ಕುರುಗೋಡು: ಮಕ್ಕಳಿಗೆ ಶಿಕ್ಷಣ, ಕುಟುಂಬ ನಿರ್ವಹಣೆ ಹಾಗೂ ವಿದ್ಯುತ್ ಬಿಲ್, ನೀರಿನ ತೆರಿಗೆ ಕಟ್ಟಲು ಆಗದೆ ಪರದಾಟ. ಇದು ಇಲ್ಲಿಯ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರ ನಿತ್ಯದ ಗೋಳು.
ಕುರುಗೋಡು ಗ್ರಾಪಂನಿಂದ ಪುರಸಭೆಗೆ ಮೇಲ್ದರ್ಜೆಗೊಂಡರು ಅದರಲ್ಲಿ ಸುಮಾರು ವರ್ಷಗಳಿಂದ 11 ದಿನ ಕೂಲಿ ನೌಕರರು ಕಾರ್ಯನಿರ್ವಹಿಸುತ್ತಾ ಬರುತ್ತಿದ್ದಾರೆ. ಗ್ರಾಪಂನಿಂದ ಹಿಡಿದು ಪುರಸಭೆ ಆಡಳಿತದ ಪ್ರಾರಂಭದಲ್ಲಿ ದಿನ ಕೂಲಿ ನೌಕರರಿಗೆ ಸುಮಾರು 3 ವರ್ಷ ಸರಿಯಾಗಿ ತಿಂಗಳ ವೇತನ ನೀಡಿದ್ದಾರೆ.
ಅದರೆ ಸದ್ಯ ಕರ ವಸೂಲಿಗಾರರು 2, ಕಂಪ್ಯೂಟರ್ ಆಪರೇಟರ್ 2, ವಾಲ್ ಮೇನ್ 3, ವಾಹನ ಚಾಲಕ 1, ಜವಾನ್ 1, ಅಟೆಂಡರ್ 1, ನೈರ್ಮಲ್ಯ ಗುಮಾಸ್ತ 1 ಸೇರಿ ಒಟ್ಟು 11 ಜನ ದಿನ ಕೂಲಿ ನೌಕರರಿಗೆ ಸುಮಾರು 19 ತಿಂಗಳಿಂದ ವೇತನ ಸಿಕ್ಕಿಲ್ಲ.
ಇದರಲ್ಲಿ ಕೆಲವು ನೌಕರರು ಸ್ಥಳೀಯರಾಗಿದ್ದು. ಇನ್ನೂ ಹಲವು ನೌಕರರು ಬೇರೆ ಕಡೆಯಿಂದ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. 19 ತಿಂಗಳಿಂದ ವೇತನ ಪಡೆಯದ ನೌಕರರು ಇದರ ಬಗ್ಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ವೇತನ ನೀಡುವಂತೆ ಮನವಿ ಸಲ್ಲಿಸಿ ನೋಟಿಸ್ ಜಾರಿ ಮಾಡಿದ್ದಾರೆ. ವೇತನ ಬಿಡುಗಡೆ ಮಾಡಿ ಇಲ್ಲವೇ ಸಂಸತ್ ಚುನಾವಣೆಯಲ್ಲಿ ಮತ ಹಾಕುವುದಿಲ್ಲ ಎಂದು ನೌಕರರು ಕುಟುಂಬದ ಸದಸ್ಯರೊಂದಿಗೆ ಎಚ್ಚರಿಕೆ ನೀಡಿದ್ದರು. ಪುರಸಭೆ ಅಧಿಕಾರಿ ಭರವಸೆಯಿಂದ ಮತದಾನ ಬಹಿಷ್ಕಾರ ಹಿಂಪಡೆದಿದ್ದರು. ಆದರೂ ಇನ್ನೂ ಅವರಿಗೆ ವೇತನ ಪಡೆಯದೆ ನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ವೇತನ ಸಿಗದ ಪರಿಣಾಮದಿಂದ ದಿನ ಕೂಲಿ ನೌಕರರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಹಾಗೂ ಕುಟುಂಬ ನಿರ್ವಹಣೆ ಮಾಡಲು ಪರಿತಪಿಸುತ್ತಿದ್ದಾರೆ. ಅಲ್ಲದೆ ತಿಂಗಳ ವೇತನದ ಮೇಲೆ ಜೀವನ ನಡೆಸುವ 11 ಕುಟುಂಬಗಳು ಅಲ್ಲಲ್ಲಿ ತಿಂಗಳ ಚೀಟಿ ಸೇರಿದಂತೆ ವಿವಿಧ ಸಾಲ ಮಾಡಿಕೊಂಡು ಜೀವನ ನಡೆಸಲು ಅನಿವಾರ್ಯತೆ ಅವರನ್ನು ಕಾಡುತ್ತಿದೆ. ಇಷ್ಟೆಲ್ಲ ಸಮಸ್ಯೆ ಎದುರಿಸುವ ದಿನ ಕೂಲಿ ನೌಕರರಿಗೆ ಸಂಬಂಧಿಸಿದ ಅಧಿಕಾರಿಗಳು ಕೂಡಲೇ ವೇತನ ನೀಡಬೇಕಿದೆ.