Advertisement

ಮೂಲ ಸೌಲಭ್ಯವಿಲ್ಲ : ಗೋಳು ಕೇಳ್ಳೋರಿಲ್ಲ !

12:23 PM Nov 29, 2019 | |

„ಸುಧಾಕರ್‌ ಮಣ್ಣೂರು
ಕುರುಗೋಡು:
ಕುಡಿಯಲು ಶುದ್ಧ ನೀರಿಲ್ಲ. ರಸ್ತೆ, ಚರಂಡಿಗಳು, ಬೀದಿದೀಪಗಳು ಇಲ್ಲ. ಪ್ರಮುಖವಾಗಿ ಗ್ರಾಮದಲ್ಲಿ ರುದ್ರಭೂಮಿಯಿಲ್ಲ. ವಾಸಿಸುವ ಮನೆಗಳಿಗೆ ಪಟ್ಟಾ ಇಲ್ಲದೆ ಎಮ್ಮಿಗನೂರು ಗ್ರಾಪಂ ವ್ಯಾಪ್ತಿಯ ಮಾರೆಮ್ಮ ಕ್ಯಾಂಪ್‌ ನಿವಾಸಿಗಳು ಪರಿತಪಿಸುತ್ತಿದ್ದಾರೆ.

Advertisement

ಹೌದು ಮಾರೆಮ್ಮ ಕ್ಯಾಂಪ್‌ನಲ್ಲಿ ಸುಮಾರು 50 ವರ್ಷಗಳಿಂದ 23 ದಲಿತ ಕುಟುಂಬಗಳು ವಾಸತೊಡಗಿಕೊಂಡು ಬಂದಿವೆ. ಅದರೆ ಕ್ಯಾಂಪ್‌ ಮೂಲ ಭೂತ ಸೌಕರ್ಯಗಳು ಕಾಣದೆ ಮೂಲೆ ಗುಂಪಾಗಿದೆ. ಗ್ರಾಮದಲ್ಲಿ ಶಾಲೆ ಇಲ್ಲದೇ ಮಕ್ಕಳು ವಿದ್ಯಾಭ್ಯಾಸದಿಂದ ದೂರ ಉಳಿದಿದ್ದಾರೆ. ಇನ್ನೂ ಅಂಗನವಾಡಿ ಕೇಂದ್ರ ದೂರದ ಬ್ರಾಹ್ಮಣ ಕ್ಯಾಂಪ್‌ ನಲ್ಲಿರುವುದರಿಂದ ಚಿಕ್ಕ ಮಕ್ಕಳು ಕೂಡ ಅಂಗನವಾಡಿ ಕೇಂದ್ರಗಳಿಗೆ ಹೋಗುವುದು ಕಡಿಮೆಯಾಗಿದೆ.

ಕ್ಯಾಂಪ್‌ನಲ್ಲಿರುವ ಮನೆಗಳ ಸುತ್ತಮುತ್ತ ಭತ್ತದ ಗದ್ದೆಗಳು ಇದ್ದು ಬೀದಿ ದೀಪಗಳು ಮತ್ತು ವಿದ್ಯುತ್‌ ಸಮಸ್ಯೆ ಕೊರತೆ ಬಹಳವಿದ್ದು ರಾತ್ರಿ ಸಮಯದಲ್ಲಿ ಜನರು ಒಡಾಡುವುದು ಕಷ್ಟಕರವಾಗಿದೆ.

ನೀರಿಗಾಗಿ ಪರದಾಟ: ಮಾರೆಮ್ಮ ಕ್ಯಾಂಪ್‌ನಲ್ಲಿ ಸರಿಯಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಎಮ್ಮಿಗನೂರು ಗ್ರಾಮದಿಂದ ಪೈಪ್‌ ಲೈನ್‌ ಸಂಪರ್ಕ ಕ್ಯಾಂಪ್‌ಗೆ ಜೋಡಣೆಗೊಂಡಿದ್ದು ಪೈಪ್‌ಗ್ಳು ಜಖಂಗೊಂಡು ಅದರಲ್ಲಿ ಕಲುಷಿತ ನೀರು ಮಿಶ್ರಣಗೊಳ್ಳುತ್ತಿರುವುದರಿಂದ ನೀರಿನ ಸಂಪರ್ಕ ಕಡಿತಗೊಂಡಿದೆ. ಇದರ ಪರಿಣಾಮ ಕ್ಯಾಂಪ್‌ನ ನಿವಾಸಿಗಳು ನಿತ್ಯ ನೀರಿಗಾಗಿ ಪರಿತಪ್ಪಿಸುತ್ತಿದ್ದಾರೆ.

ಶವ ಸಂಸ್ಕಾರಕ್ಕೆ ಪರದಾಟ: ಬಹಳ ವರ್ಷಗಳಿಂದ ರುದ್ರಭೂಮಿ ಇಲ್ಲದಾಗಿದೆ. ಯಾರಾದ್ರೂ ಕ್ಯಾಂಪ್‌ ನಲ್ಲಿ ಸಾವನ್ನಪ್ಪಿದರೆ ಕಾಲುವೆಗಳ ಪಕ್ಕದ ಜಂಗಲ್‌ ನಲ್ಲಿ ಶವಗಳನ್ನು ಅಂತ್ಯಕ್ರಿಯೆ ಮಾಡಬೇಕಾಗಿದೆ. ರುದ್ರಭೂಮಿ ಸಮಸ್ಯೆಯಿರುವುದರಿಂದ ಕ್ಯಾಂಪ್‌ನ ಜನರು ಕಾಲುವೆಗಳ ಪಕ್ಕದಲ್ಲಿ ಶವಗಳ ಅಂತ್ಯಕ್ರಿಯೆ ಮಾಡುತ್ತಿದ್ದು ಇತ್ತೀಚೆಗೆ ಕಾಲುವೆ ಭಾಗದ ರೈತರು ಅದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದರಿಂದ ಕ್ಯಾಂಪ್‌ನ ಜನರಿಗೆ ಶವಗಳ ಅಂತ್ಯಕ್ರಿಯೆಗೆ ಸ್ಥಳವಿಲ್ಲದಂತಾಗಿದೆ.

Advertisement

ಪಟ್ಟಕ್ಕಾಗಿ ಬೇಸತ್ತ ಜನರು: 1.50 ಎಕರೆ ಜಮೀನನ್ನು ರಂಗರಾಜ್‌ ಎಂಬ ವ್ಯಕ್ತಿ ಮಾರೆಮ್ಮ ಕ್ಯಾಂಪ್‌ನ ನಿವಾಸಿಗಳಿಗೆ ವಾಸಮಾಡಲು ದಾನ ನೀಡಿದ್ದಾರೆ. ಆದರೆ ಅಂದಿನಿಂದ ಇಂದಿನವರೆಗೂ ಸುಮಾರು 50 ವರ್ಷಗಳಿಂದ ಕ್ಯಾಂಪ್‌ನಲ್ಲಿ ವಾಸಿಸುತ್ತಿರುವ ಜನರಿಗೆ ಪಟ್ಟಾ ಸಿಗದಂತಾಗಿದೆ. ಇದರ ಬಗ್ಗೆ ಅನೇಕ ಬಾರಿ ಸ್ಥಳೀಯ ಗ್ರಾಪಂ ಇಲಾಖೆಗೆ ಮತ್ತು ಕ್ಷೇತ್ರದ ಶಾಸಕರಿಗೆ ಕ್ಯಾಂಪ್‌ನ ನಿವಾಸಿಗಳು ಪಟ್ಟಾ ನೀಡುವಂತೆ ಮನವಿ ಮಾಡಿದರೂ ಪ್ರಯೋಜನೆ ಅಗದಂತಾಗಿದೆ.

ಶಿಕ್ಷಣದಿಂದ ವಂಚಿತಗೊಂಡ ಮಕ್ಕಳು: ಕ್ಯಾಂಪ್‌ನಲ್ಲಿ ಅಂಗನವಾಡಿ ಕೇಂದ್ರ ಮತ್ತು ಸರಕಾರಿ ಶಾಲೆಗಳು ಇಲ್ಲದೆ ದೂರದ ಎಮ್ಮಿಗನೂರು ಗ್ರಾಮದಲ್ಲಿ ಸರಕಾರಿ ಪ್ರೌಢ ಶಾಲೆ ಮತ್ತು ಪಕ್ಕದ ಬ್ರಾಹ್ಮಣ ಕ್ಯಾಂಪ್‌ನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಕೇಂದ್ರ ಇರುವುದರಿಂದ ಕ್ಯಾಂಪ್‌ನಲ್ಲಿರುವ ಬಹತೇಕ ಮಕ್ಕಳು ಶಿಕ್ಷಣದಿಂದ ವಂಚಿತಗೊಂಡು ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾರೆ. ಇನ್ನೂ ಹಲವು ವಿದ್ಯಾರ್ಥಿಗಳು ಎಮ್ಮಿಗನೂರು ಗ್ರಾಮಕ್ಕೆ ಪ್ರೌಢಶಿಕ್ಷಣ ಪಡೆಯಲು ಹೋಗುತ್ತಿದ್ದು ಅ ಮಕ್ಕಳು ನಿತ್ಯ 3 ಕಿಮೀ ದೂರ ಕಾಲ್ನಡಿಗೆ ಮೂಲಕ ಸಾಗಿ ಶಿಕ್ಷಣ ಪಡೆಯಬೇಕಾಗಿದೆ. ಇದರ ಪರಿಣಾಮ ಕ್ಯಾಂಪ್‌ನಲ್ಲಿ ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರ ಇಲ್ಲದ ಕಾರಣ ಮಕ್ಕಳು ಶಿಕ್ಷಣದಿಂದ ದೂರ ಉಳಿದಿದ್ದಾರೆ.

ಸುಮಾರು ದಿನಗಳಿಂದ ಕ್ಯಾಂಪ್‌ನಲ್ಲಿ ವಾಸಿಸುತ್ತ ಬಂದಿದ್ದೇವೆ. ಅದರೆ ಯಾವುದೇ ಸವಲತ್ತುಗಳು ಇಲ್ಲ. ಅದರಲ್ಲಿ ಕುಡಿಯುವ ನೀರಿಲ್ಲ. ಮಕ್ಕಳಿಗೆ ಶಿಕ್ಷಣ ಕೊಡಿಸಲು ಶಾಲೆಗಳು ಇಲ್ಲ. ದೂರದ ಗ್ರಾಮಗಳಲ್ಲಿವೆ. ಪಟ್ಟಾಗಳು ಸಿಕ್ಕಿಲ್ಲ. ನಮ್ಮದೇ ಅಂತ ಹೇಳಿಕೊಳ್ಳಲು ಏನೂ ಇಲ್ಲದಂತಾಗಿದೆ.
ಮಾರೆಮ್ಮ

ಕ್ಯಾಂಪ್‌ನ ನಿವಾಸಿಗಳಿಗೆ ತಾತ್ಕಾಲಿಕವಾಗಿ ಜೀವನ ನಡೆಸಲು ಪಟ್ಟಾ ನೀಡುತ್ತಿಲ್ಲ. ಕುಡಿಯುವ ನೀರು, ಚರಂಡಿ ಸೇರಿದಂತೆ ಅನೇಕ ಸಮಸ್ಯೆಗಳು ತಾಂಡವವಾಡುತ್ತಿವೆ. ಕ್ಯಾಂಪ್‌ಗೆ ಬೇಕಾದ ಸೌಕರ್ಯಗಳನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೀಘ್ರವೇ ಒದಗಿಸಬೇಕು. ಇಲ್ಲವಾದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಬೇಕಾಗುತ್ತದೆ.
ಕೆಂಚಪ್ಪ,
 ಕ್ಯಾಂಪ್‌ನ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next