ಕುರುಗೋಡು: ಮುದ್ದಟನೂರು ಗ್ರಾಪಂ ವ್ಯಾಪ್ತಿಯ ಶಾಲೆಗೆ ಬರುವ ಸರಕಾರಿ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಪೌಷ್ಠಿಕಾಂಶ ಉಳ್ಳ ಆಹಾರ, ಹಾಲು ಸೇರಿದಂತೆ ಇತರೆ ಆಹಾರ ಪದಾರ್ಥಗಳನ್ನು ನೀಡುವಲ್ಲಿ ಶಿಕ್ಷಕರು ಎಸ್‌ಡಿಎಂಸಿ ಸಮಿತಿಯವರು ತಾರತಮ್ಯ ತೋರದೆ ತಲುಪಿಸಬೇಕು ಎಂದು ಗ್ರಾಪಂ ಅಧ್ಯಕ್ಷ ಕೆ. ಶ್ರೀನಿವಾಸ ರಾವ್ ಹೇಳಿದರು.
ಸಮೀಪದ ಮುದ್ದಟನೂರು ಗ್ರಾಪಂ ಅವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಹಕ್ಕುಗಳ ಗ್ರಾಮಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈಗಾಗಲೇ ಮಕ್ಕಳ ಹಕ್ಕುಗಳ ಗ್ರಾಮಸಭೆಯಲ್ಲಿ ಹಲವು ಶಾಲೆ ಮಕ್ಕಳು ಶಾಲೆಯಲ್ಲಿ ಕೊಡುವ ಹಾಲಿನಲ್ಲಿ ಸಕ್ಕರೆ ಮಿಶ್ರಣವಿಲ್ಲದೆ ನೀರು ಮಿಕ್ಸ್ ಮಾಡುತ್ತಿದ್ದು ಹಾಲು ಸಪ್ಪಗೆ ಇರುತ್ತದೆ ಎಂದು ದೂರು ನೀಡಿದ್ದಾರೆ. ಇತರ ತಾರತಮ್ಯ ತೋರದೆ ಸರಕಾರದಿಂದ ಬರುವ ಪ್ರತಿಯೊಂದು ಯೋಜನೆಯನ್ನು ಮಕ್ಕಳಿಗೆ ತಲುಪಿಸಿ ಇತರ ಸಮಸ್ಯೆಗಳು ಮರುಕಳಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸ.ಪ್ರೌ. ಶಾಲೆ ಹಿಂಭಾಗದಲ್ಲಿ ಜಂಗಲ್ ಕಟಿಂಗ್‌ಗಳು ಬೆಳೆದಿದ್ದರಿಂದ ಮಕ್ಕಳಿಗೆ ತೊಂದರೆಯಾಗುತ್ತಿದೆ. ಎಸ್‌ಡಿಎಂಸಿ ಸಮಿತಿಯವರು ನಿರ್ವಹಣೆ ಮಾಡಿ ಸ್ವತ್ಛತೆ ಕಾಪಾಡಲಿ ಎಂದು ತಿಳಿಸಿದರು. ಇನ್ನೂ ಶಾಲಾ ಅವಧಿ ವರ್ಷಗಳು ಕೊನೆಗೊಂಡು ತರಗತಿಗಳು ಮುಗಿಯುತ್ತಿದ್ದರೂ ವಿದ್ಯಾರ್ಥಿಗಳಿಗೆ ಶೂ, ಪಠ್ಯಪುಸ್ತಕಗಳು, ಕ್ರೀಡಾ ಸಾಮಗ್ರಿಗಳು, ಸಮವಸ್ತ್ರ ವಿತರಣೆ ಮಾಡಿಲ್ಲ. ಇದರ ಬಗ್ಗೆ ಶಾಲೆ ಮೇಲುಸ್ತುವಾರಿ ಸಮಿತಿಗಳು ಜಾಗೃತಿ ತೋರದೆ ಇರುವುದು ನಿಜಕ್ಕೂ ದುರಂತ ಎಂದು ವಿಷಾದ ವ್ಯಕ್ತಪಡಿಸಿದರು.
ನಂತರ ಶಾಲೆಗೆ ತಡೆಗೋಡೆ, ಶೌಚಾಲಯ, ಕೊಠಡಿಗಳು, ಬೆಂಚ್‌ಗಳು, ಹಾಲು ಕುಡಿಯುವುದಕ್ಕೆ ಲೋಟಗಳು, ತಟ್ಟೆಗಳು, ಶಾಲೆಗೆ ಸಂಪರ್ಕಗೊಂಡಿರುವ ರಸ್ತೆಗಳ ದುರಸ್ತಿ, ಕುಡಿಯುವ ನೀರಿನ ವ್ಯವಸ್ಥೆ, ಶಿಕ್ಷಕರ ಸಮಸ್ಯೆ ಸೇರಿದಂತೆ ಇತರೆ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಿಸಿದ ಅ ಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ಶೀಘ್ರವೇ ಬಗೆಹರಿಸುವಂತೆ ತಿಳಿಸಲಾಗುವುದು. ಗ್ರಾಪಂ ಮಟ್ಟದಲ್ಲಿ ಬಗೆಹರಿಯುವ ಸಮಸ್ಯೆಗಳನ್ನು ಇನ್ನೂ ಎರಡು ಮೂರು ದಿನಗಳಲ್ಲಿ ಬಗೆಹರಿಸಲಾಗುವುದು ಎಂದು ತಿಳಿಸಿದರು.
ಪಿಡಿಒ ಬಸವರಾಜ ಮತ್ತು ಮಕ್ಕಳ ರಕ್ಷಣಾ ಘಟಕದ ತಾಲೂಕು ಸಂಯೋಜಕ ಉಮೇಶ್ ಮಾತನಾಡಿದರು. ಸಭೆಯಲ್ಲಿ ಹಲವು ಶಾಲೆಯ ವಿದ್ಯಾರ್ಥಿಗಳು ಸಮಸ್ಯೆಗಳನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿ ನಿರ್ಮಲಾ, ಗ್ರಾಪಂ ಉಪಾಧ್ಯಕ್ಷೆ ಮಲ್ಲಮ್ಮ, ಗ್ರಾಪಂ ಸರ್ವ ಸದಸ್ಯರು ಹಾಗೂ ಶಾಲೆ ಶಿಕ್ಷಕ ವೃಂದದವರು ಮತ್ತು ವಿದ್ಯಾರ್ಥಿಗಳು, ಗ್ರಾಪಂ ಸಿಬ್ಬಂದಿ ಇದ್ದರು.