ಕುರುಗೋಡು: ಬಳ್ಳಾರಿ ಗಣಿಧಣಿಗಳ ಬಿಡಲ್ಲಿ ಏಕೈಕ ಕೈಗಾರಿಕ ಕಂಪನಿಗಳನ್ನುಹೊಂದಿರುವ ಕುಡುತಿನಿ ಗ್ರಾಮ ಪಟ್ಟಣ ಪಂಚಾಯಿತಿಗೆ ಆಯ್ಕೆಗೊಂಡು 10 ತಿಂಗಳ ಕಳೆದರೂ ಪಟ್ಟಣಕ್ಕೆ ಮೂಲಸೌಕರ್ಯ ಒದಗಿಸುವಲ್ಲಿ ಮಾತ್ರ ಇನ್ನೂ ಮುಂದಾಗಿಲ್ಲ.
ಹೌದು. ಪಟ್ಟಣದಲ್ಲಿ 19 ವಾರ್ಡ್‌ಗಳು ಇದ್ದು 25 ಸಾವಿರ ಜನಸಂಖ್ಯೆ ಹೊಂದಿದೆ. ಆದರೆ ಹಳೆ ಚರಂಡಿಗಳು, ರಸ್ತೆಗಳು, ಸೇತುವೆಗಳು. ಕೆಲ ಸರಕಾರಿ ಕಚೇರಿಗಳು ಮತ್ತು ಬೀದಿ ದೀಪ, ಕುಡಿಯುವ ನೀರಿನ ಸಮಸ್ಯೆ. ಆರೋಗ್ಯ ಸೇರಿದಂತೆ ಇತರೆ ನಾನಾ ಅಭಿವೃದ್ಧಿ ಕಾಮಗಾರಿಗಳು ದುರಸ್ತಿಗೆ ಕಾಯುತ್ತಿದ್ದರೂ ಅವುಗಳಿಗೆ ಭಾಗ್ಯ ಸಿಗದಂತಾಗಿದೆ.
ಪಟ್ಟಣದ ಕುರುಗೋಡು ರಸ್ತೆಯ ವೃತ್ತದ ಹತ್ತಿರವಿರುವ ಆಂಜನೇಯ ದೇವಸ್ಥಾನದ ಪಕ್ಕದಲ್ಲಿ 1.4.11.19ನೇ ವಾರ್ಡ್‌ಗಳ ಮಧ್ಯದಲ್ಲಿ ಸುಮಾರು ಇಪ್ಪತ್ತು ವರ್ಷಗಳ ಹಿಂದೆ ನಿರ್ಮಾಣಗೊಂಡು ಹಾಯ್ದು ಹೋಗಿರುವ ಮುಖ್ಯ ರಸ್ತೆಯ ಸೇತುವೆಯು ಹೂಳಿನಿಂದ ತುಂಬಿ ಹೋಗಿದೆ, ಅದರಲ್ಲಿ ಜೋಡಣೆಗೊಂಡಿರುವ ಕಬ್ಬಿಣದ ಪೈಪುಗಳಲ್ಲಿಯೂ ಹೂಳು ತುಂಬಿದೆ. ಅಲ್ಲದೆ ಅದರಲ್ಲಿ ಅಕ್ಕಪಕ್ಕದ ಅಂಗಡಿ ಮಾಲೀಕರು ಕಸ ಕಡ್ಡಿಗಳನ್ನು ತಂದು ಹಾಕುತ್ತಿದ್ದು. ಇದರಿಂದ ಮಳೆ ಬಂದರೆ ಅದರ ಚರಂಡಿಯಿಂದ ಬರುವ ನೀರು ಮುಂದುಗಡೆ ಸಾಗದೆ ಅಲ್ಲೆ ಸಂಗ್ರಹಗೊಂಡು ಪಕ್ಕದ ದೇವಸ್ಥಾನದ ಒಳಗಡೆ ಮತ್ತು ರಸ್ತೆಯ ಮೇಲೆ ಹರಿದು ಕೆಟ್ಟ ವಾಸನೆ ಬೀರುತ್ತದೆ.
ಹಂದಿಗಳ ಹಾವಳಿ-ನೀರಿಗೆ ಹಾಹಾಕಾರ: ವಾರ್ಡ್ ಗಳಲ್ಲಿರುವ ಚರಂಡಿಗಳು ಮತ್ತು ಮುಖ್ಯ ರಸ್ತೆ ಬದಿಯಲ್ಲಿರುವ ಚರಂಡಿಗಳು ಸ್ವಚ್ಛತೆ ಕಾಣದೆ ಹೂಳಿನಿಂದ ತುಂಬಿದ್ದು ಅದರಲ್ಲಿ ಹಂದಿಗಳು ನಿತ್ಯ ಒಡಾಡಿ ಇನ್ನಷ್ಟು ಮಲೀನ ವಾತಾವರಣ ನಿರ್ಮಾಣಮಾಡಿವೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನಿತ್ಯ ಖಾಸಗಿ ಘಟಕಗಳಿಗೆ ತೆರಳಿ ನೀರು ತರಬೇಕಾದ ಅನಿವಾರ್ಯತೆ ಸಾರ್ವಜನಿಕರದ್ದು. 6ರಿಂದ 7 ಶುದ್ಧ ಘಟಕಗಳು ಇದ್ದು ಅದರಲ್ಲಿ ಕೆಲವೊಂದು ಉಪಯೋಗಕ್ಕೆ ಬಾರದಂತಾಗಿವೆ. ಇನ್ನೂ ಹಲವು ಘಟಕಗಳು ಚಾಲ್ತಿಯಲ್ಲಿ ದ್ದರೂ ಉಪಯೋಗಕ್ಕೆ ಬಾರದಂತಾಗಿವೆ.
ಅಧ್ಯಕ್ಷ ಸ್ಥಾನ ವಿಳಂಬ: ಬೂದಿ ಸಾಗಣೆ ಸಮಸ್ಯೆ: ಕುಡುತಿನಿ ಪಪಂ ಚುನಾವಣೆ ನಡೆದು 10 ತಿಂಗಳು ಕಳೆದರೂ ಮೀಸಲಾತಿ ಸಮಸ್ಯೆಯಿಂದ ಕೊರ್ಟ್ ಮೊರೆ ಹೋಗಿದ್ದು ಅಧ್ಯಕ್ಷ ಸ್ಥಾನವು ವಿಳಂಬವಾಗಿದೆ. ಇದರಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ ಕೊಕ್ಕೆ ಬಿದ್ದಂತಾಗಿದೆ. ಪಪಂ ಸದಸ್ಯರುಗಳಿಗೆ ಕೂಡ ಅಭಿವೃದ್ಧಿ ಕಾರ್ಯಗಳಿಗೆ ನಾಂದಿ ಹಾಡಲು ಹಿಂದೇಟು ಹಾಕುವಂತಾಗಿದೆ. ಕುಡತಿನಿ ಕೆಪಿಟಿಸಿಎಲ್ ಕಂಪನಿಯಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತಿದ್ದು, ಅದಕ್ಕೆ ಬಳಸುವ ಕಬ್ಬಿಣದ ರಾಡ್‌ಗಳಿಂದ ಕಲ್ಲಿದ್ದಲು ಬೂದಿ ಹೊರಗಡೆ ಬರುತ್ತಿದ್ದು ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಬಿರುತ್ತಿವೆ. ಇವೆಲ್ಲ ಸಮಸ್ಯೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ, ಪಪಂ ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕುಡುತಿನಿ ಪಟ್ಟಣದ ಮುಖ್ಯ ರಸ್ತೆಯ ಸೇತುವೆ ಕೆಳಗೆ ಹೂಳಿನಿಂದ ತುಂಬಿದ್ದು, ಮಳೆ ಬಂದರೆ ಅಲ್ಲಿ ಸಂಗ್ರಹವಾದ ಹೊಲಸು ನೀರು ದೇವಸ್ಥಾನ ಮತ್ತು ರಸ್ತೆಗಳಿಗೆ ಹರಿಯುತ್ತದೆ. ಇದರತ್ತ ಅಧಿಕಾರಿಗಳು ತಕ್ಷಣ ಗಮನ ಹರಿಸಬೇಕು.
•
ಟಿ.ಕೆ. ಕಾಮೇಶ ವಕೀಲರು, ಕುಡುತಿನಿ
ಅಧ್ಯಕ್ಷರು ಇಲ್ಲದಿದ್ದರೂ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ-ಚರಂಡಿ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಒತ್ತು ನೀಡುತ್ತೀವಿ. ಇದಕ್ಕೆ ಸದಸ್ಯರು ಕೂಡ ಸಾಥ್ ನೀಡುತ್ತಿದ್ದಾರೆ. ಇನ್ನೂ ಜನರಿಂದ ಸಮಸ್ಯೆಗಳು ಸಂಗ್ರಹಿಸಿಕೊಂಡು ತಕ್ಷಣ ಬಗೆಹರಿಸುವ ಪ್ರಯತ್ನ ಮಾಡುತ್ತಿದ್ದೇವೆ.
•
ರಮೇಶ ಬಡಿಗೇರ್ ಕುಡಿತಿನಿ, ಪಪಂ ಅಧಿಕಾರಿ