ಸಿಂದಗಿ: ಕಬ್ಬಿನ ಬೆಲೆ ನಿಗದಿ ಪಡಿಸುವಲ್ಲಿ ರೈತರ ಬಗ್ಗೆ ಸರಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ಅಧ್ಯಕ್ಷ ಕುರುಬೂರ ಶಾಂತಕುಮಾರ ಆರೋಪ ಮಾಡಿದರು.
ಶನಿವಾರ ಪಟ್ಟಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರಕಾರಗಳಿಂದ ಕಬ್ಬು ಬೆಳೆಗಾರರ ಮೇಲೆ ನಿರ್ಲಕ್ಷ್ಯ ಧೋರಣೆ ನಡೆಯುತ್ತಿದೆ. ಸರಕಾರ ಸಕ್ಕರೆ ಕಾರ್ಖಾನೆಗಳ ಕೈಗೊಂಬೆಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕಬ್ಬು ಲಾಭದಾಯಕ ಬೆಳೆ ಆದರೆ, ರೈತರ ಬದಲಿಗೆ ಕಾರ್ಖಾನೆಯರಿಗೆ ಲಾಭ ಆಗುತ್ತಿದೆ. ಕಬ್ಬಿನ ಬೆಳೆಗೆ ರೈತರು ಮಾಡುವ ಖರ್ಚಿನ ಬಗ್ಗೆ ಸರಕಾರ ಗಮನ ನೀಡುತ್ತಿಲ್ಲ. ಪ್ರತಿ ಟನ್ ಕಬ್ಬು ಬೆಳೆಯಲು 3200 ರೂ. ವೆಚ್ಚವಾಗುತ್ತದೆ ಎಂದು ಕೃಷಿ ಇಲಾಖೆ ಹೇಳುತ್ತದೆ. ಆದರೆ, ಸರಕಾರ ಕಡಿಮೆ ಬೆಲೆ ನಿಗದಿ ಪಡಿಸುತ್ತದೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ ಎಂದರು.
ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡಬೇಕು, ಕನಿಷ್ಠ ಬೆಂಬಲ ಬೆಲೆ ಕಾತರಿ ಕಾನೂನು ಜಾರಿಗೆ ತರಬೇಕು, ವಿದ್ಯುತ್ ಖಾಸಗಿಕರಣ ನಿಲ್ಲಿಸಬೇಕು, ಕಬ್ಬಿನ ಎಫ್‌ಆರ್‌ಪಿ ದರ ಪುನರ್ ಪರಿಶೀಲಿಸಬೇಕು, ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ದರ ಇಳಿಸಬೇಕು ಎಂದು ಒತ್ತಾಯಿಸಿ ಸೆ. 27 ರಂದು ಕರ್ನಾಟಕ ಬಂದ್ ಆಚರಿಸಲಾಗುವುದು. ಆದ್ದರಿಂದ ಕಬ್ಬು ಬೆಳೆಗಾರರು ನಿಮ್ಮ ಗ್ರಾಮ, ಪಟ್ಟಣಗಳಲ್ಲಿ ಬಂದ್ ಗೆ ಬೆಂಬಲಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನಕಾರ್ಯದರ್ಶಿ ವೀನಗೌಡ ಪಾಟೀಲ, ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಹೂಗಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಹಳ್ಳಿ ದೇವರಾಜ, ತಾಲೂಕಾ ಅಧ್ಯಕ್ಷ ದೌಲತರಾಯ ಬಿರಾದಾರ ಸೇರಿದಂತೆ ಚಿಕ್ಕಹವಳಗಿ, ಕುಮಸಗಿ, ಬಗಲೂರ, ಕಡ್ಲೇವಾಡ ಗ್ರಾಮದ ಕಬ್ಬು ಬೆಳೆಗಾರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.