Advertisement
ಇದು ಸಮೀಪದ ಗುಡುದೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ. ಶಾಲೆಯಲ್ಲಿ 203 ಮಕ್ಕಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ 1 ಅತಿಥಿ ಶಿಕ್ಷಕರು ಹಾಗೂ 6 ಕಾಯಂ ಶಿಕ್ಷಕರು ಪಾಠ ಮಾಡುತ್ತಿದ್ದಾರೆ. ಇನ್ನೂ 1 ರಿಂದ 5ನೇ ತರಗತಿ ಮಕ್ಕಳಿಗೆ ಗಣಿತ ವಿಷಯಕ್ಕೆ ಶಿಕ್ಷಕರಿಲ್ಲದಾಗಿದೆ. 6 ರಿಂದ 8ನೇ ತರಗತಿ ಮಕ್ಕಳಿಗೆ ದೈಹಿಕ ಶಿಕ್ಷಕರು ಮತ್ತು ಹಿಂದಿ ಶಿಕ್ಷಕರ ಹುದ್ದೆ ಖಾಲಿ ಉಳಿದುಕೊಂಡಿದೆ.
Related Articles
Advertisement
ಕುಡಿಯಲು ನೀರಿಲ್ಲ: ಶಾಲೆಯಲ್ಲಿ ಕುಡಿಯುವ ನೀರಿಲ್ಲದ ಪರಿಣಾಮ ವಿದ್ಯಾರ್ಥಿಗಳು ನಿತ್ಯ ನೀರಿನ ದಾಹ ತೀರಿಸಿಕೊಳ್ಳಲು ಕಷ್ಟಕರವಾಗಿದೆ. ಶಾಲೆ ಎದುರು ಮಿನಿ ನೀರಿನ ಟ್ಯಾಂಕರ್ ಇದ್ದು, ಅದು ನನೆಗುದಿಗೆ ಬಿದ್ದಿದೆ. ಇದರಿಂದ ಶಾಲೆಗೆ ಸರಿಯಾದ ನೀರಿನ ವ್ಯವಸ್ಥೆ ಇಲ್ಲದಾಗಿದೆ. ಈ ಸಮಸ್ಯೆಯಿಂದ ಹಲವು ವಿದ್ಯಾರ್ಥಿಗಳು ಬೋರ್‌ವೆಲ್ ನೀರು ಸೇವಿಸುತ್ತಿದ್ದು, ಇನ್ನು ಕೆಲವು ವಿದ್ಯಾರ್ಥಿಗಳು ಮನೆಯಿಂದ ಬಾಟಲ್‌ಗಳಲ್ಲಿ ನೀರು ತಂದು ಸೇವಿಸಬೇಕಾಗಿದೆ.
ತಡೆಗೋಡೆ ಇಲ್ಲ: ಶಾಲೆಯ ಮುಂಭಾಗದಲ್ಲಿ ಸರಿಯಾಗಿ ತಡೆಗೋಡೆಯ ವ್ಯವಸ್ಥೆ ಇಲ್ಲದಾಗಿದೆ. ಶಾಲೆಯ ಸುತ್ತಮುತ್ತ ಗಿಡಗಂಟೆಗಳು ಬೆಳದಿದ್ದು, ಇದರ ಪರಿಣಾಮ ಮಕ್ಕಳು ಆಟವಾಡುವ ಸಮಯದಲ್ಲಿ ಕ್ರಿಮಿಕೀಟಗಳು ವಿಷಜಂತುಗಳು ಆವರಿಸುವ ಸೂಚನೆಗಳು ಎದ್ದು ಕಾಣುತ್ತಿವೆ.
ಮಕ್ಕಳ ಸಂಖ್ಯೆ ಕುಂಠಿತ: ಶಾಲೆಗೆ ಸರಿಯಾದ ಸೌಕರ್ಯಗಳು ಇಲ್ಲದ ಕಾರಣ ಹಾಗೂ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗದಿರುವುದರಿಂದ ಗ್ರಾಮದ ಜನರು ತಮ್ಮ ಮಕ್ಕಳನ್ನು ಶಾಲೆಯಿಂದ ಬೇರೆ ಶಾಲೆಗೆ ಸೇರಿಸುತ್ತಿದ್ದು, ಪ್ರತಿ ವರ್ಷ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ.
ಶಾಲೆಗೆ ಸರಿಯಾಗಿ ಕಾಂಪೌಂಡ್ ವ್ಯವಸ್ಥೆ ಇಲ್ಲ. ಕಾಂಪೌಂಡ್ ಮಾಡಲು ಜಾಗ ಇಲ್ಲವಾಗಿದೆ. ಈ ಹಿಂದೆ ಸರಕಾರ ಶಾಲೆಗೆ ತಡೆಗೋಡೆ ನಿರ್ಮಾಣಕ್ಕೆ 10 ಲಕ್ಷ ಮಂಜೂರು ಮಾಡಲಾಗಿತ್ತು. ಖಾಸಗಿ ವ್ಯಕ್ತಿ ಹೆಸರಲ್ಲಿ ಜಾಗ ಇರುವುದರಿಂದ ತಡೆಗೋಡೆ ನಿರ್ಮಾಣಕ್ಕೆ ಅಡ್ಡಿಯಾಗಿದೆ. ಇದಲ್ಲದೆ ಮೇಲ್ಛಾವಣಿಗಳು ತುಂಬಾ ಶಿಥಿಲಾವಸ್ಥೆಗೆ ತಲುಪಿವೆ. ಇದರಿಂದ ಸಮಸ್ಯೆಗಳು ಉಂಟಾಗುತ್ತಿವೆ. ಇದರ ಬಗ್ಗೆ ಹಲವು ಬಾರಿ ಗ್ರಾಪಂಗೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ. ಇದರ ಬಗ್ಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.ಎಚ್. ಶಾಂತಮ್ಮ,
ಶಾಲೆ ಮುಖ್ಯ ಶಿಕ್ಷಕರು. ಸುಧಾಕರ್ ಮಣ್ಣೂರು