Advertisement

ಅಂಗನವಾಡಿ ಕೇಂದ್ರ ಶಿಥಿಲ

11:38 AM Aug 19, 2019 | Naveen |

ಕುರುಗೋಡು: ಪಟ್ಟಣ ಸಮೀಪದ ಚಿಟಿಗಿನಹಾಳ್‌ ಗ್ರಾಮದಲ್ಲಿ ಸುಮಾರು 150ರಿಂದ 160 ಕುಟುಂಬಗಳು ವಾಸವಿದ್ದು, 500ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಒಂದೇ ಅಂಗನವಾಡಿ ಕೇಂದ್ರವಿದ್ದು ನಿತ್ಯ 30ರಿಂದ 40 ಮಕ್ಕಳು ವಿದ್ಯಾಭ್ಯಾಸಕ್ಕೆ ಬರುತ್ತಾರೆ. ಆದರೆ ಅಂಗನವಾಡಿ ಕೇಂದ್ರದ ಕಟ್ಟಡಗಳು ಶಿಥಿಲಗೊಂಡಿವೆ ಪೋಷಕರು ಆತಂಕದಲ್ಲಿಯೇ ಮಕ್ಕಳನ್ನು ಶಾಲೆಗೆ ಕಳಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಕೇಂದ್ರದ ಮೇಲ್ಛಾವಣಿ ಶಿಥಿಲಾವಸ್ಥೆಗೆ ತಲುಪಿದ್ದು, ಅದರಲ್ಲಿರುವ ಮಕ್ಕಳು ಅಂಗೈಯಲ್ಲಿ ಜೀವ ಹಿಡಿದುಕೊಂಡು ಪಾಠ ಕೇಳುವಂತಾಗಿದೆ. ಮಳೆಗಾಲದಲ್ಲಿ ಕೊಠಡಿಗಳ ಮೇಲ್ಛಾವಣಿ ಅಲ್ಲಲ್ಲಿ ಸೋರಿ ಸಿಮೆಂಟ್ ಪದರು ಕೆಳಗೆ ಬೀಳಲು ತೊಡಗಿದೆ. ಇದರಿಂದ ಕೇಂದ್ರದಲ್ಲಿ ಮಕ್ಕಳನ್ನು ಕೂಡಿಸಿಕೊಳ್ಳುವುದು ಕಷ್ಟಕರವಾಗಿದೆ.

ಕೇಂದ್ರದಲ್ಲಿ ದಾಸ್ತಾನು ಕೊಠಡಿ ಸಮಸ್ಯೆ: ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಸರಿಯಾಗಿ ಅಡುಗೆ ಕೋಣೆ ಮತ್ತು ದಾಸ್ತಾನು ಸಂಗ್ರಹಿಸಲು ಕೊಠಡಿ ಇಲ್ಲದಂತಾಗಿದೆ. ಇದರಿಂದ ಮಕ್ಕಳಿಗೆ, ಗರ್ಭಿಣಿಯರಿಗೆ, ಬಾಣಂತಿಯರಿಗೆ ಆಹಾರ ತಯಾರಿಸುವುದೂ ಒಂದು ಕಡೆ ಕಷ್ಟಕರವಾದರೆ ಇನ್ನೊಂದು ಕಡೆ ಕೇಂದ್ರದಲ್ಲಿ ಮಕ್ಕಳಿಗೆ ಪಾಠ ಹೇಳಿಕೊಡುವ ಸ್ಥಳದಲ್ಲಿ ಅಡುಗೆ ಮಾಡಬೇಕಾದ ಅನಿವಾರ್ಯತೆಯಿದೆ.

ಆಟದ ಮೈದಾನ ಮರೀಚಿಕೆ: ಕೇಂದ್ರಕ್ಕೆ ಬರುವ ಮಕ್ಕಳಿಗೆ ಸರಿಯಾಗಿ ಆಟವಾಡಲು ಕೇಂದ್ರದ ಮುಂಭಾಗ ಮೈದಾನವಿಲ್ಲದೆ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಆಟ-ಪಾಠಕ್ಕೂ ಕೇಂದ್ರದ ಒಳಗಡೆ ಮಕ್ಕಳು ಕಾಲ ಕಳೆಯಬೇಕಾಗಿದೆ. ಮಕ್ಕಳು ಕೇಂದ್ರದ ಹೊರಗಡೆ ಬಂದರೆ ಪಕ್ಕದಲ್ಲಿ ರಸ್ತೆ, ಮುಂಭಾಗದಲ್ಲಿ ಚರಂಡಿಗಳಿವೆ. ಇದರ ದುರ್ವಾಸನೆಯಿಂದ ಕೇಂದ್ರದ ಸಹಾಯಕಿ ಮತ್ತು ಮಕ್ಕಳಿಗೆ ನೆಮ್ಮದಿಯಿಲ್ಲದಂತಾಗಿದೆ.

ಬಳಕೆಯಾಗದ ಶೌಚಗೃಹ: ಮಕ್ಕಳಿಗೆ ಕೇಂದ್ರದ ಮುಂಭಾಗದಲ್ಲಿ ಮೈದಾನವಿಲ್ಲದೆ ಇತರೆ ಚಟುವಟಿಕೆಗೆ ವ್ಯವಸ್ಥೆಯಿಲ್ಲದ ಕಾರಣ ಮಕ್ಕಳಿಗೆ ಗ್ರಾಪಂ ಇಲಾಖೆ ವತಿಯಿಂದ ಅದರ ಪಕ್ಕದಲ್ಲಿ ಶೌಚಾಲಯ ನಿರ್ಮಿಸಿದ್ದು ಅದು ಬಳಕೆಯಾಗದೆ ನನೆಗುದಿಗೆ ಬಿದ್ದಿದೆ. ಅದಕ್ಕೆ ಸರಿಯಾಗಿ ಕೀ ವ್ಯವಸ್ಥೆ ಇಲ್ಲದೆ ಅದರಲ್ಲಿ ಹೊರಗಡೆ ಜನರು ಬಂದು ನಿತ್ಯ ಶೌಚ ಮಾಡಿ ಗಬ್ಬು ಎಬ್ಬಿಸುತ್ತಿದ್ದಾರೆ. ಇದರಿಂದ ಕೇಂದ್ರದಲ್ಲಿರುವ ಮಕ್ಕಳಿಗೆ ಅಶುಚಿತ್ವ ವಾತವಾರಣ ಉಂಟಾಗಿದೆ.

Advertisement

ಚಿಟಿಗಿನಹಾಳ್‌ ಗ್ರಾಮದಲ್ಲಿ ಸುಮಾರು 1999ರಲ್ಲಿ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದೆ. ಗ್ರಾಮಕ್ಕೆ ಅದು ಒಂದೇ ಅಂಗನವಾಡಿ ಕೇಂದ್ರ. ಸರಿಯಾದ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪಿದೆ. ಮಳೆ ಬಂದರೆ ಎಲ್ಲೆಂದರಲ್ಲಿ ಸೋರುತ್ತದೆ. ಇದು ಮಕ್ಕಳ ನೆಮ್ಮದಿ ಕೆಡಿಸಿದೆ.
ಕೆ. ಭೀಮಣ್ಣ,
ಗ್ರಾಮದ ಯುವ ಮುಖಂಡ, ಚಿಟಿಗಿನಹಾಳ್‌

Advertisement

Udayavani is now on Telegram. Click here to join our channel and stay updated with the latest news.

Next