ಕುರುಗೋಡು: ದೇಶದಲ್ಲಿ ಸಾವಯವ ಕೃಷಿಯನ್ನು ಉತ್ತಮಗೊಳಿಸಲು ಆಧುನಿಕ ತಂತ್ರಜ್ಞಾನದ ಬಳಕೆ ಅವಶ್ಯಕತೆ ಇದೆ ಎಂದು ಸಹಾಯಕ ಕೃಷಿ ನಿರ್ದೇಶಕ ಹುಸೇನ್ ಸಾಬ್ ಹೇಳಿದರು.
ಸಮೀಪದ ಗೇಣಿಕೆಹಾಳ ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ 2019-20ನೇ ಸಾಲಿನ ಕೃಷಿ ಅಭಿಯಾನ ಆಂದೊಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇವತ್ತಿನ ದಿನಗಳಲ್ಲಿ ಕೃಷಿ ಪದ್ಧತಿ ಸುಧಾರಿಸುವ ಪ್ರಯತ್ನವನ್ನು ಕೃಷಿ ಇಲಾಖೆಗಳು ನಾನಾ ಯೋಜನೆ ರೂಪಿಸುತ್ತಿವೆ. ಸುಸ್ಥಿರ ಕೃಷಿಯಿಂದ ಮಾತ್ರ ನಿಜವಾದ ಸಾಮಾಜಿಕ ಅಭಿವೃದ್ಧಿ ಸಾಧ್ಯ. ಇಂದು ನಾವು ಕೃಷಿ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಮಿಶ್ರ ಬೇಸಾಯ ಪದ್ಧತಿಯಿಂದ ಪ್ರತಿಯೊಬ್ಬ ರೈತ ಮುಂದೆ ಬರಲು ಸಾಧ್ಯ. ಕೃಷಿಯಲ್ಲಿ ಸಾವಯವ ಗೊಬ್ಬರವನ್ನು ಉಪಯೋಗಿಸಿ ಉತ್ತಮ ಬೆಳೆ ತೆಗೆದರೆ ಆರೋಗ್ಯದಿಂದ ಬದುಕಬಹುದು ಎಂದು ತಿಳಿಸಿದರು.
ನಂತರ ಜಿಲ್ಲಾ ಕೃಷಿ ಉಪ ನಿರ್ದೇಶಕ ಶಿವನಗೌಡ ಪಾಟೀಲ ಮಾತನಾಡಿ, ಪ್ರತಿಯೊಬ್ಬ ರೈತರು ನೀರಿನಿಂದ ಭತ್ತ ಬೆಳೆಯಲು ಮುಂದಾಗದೆ ಕೂರಿಗೆ ಭತ್ತ ನಾಟಿ ಮಾಡಲು ಮುಂದಾಗಬೇಕು. ನೀರಿನಿಂದ ಭತ್ತ ನಾಟಿ ಮಾಡಿದರೆ ಭತ್ತ ಕಟಾವಿಗೆ ಬರುವತನಕ ಅತೀ ಹೆಚ್ಚು ನೀರು ಸಂಗ್ರಹ ಮಾಡಬೇಕು. ಜತೆಗೆ ಹೆಚ್ಚು ಔಷಧ, ರಸಗೊಬ್ಬರ ಸಿಂಪರಿಸಬೇಕು ಎಂದರು.
ಶಾಸಕ ಜೆ.ಎನ್. ಗಣೇಶ ಕೃಷಿ ಪದ್ಧತಿ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ವಿದ್ಯುತ್ ಕೈಕೊಟ್ಟು ಗೊಂದಲ ಸೃಷ್ಟಿಸಿತು. ನಂತರ ಜನರೇಟರ್ ಶುರು ಮಾಡಿ ಶಾಸಕರ ಭಾಷಣ ಪ್ರಾರಂಭವಾಯಿತು. ತರಬೇತಿ ಸಂಯೋಜಕ ರವಿ ಶಂಕರ ಮಾತನಾಡಿದರು. ಕೃಷಿ ಅಭಿಯಾನ ಅಂದೊಲನಕ್ಕೆ ಬರುವ ಸುತ್ತಮುತ್ತ ಗ್ರಾಮದ ರೈತರಿಗೆ ಸಬ್ಸಿಡಿ ದರದಲ್ಲಿ ದೊರೆಯುವ ಕೃಷಿ ಚಟುವಟಿಕೆಯ ಯಂತ್ರೋಪಕರಣಗಳು ಹಾಗೂ ಗನ್ ಪಂಪ್‌ಗ್ಳು, ಅಯಿಲ್ ಪಂಪ್‌ಗ್ಳು, ಟಿಲ್ಲರ್, ಕುಂಟೆ ಇತರೆ ವಸ್ತುಗಳನ್ನು ಪ್ರದರ್ಶಿಸಲಾಯಿತು.
ಜಿಪಂ ಸದಸ್ಯೆ ಬನಶಂಕರಿ ವೀರೇಂದ್ರರೆಡ್ಡಿ. ಗ್ರಾಪಂ ಅಧ್ಯಕ್ಷ ಶಾಂತನಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಬಂಗಿಮಲ್ಲಯ್ಯ. ಕುರುಗೋಡು ಕೃಷಿ ಅಧಿಕಾರಿ ದೇವರಾಜ, ಮುಖಂಡರಾದ ಶರಣಗೌಡ, ನಾಯಕರ ಕರೆಪ್ಪ, ದೊಡ್ಡಬಸಪ್ಪ, ವಾಲ್ಮಿಕಿ ದೊಡ್ಡಬಸಪ್ಪ, ಉಮಾಪತಿ ಗೌಡ, ವೀರೇಶ, ಧರ್ಮವೀರೇಗೌಡ, ಎಸ್.ಬಸವನಗೌಡ ಸೇರಿ ಸುತ್ತಮುತ್ತ ಗ್ರಾಮದ ಮುಖಂಡರು, ರೈತರು ಇದ್ದರು.