಕ್ಕಳಿಗೆ ಉತ್ತಮ ವಾತಾವರಣ ಇಲ್ಲದಾಗಿದೆ. ಗ್ರಾಪಂ ಸಭೆಗಳಲ್ಲಿ ಶಾಲೆಗೆ ಮೂಲ ಸೌಕರ್ಯ ಒದಗಿಸುವಂತೆ ನಾನಾ ಶಿಕ್ಷಕರು ಮನವಿ ಸಲ್ಲಿಸಿದ್ದರೂ ಪ್ರಯೋಜನ ಅಗದೆ ಮತ್ತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಲೆ ಕಡೆಗೆ ಬಂದು ಸಮಸ್ಯೆಗಳು ಅಲಿಸಲು ಮುಂದಾಗಿಲ್ಲ. ಇನ್ನೂ ಶಾಲೆಯ ಮುಂಭಾಗ ದೇವಸ್ಥಾನವಿದ್ದು ಅದರಲ್ಲಿ ಜನರು ಮಧ್ಯಾಹ್ನ ಇಸ್ಪೀಟ್ ಆಟವಾಡುತ್ತಿದ್ದಾರೆ ಇದರಿಂದ ಮಕ್ಕಳಿಗೆ ಬೋಧನೆ ಮಾಡಲು ಸಮಸ್ಯೆಗಳು ಅಗುತ್ತಿವೆ.

ಅತಿಥಿ ಶಿಕ್ಷಕರ ವಿಳಂಬ: ಕಳೆದ ಸಾಲಿನಲ್ಲಿ ಶಿಕ್ಷಕರ ಕೊರತೆ ನಿವಾರಣೆಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಅದರೆ ಈ ಸಾಲಿನಲ್ಲಿ ಕೊರತೆ ನಿವಾರಣೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳು ಉಪ ನಿರ್ದೇಶಕರ ಕಚೇರಿ ಆದೇಶ ಕಾಯುವಂತಾಗಿದೆ. ಶಿಕ್ಷಕರ ಕೊರತೆ ನಿವಾರಿಸುವ ಮೂಲಕ ಕಲಿಕೆ ವೇಗ ಹೆಚ್ಚಿಸುವತ್ತ ಇಲಾಖೆ ಎಡವಿದೆ. ಇದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾದ ಮೇಲೆ ಪರಿಣಾಮ ಬೀರಲಿದೆ.

ಈಗಾಗಲೇ ಶಾಲೆಯಲ್ಲಿ ಒಬ್ಬರೇ ಶಿಕ್ಷಕರು ಇದ್ದು ಶಿಕ್ಷಕರ ಕೊರತೆ ಕಾಡುತ್ತಿದೆ. ಆದ್ದರಿಂದ ಹೆಚ್ಚುವರಿ ಇನ್ನೊಬ್ಬ ಶಿಕ್ಷಕರನ್ನು ನಿಯೋಜನೆ ಮೇಲೆ ಕಳಿಸಿಕೊಡಲಾಗಿದೆ. ಆದರೂ ಇನ್ನೂ ಸಮಸ್ಯೆ ಅಗುತ್ತಿದೆ. ಶೀಘ್ರದಲ್ಲಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಕೊಡಲಾಗುವುದು.
ಪಿ.ಡಿ. ಭಜಂತ್ರಿ, ಬಿಇಒ

ಶಾಲೆಗೆ ಸರಿಯಾಗಿ ಕಂಪೌಂಡ್‌ ವ್ಯವಸ್ಥೆ ಇಲ್ಲದ ಕಾರಣ ಸ್ವಚ್ಛತೆ ಕಾಪಾಡುವುದು ಕಷ್ಟವಾಗಿದೆ. ಸುತ್ತಮುತ್ತ ಜನರು ಕಸ ಕಡ್ಡಿಗಳನ್ನು ತಂದು ಶಾಲೆ ಆವರಣದಲ್ಲಿ ಹಾಕುತ್ತಿದ್ದಾರೆ. ಶಾಲೆಗೆ ಕಂಪೌಂಡ ವ್ಯವಸ್ಥೆ ಅದರೆ ಸಮಸ್ಯೆಗಳು ನಿವಾರಣೆಯಾಗುತ್ತವೆ. ಇದರ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ತಿಳಿಸಿದರೂ ಪ್ರಯೋಜನೆ ಅಗಿಲ್ಲ.
ಆಶಾ. ಬಿ, ಶಾಲೆ ಮುಖ್ಯಗುರುಗಳು

Advertisement

Udayavani is now on Telegram. Click here to join our channel and stay updated with the latest news.

Next