ಕುರುಗೋಡು: ಸಮೀಪದ ಮಣ್ಣೂರು ಗ್ರಾಮದಲ್ಲಿ ಅಂಬೇಡ್ಕರ್ ಅನುಯಾಯಿಗಳು ಅಂಬೇಡ್ಕರ್ ಅವರ ಪರಿನಿರ್ವಾಹಣ ದಿನಾಚರಣೆಯನ್ನು ಆಚರಿಸಿದರು.
ಅಂಬೇಡ್ಕರ್ ಭಾವ ಚಿತ್ರಕ್ಕೆ ಹಾರ ಹಾಕಿ ಪೂಜೆ ಸಲ್ಲಿಸಿದರು.
ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಜನರಿಗೆ ತಿಳಿ ಹೇಳಿದರು. ಅಂಬೇಡ್ಕರ್ ಅನುಯಾಯಿ ಟಿ. ಮುದಿಯಪ್ಪ ನಾಯಕ ಮಾತನಾಡಿ, ಅಂಬೇಡ್ಕರ್ ಎಂದರೆ ಬರೀ ವ್ಯಕ್ತಿಯಲ್ಲ. ಅವರು ಮಹಾನ್ ಶಕ್ತಿ. ಧ್ಯೇಯ, ತತ್ವವೇ ಅಂಬೇಡ್ಕರ್ ಆಗಿದ್ದಾರೆ. ದೇಶದ ಅಖಂಡತೆಗೆ ಅವರ ಸೇವೆ ಅನನ್ಯವಾದುದು. ಅವರನ್ನು ಕೇವಲ ಶೋಷಿತ ವರ್ಗದ ನಾಯಕರು ಎಂದು ಭಾವಿಸುವಂತಿಲ್ಲ. ಅವರು ಸಮಾಜದ ಎಲ್ಲ ವರ್ಗಗಳ ನಾಯಕರಾಗಿದ್ದಾರೆ ಎಂದು ಹೇಳಿದರು.
ಅಂಬೇಡ್ಕರ್ ಅವರು ಸಂಘರ್ಷದ ಹಾದಿ ತುಳಿಯದೆ ಸಾಮರಸ್ಯದ ಮೂಲಕ ಸಮಾಜವು ಒಗ್ಗೂಡುವಂತೆ ಮಾಡಿದ್ದಾರೆ. ಅವರ ವ್ಯಕ್ತಿತ್ವ, ಆದರ್ಶಗಳನ್ನು ಪಾಲನೆ ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕಿದೆ ಎಂದರು.
ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಹಕ್ಕು ಮತ್ತು ಜವಾಬ್ದಾರಿ ನೀಡಲಾಗಿದೆ. ನಾಗರಿಕರ ಹಕ್ಕುಗಳನ್ನು ಪ್ರತಿಪಾದಿಸುವುದರ ಜತೆಗೆ ಗುರುತರ ಜವಾಬ್ದಾರಿ ನಿರ್ವಹಿಸಬೇಕಿದೆ. ಯುವಜನರು ಸಂವಿಧಾನದ ಆಶಯಗಳನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಹನುಮಂತ ಮಾತನಾಡಿ ಮಾತನಾಡಿ, ‘ಅಂಬೇಡ್ಕರ್ ಅವರ ಹೆಸರು ಹೇಳುವುದೇ ರೋಮಾಂಚನ ಉಂಟು ಮಾಡುತ್ತದೆ. ಸಮಾನತೆ ದೃಷ್ಟಿಯಲ್ಲಿ ಸಂವಿಧಾನ ರಚಿಸಿದ ಮಹಾನ್ ಚೇತನ. ನಾವೆಲ್ಲರೂ ಜೀವನದಲ್ಲಿ ಅವರ ಚಿಂತನೆ ಅಳವಡಿಸಿಕೊಳ್ಳಬೇಕಿದೆ’ ಎಂದರು.
ಈ ಸಂದರ್ಭದಲ್ಲಿ ನಾಗರಾಜ ಸಂಚಿ,ವಿರೇಶ, ಮಾರುತಿ, ವಸಂತ, ಅಂಬರೇಶ್, ವೆಂಕಟೇಶ್,ಕಾರ್ತಿಕ್, ವಾಸು, ಸೇರಿ ಇತರರು ಇದ್ದರು.